ಮಂಗಳೂರು: ವ್ಯಾಪಾರದಲ್ಲಿ ಅಪಾರ ನಷ್ಟ ಮತ್ತು ಕಿರುಕುಳ ತಾಳಲಾರದೆ ಬೀದಿಬದಿಯಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡು ಜೀವಿಸುತ್ತಿದ್ದ ಮಹಿಳೆ ಶಾಲಿನಿ (48) ಎಂಬವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೋಂದೆಲ್ ವ್ಯಾಪ್ತಿಯಲ್ಲಿ ಸಂಭವಿಸಿದೆ. ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಮಂಗಳೂರಿನ ಎ.ಜೆ. ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮಹಿಳೆಯ ಆತ್ಮಹತ್ಯೆ ಯತ್ನಕ್ಕೆ ರಿಕ್ಷಾ ಚಾಲಕ ಮಾಲಕರ ಸಂಘ ಹಾಗೂ ಪಾಲಿಕೆ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ದಕ್ಷಿಣ ಕನ್ನಡ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘ ಹಾಗೂ ಸಿಐಟಿಯು ಆರೋಪಿಸಿದೆ.
ಶಾಲಿಯವರು ಕಾವೂರು ಬೋಂದೆಲ್ ರಸ್ತೆಯಲ್ಲಿ ಹಲವು ವರ್ಷಗಳಿಂದ ಬೀದಿ ಬದಿಯಲ್ಲಿ ಹೂವಿನ ವ್ಯಾಪಾರ ನಡೆಸಿಕೊಂಡು ಬರುತ್ತಿದ್ದರು. ಆದರೆ ಇತ್ತೀಚೆ ಅದೇ ಜಾಗದಲ್ಲಿ ರಿಕ್ಷಾ ಪಾರ್ಕ್ ನಿರ್ಮಾಣಗೊಂಡಿರುವುದರಿಂದ ಇವರ ಸ್ಟಾಲ್‌ಗೆ ರಿಕ್ಷಾ ಅಡ್ಡ ನಿಂತಿರುವುದರಿಂದ ವ್ಯಾಪಾರ ಆಗದ ನಷ್ಟ ಅನುಭವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದ ಬಿ.ಕೆ. ಇಮ್ತಿಯಾಝ್ ಗಂಭೀರ ಆರೋಪ ಮಾಡಿದ್ದಾರೆ.

ಇಮ್ತಿಯಾಜ್ ಆರೋಪಿಸಿದಂತೆ, ನಗರದ ಬೋಂದೆಲ್ ಜಂಕ್ಷನ್ ಬಳಿ ಏರ್ ಪೋರ್ಟ್ ರಸ್ತೆಯಲ್ಲಿ ಐವನ್ ಡಿಸೋಜಾ ಅನುದಾನದಲ್ಲಿ ವ್ಯಾಪಾರ ರಿಕ್ಷಾ ಪಾರ್ಕ್ 10ರಂದು ಉದ್ಘಾಟನೆಗೊಂಡಿತ್ತು. ಇದಕ್ಕಿಂದ ಮುಂಚಿನಿಂದಲೂ ಶಾಲಿನಿ ಹೂವು ವ್ಯಾಪಾರ ನಡೆಸುತ್ತಿದ್ದರು. ರಿಕ್ಷಾದವರು ಇವರ ಸ್ಟಾಲ್ ಮುಂದೆಯೇ ರಿಕ್ಷಾ ನಿಲ್ಲಿಸಿ ಗ್ರಾಹಕರು ಬರದಂತೆ ತಡೆಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಶಾಲಿನಿ ಕಾವೂರು ಪೊಲೀಸರನ್ನು ಭೇಟಿಯಾಗಿದ್ದರು. ಕಾವೂರು ಪೊಲೀಸರು ಇವರಿಗೆ ವ್ಯಾಪಾರಕ್ಕೆ ಅವಕಾಶ ಕೊಟ್ಟಿದ್ದರು.
ರಿಕ್ಷಾ ಪಾರ್ಕ್ ಉದ್ಘಾಟನೆ ಮಾಡಿದ ಬಳಿಕ ಸ್ಟಾಲ್ ಮುಂದೆ ರಿಕ್ಷಾ ಅಡ್ಡ ನಿಲ್ಲಿಸಿ, ಅವಾಚ್ಯವಾಗಿ ನಿಂದಿಸಿ ಕಿರುಕುಳ ನೀಡುತ್ತಿದ್ದರು. ಈ ರಿಕ್ಷಾ ಪಾರ್ಕ್‌ಗೆ ಪಾಲಿಕೆ ಅಧಿಕಾರಿಗಳು ಅನುಮೋದನೆಯನ್ನೂ ಕೊಟ್ಟಿಲ್ಲ. ಆದರೂ ಅಧಿಕಾರಿಗಳು ಸ್ಟಾಲ್ ತೆಗೆಯಬೇಕು, ಇಲ್ಲವಾದರೆ ಸ್ಟಾಲ್ ತೆಗೆದು ಕ್ರಮ ತೆಗೆದುಕೊಳ್ಳುವುದಾಗಿ ಆರೋಪಿಸಿದ್ದರು. ಹೀಗೆ ಮಹಿಳಾ ಬೀದಿಬದಿ ವ್ಯಾಪಾರಿಗೆ ಆಟೋ ರಿಕ್ಷಾ ಚಾಲಕರ ಸಂಘ ಮತ್ತು ಪಾಲಿಕೆ ಅಧಿಕಾರಿಗಳಿಂದ ಕಳೆದ ಒಂದು ತಿಂಗಳಿಂದ ನಿರಂತರ ತೊಂದರೆ ನೀಡಿ ಮಹಿಳೆಯ ವ್ಯಾಪಾರಕ್ಕೆ ಅಡ್ಡಿಪಡಿಸಲಾಗುತ್ತಿತ್ತು. ವ್ಯಾಪಾರದಿಂದ ಆದ ತೀವ್ರ ನಷ್ಟ ಹಾಗೂ ಕಿರುಕುಳದಿಂದ ಬೇಸತ್ತ ಶಾಲಿನಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೀಗಾಗಿ ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ, ಅಧಿಕಾರಿಯನ್ನು ಅಮಾನತು ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದ ಬಿ.ಕೆ. ಇಮ್ತಿಯಾಝ್ ಆಗ್ರಹಿಸಿದ್ದಾರೆ.