ಮಂಗಳೂರು: ಮಂಗಳೂರಿನಲ್ಲಿ ಕೆಂಪು ಕಲ್ಲು, ಮರಳು ಸಮಸ್ಯೆ ಶೀಘ್ರದಲ್ಲಿಯೇ ಪರಿಹಾರವಾಗಲಿದ್ದು, ಈ ಬಗ್ಗೆ ಈಗಾಗಲೇ ಚರ್ಚೆ ನಡೆದಿದೆ. ಮುಂದಿನ ಸೆ.4ರಿಂದ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಸಮಸ್ಯೆ ಚರ್ಚೆಗೆ ಬರಲಿದ್ದು, ಸದನದಲ್ಲಿ ಒಪ್ಪಿಗೆಯಾದರೆ ಕೆಂಪು ಕಲ್ಲು ಸಮಸ್ಯೆ ಪರಿಹಾರವಾಗಲಿದೆ ಎಂದು ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ಫರೀದ್ ಹೇಳಿದ್ದಾರೆ.
ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತಾಡಿದ ಅವರು, ಕೆಂಪುಕಲ್ಲಿಗೆ ಮೂರು ವರ್ಷದಿಂದ ಲೈಸೆನ್ಸ್ ಇರಲ್ಲಿಲ್ಲ. ಇದ್ದರೂ ಸಿಗುತ್ತಿರಲಿಲ್ಲ. ಅಲ್ಲದೆ ಹಲವಾರು ರೂಲ್ಸ್ ಗಳಿದ್ದವು. ಇದನ್ನೆಲ್ಲಾ ನೋಡಿಕೊಂಡು ಹೋಗುವ ಬದಲು ಪರ್ಮಿಷನ್ ಇಲ್ಲದೆಯೇ ಕಲ್ಲು ತೆಗೆಯುವುದು ಒಳ್ಳೆಯದು ಎಂದು ಇಲ್ಲಿನ ಜನರು ಅದಕ್ಕೆ ಹೊಂದಿಕೊಂಡಿದ್ದರು. ಪರಿಸ್ಥಿತಿ ನಮ್ಮ ಗಮನಕ್ಕೆ ಬಂದಾಗ ಜನರಿಗೆ ಸುಲಭವಾಗಿ ಸಿಗುವಂತೆ ಅಂದರೆ ಅರ್ಜಿ ಕೊಟ್ಟ ತಕ್ಷಣ ಲೈಸೆನ್ಸ್ ಸಿಗುವಂತೆ ಮಾಡುವುದು ಉತ್ತಮ ಎಂಬ ನಿರ್ಧಾರಕ್ಕೆ ಬಂದಿದ್ದೇವೆ. ಬೇರೆ ಕಲ್ಲಿಗೆ ಹಾಕುವ ರೇಟ್ ಈ ಕಲ್ಲಿಗೆ ಹಾಕುವುದು ಬೇಡ. ಬಡವ ಇರಲಿ ಶ್ರೀಮಂತ ಇರಲಿ ಕೆಂಪುಕಲ್ಲಿನಲ್ಲೇ ಮನೆ ಕಟ್ಟುವುದು. ಕೆಂಪು ಕಲ್ಲು ಅಳವಡಿಸದ ಫ್ಲ್ಯಾಟ್ ಕೂಡ ಇಲ್ಲಿ ಯಾರೂ ಖರೀದಿಸುವುದಿಲ್ಲ. ಹಾಗಾಗಿ ಇದು ರಫ್ತಾಗುವ ವಸ್ತು ಅಲ್ಲ ಬದಲಿಗೆ ನಮ್ಮ ಮೂರು ಜಿಲ್ಲೆಗಳಲ್ಲಿ ಮಾತ್ರ ಉಪಯೋಗವಾಗುವಂತ ವಸ್ತು ಎನ್ನುವುದನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.
ವಾಯಿದ ಕಡಿಮೆಗೊಳಿಸಿ, ನಿಯಮಗಳನ್ನು ಸರಳೀಕರಣಗೊಳಿಸಿ, ಅರ್ಜಿ ಹಾಕಿದದವರಿಗೆ ಸುಲಭವಾಗುವಂತೆ ಕಲ್ಲು ತೆಗೆಯಲು ಲೈಸೆನ್ಸ್ ಸಿಗುವ ಹಾಗೆ ವ್ಯವಸ್ಥೆ ಮಾಡಬೇಕಾಗಿದೆ. ಅಲ್ಲದೆ ರಾಯಲ್ಟಿ ರೇಟ್ ಕಡಿಮೆ ಮಾಡಲು ಹಣಕಾಸು ಇಲಾಖೆಯ ಒಪ್ಪಿಗೆ ಬೇಕು. ಷರತ್ತುಗಳನ್ನು ಸರಳೀಕರಣಗೊಳಿಸಲು ಚರ್ಚೆ ನಡೆಯಬೇಕು. ನೆಕ್ಟ್ ಕ್ಯಾಬಿನೆಟ್‌ಗೆ ಈ ವಿಚಾರ ತರಲಾಗುತ್ತಿದೆ. ಸೆ.4ರಂದು ಕ್ಯಾಬಿನೆಟ್‌ನಲ್ಲಿ ಚರ್ಚೆ ನಡೆಯಲಿದೆ. ಈಗಾಗಲೇ ಚರ್ಚೆ ನಡೆಸಿದ್ದನ್ನು ಕ್ಯಾಬಿನೆಟ್‌ಗೆ ತಲಾಗುತ್ತದೆ. ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆಯಾದರೆ ಹೊಸ ರೂಲ್ಸ್ ಜಾರಿಗೆ ಬರುತ್ತದೆ.
ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 60 ಕೋಟಿ ವೆಚ್ಚದಲ್ಲಿ ಹೈ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗುವುದು. ಇಲ್ಲಿ ಎಐ ಆಧಾರಿತ ಹೈ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗುವುದು. ಇದಕ್ಕೆ ಇನ್ಫೋಸಿಸ್ ನಂತಹ ಕಂಪೆನಿಗಳು, ಖಾಸಗಿ ಸಂಘಸಂಸ್ಥೆಗಳು ಸಹಕಾರ ಕೊಟ್ರೆ ಬೇಗ ಕೆಲಸ ಮಾಗುವುದು ಎಂದರು.
ಮಂಗಳೂರಿನಲ್ಲಿ ಕ್ಯಾಬಿನೆಟ್ ಸಭೆ
ಇದುವರೆಗೆ ವಿಜಯಪುರದಲ್ಲಿ ಕ್ಯಾಬಿನೆಟ್ ಸಭೆ ನಡೆದಿದೆ. ಅದೇ ರೀತಿ ಮುಂದಿನ ಬಾರಿ ಚಾಮರಾಜನಾಗರ ಸೇರಿ ಮಂಗಳೂರಿನಲ್ಲೂ ಕ್ಯಾಬಿನೆಟ್ ಸಭೆ ನಡೆಸಲಾಗುವುದು. ಈ ಕಾರ್ಯ ಹಂತ ಹಂತವಾಗಿ ನಡೆಯಲಿದೆ. ಮಂಗಳೂರಿನ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿ ಕ್ಯಾಬಿನೆಟ್ ಸಭೆ ನಡೆಸುವ ಉದ್ದೇಶವಿದ್ದು, ಜನಪ್ರಧಿನಿಧಿಗಳು ಅಧಿಕಾರಿಗಳು ಇಲ್ಲಿನ ಅಭಿವೃದ್ಧಿ ದೃಷ್ಟಿಯಲ್ಲಿರಿಸಿ ಅದನ್ನು ಸಭೆಯಲ್ಲಿ ಮಂಡಿಸಿ ರೂಪುರೇಷೆ ನಡೆಸಬೇಕೆಂದು ಖಾದರ್ ಹೇಳಿದರು.
ಮಂಗಳೂರು ಯಾಕೆ ಬೆಳೆಯುವುದಿಲ್ಲ?
ಗೋವಾ, ಬೇಕಲ್ ಗೆ ಹೋಲಿಸಿದರೆ ಮಂಗಳೂರು ಯಾಕೆ ಅಭಿವೃದ್ಧಿ ಆಗಿಲ್ಲ ಎಂಬ ವಿಚಾರದಲ್ಲಿ ಕಾರಣ ವಿವರಿಸಿದ ಖಾದರ್, ಮೂಲಸೌಕರ್ಯ ವಿಚಾರದಲ್ಲಿ ಇಲ್ಲಿ ಬಂಡವಾಳ ಹೂಡಲು ಬರುವುದು ಕಡಿಮೆ. ಯಾಕೆಂದರೆ ಅದಕ್ಕೆ ಲ್ಯಾಂಡ್ ಬ್ಯಾಂಕ್ ಅಗತ್ಯವಿದೆ. ಕಾಗಾರಿಕಾ ಕಂಪೆನಿಗಳಿಗೆ ಜಾಗ ಮೀಸಲಿಟ್ಟಂತೆ ಮೂಲಸೌಕರ್ಯಕ್ಕೂ ಸೂಕ್ತ ಜಾಗ, ಸೂಕ್ತ ವ್ಯವಸ್ಥೆ ಮಾಡಿಕೊಟ್ಟರೆ ಬಂಡವಾಳ ಹೂಡಿಕೆಯಾಗುತ್ತದೆ. ಅದಕ್ಕಾಗಿ ಒಂದು ಸಿಸ್ಟಂ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ಖಾದರ್ ವ್ಯಕ್ತಪಡಿಸಿದರು.
ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಶನ್ (ಸಿಪಿಎ)ಯ ಭಾರತೀಯ ಪ್ರಾದೇಶಿಕ ಸಮ್ಮೇಳನ ಈ ಬಾರಿ ಬೆಂಗಳೂರಿನಲ್ಲಿ ಸೆ. 11ರಿಂದ 14ರವರೆಗೆ ನಡೆಯಲಿದೆ. ಕಾಮನ್‌ವೆಲ್ತ್‌ನ 9 ದೇಶಗಳ ಸ್ಪೀಕರ್‌ಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಮೂರು ದಿನಗಳ ಸಮ್ಮೇಳನದ ಬಳಿಕ ಸೆ. 14ರಂದು ಚಾಮುಂಡಿ ಹಿಲ್ಸ್, ಮೈಸೂರು ಅರಮನೆ ಮತ್ತು ಬೃಂದಾವನ ಗಾರ್ಡನ್‌ಗೆ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಮೇಲುಸ್ತುವಾರಿಯಲ್ಲಿ ಈ ಸಮ್ಮೇಳನ ನಡೆಯಲಿದೆ ಎಂದು ಯು.ಟಿ.ಖಾದರ್ ತಿಳಿಸಿದರು.
ಇದೇ ವೇಳೆ ಅವರು ಈ ಬಾರಿ ಕ್ಯಾಬಿನೆಟ್‌ನಲ್ಲಿ ಕಾಲಹರಣ ನಡೆಯದೆ ವಿಷಯಾಧಾರಿತ ಚರ್ಚೆ ನಡೆದಿದೆ. ಇದು ಉತ್ತಮ ಬೆಳವಣಿಗೆ ಎಂದರು.