ಕಟೀಲು ಕ್ಷೇತ್ರದ ಮೇಲೂ ಧರ್ಮಸ್ಥಳ ಮಾದರಿ ಅಪಪ್ರಚಾರ ನಡೆದಿತ್ತು: ಹರಿನಾರಾಯಣ ಅಸ್ರಣ್ಣ

“ಧರ್ಮ ತೇಜೋ ಬಲಂ ಬಲಂ“ ಧರ್ಮಜಾಗೃತಿ ಸಭೆ

ಮಂಗಳೂರು: ಇದು ಧರ್ಮಸ್ಥಳ ಕ್ಷೇತ್ರದ ಮೇಲೆ ನಡೆದ ಅಪಪ್ರಚಾರವಲ್ಲ, ಇಡೀ ಹಿಂದೂಗಳ ದೇವಸ್ಥಾನಗಳ ಮೇಲೆ ನಡೆದ ಅಪಚಾರವಾಗಿದೆ. ಈ ಹಿಂದೆ ಇದೇ ರೀತಿ ಕಟೀಲು ದೇವಸ್ಥಾನದ ಮೇಲೂ ದಾಳಿ ನಡೆದಿತ್ತು, ಅಪಪ್ರಚಾರ ಮಾಡಲಾಗಿತ್ತು. ನಾವು ಕೆಲವು ಸಮಯ ಅದರ ವಿರುದ್ಧ ಹೋರಾಟ ಮಾಡಿ ಗೆದ್ದೆವು. ಇಂದು ಧರ್ಮಸ್ಥಳ, ನಾಳೆ ಉಡುಪಿ, ಕಟೀಲು ದೇವಸ್ಥಾನಗಳ ಮೇಲೂ ಇವರು ದಾಳಿ ಮಾಡಬಹುದು. ಇದನ್ನು ಸಮಸ್ತ ಹಿಂದೂಗಳು ಒಟ್ಟು ಸೇರಿ ವಿರೋಧಿಸಬೇಕು ಎಂದು ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಹರಿನಾರಾಯಣ ಅಸ್ರಣ್ಣ ನುಡಿದರು.

ಅವರು ಮಂಗಳೂರಿನ ಪುರಭವನದಲ್ಲಿ ನಡೆಯುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳವನ್ನು ಗುರಿಯಾಗಿಸಿ ನಡೆಯುತ್ತಿರುವ ಅಪಪ್ರಚಾರಗಳನ್ನು ಖಂಡಿಸಿ, ದಕ ಜಿಲ್ಲಾ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆಯ ವತಿಯಿಂದ ನಡೆದ ʼಧರ್ಮ ತೇಜೋ ಬಲಂ ಬಲಂʼ ಧರ್ಮಜಾಗೃತಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ನಮ್ಮ ತುಳುನಾಡಿನ ಸಂಸ್ಕೃತಿಯಲ್ಲಿ ಕೆಟ್ಟ ಪದಗಳನ್ನು ಬಳಕೆ ಮಾಡುವ ಬದಲು, ಸಭ್ಯ ಪದಗಳಲ್ಲಿಯೇ ಬಯ್ಯುವುದನ್ನು ರೂಢಿಸಿಕೊಂಡಿದ್ದರು. ನಮ್ಮ ಸಂಸ್ಕೃತಿ, ಧರ್ಮ ಅದೇ ರೀತಿ ನಡೆದುಕೊಂಡು ಬಂದಿದೆ. ಆದರೆ ಇಂದು ನಾನು ಧರ್ಮಸ್ಥಳದ ಬಗ್ಗೆ ನಡೆಯುತ್ತಿರುವ ಅಪಪ್ರಚಾರಗಳು ಕೇಳವುದನ್ನೇ ನಿಲ್ಲಿಸಿಬಿಟ್ಟೆ. ಯಾಕೆಂದರೆ ಅದನ್ನು ಕೇಳಲು ಸಹ ಸಾಧ್ಯವಿಲ್ಲ, ಇನ್ನೊಂದು ಸಲ ಕೇಳುವುದಿಲ್ಲ, ನೋಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದು ಬಿಟ್ಟೆ. ಇದು ಕೇವಲ ಖಾವಂದರಿಗೆ ಮಾಡಿದ ಅಪಚಾರ ಎಂದು ಭಾವಿಸಬಾರದು. ಇದು ಧರ್ಮಸ್ಥಳ ಕ್ಷೇತ್ರಕ್ಕೆ ಮಾಡಿದ ಅಪಮಾನ. ಇದೇ ರೀತಿ ಕಟೀಲು ಕ್ಷೇತ್ರದ ಮೇಲೂ ನಡೆದಿತ್ತು. ಆದರೆ ಅದು ಸಿವಿಲ್‌ ಮ್ಯಾಟರ್‌ ಆಗಿದ್ದರಿಂದ ಸರಿಯಾದ ದಾಖಲೆ ಕೊಟ್ಟು ಅವರ ಬಾಯಿ ಮುಚ್ಚಿಸಿದೆವು. ಆದರೆ ಇಂದು ಕ್ರಿಮಿನಲ್‌ ಸೇರಿಸಿ ಅಪಪ್ರಚಾರ ಮಾಡುತ್ತಿದ್ದಾರೆ. ಇಂದು ಧರ್ಮಸ್ಥಳ ನಾಳೆ ಕಟೀಲು ಉಡುಪಿಗೂ ಬರುತ್ತಾರೆ. ದೇವಸ್ಥಾನಗಳನ್ನು ನಾಶಪಡಿಸಬೇಕೆಂಬುವುದು ಅವರ ಗುರಿ ಎಂದರು.

ಮೊದಲು ಶಿವ ಪಂಚಾಕ್ಷರಿ ಜಪವನ್ನು ಸಾಮೂಹಿಕವಾಗಿ ಜಪಿಸಲಾಯಿತು. ಭಜನೆ, ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಪ್ರದೀಪ್ ಕುಮಾರ್ ಕಲ್ಕೂರ ಪ್ರಾಸ್ತಾವಿಕ ಮಾತನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ನಳಿನ್ ಕುಮಾರ್ ಕಟೀಲ್, ಹರಿನಾಯರಾಯಣ ಅಸ್ರಣ್ಣ, ಶರವು ರಾಘವೇಂದ್ರ ಶಾಸ್ತ್ರೀ, ಎಂ.ಬಿ. ಪುರಾಣಿಕ್, ನವೀನ್ ಚಂದ್ರ ಸುವರ್ಣ, ಹರಿಕೃಷ್ಣ ಪುನರೂರು, ನಾಗರಾಜ್ ಶೆಟ್ಟಿ, ಸತೀಶ್ ಕುಂಪಲ, ಹರಿಕೃಷ್ಣ ಬಂಟ್ವಾಳ, ಹೆಚ್.ಕೆ. ಪುರುಷೋತ್ತಮ್, ಕೆ.ಸಿ. ನಾಯಕ್, ಭರತ್ ಕುಮಾರ್ ಉಳ್ಳಾಲ, ಜಯರಾಜ್ ಸೋಮಸುಂದರಂ, ಉದಯ ಪೂಜಾರಿ, ಅರುಣ್ ಐತಾಳ್, ಪವಿತ್ರ ಗಟ್ಟಿ ಉಳ್ಳಾಲ, ಅಣ್ಣಯ್ಯ ಕುಲಾಲ್, ಸುರೇಶ್ ಭಟ್ನಗರ್, ಗಿರೀಶ್ ಯುಕೆ, ದುಗ್ಗಣ್ಣ ಸಾವಂತರು, ಸಂತೋಷ್ ಕುಮಾರ್ ಬೋಳಿಯಾರ್, ಪ್ರದೀಪ್ ಕುಮಾರ್ ಕಲ್ಕೂರ, ಮೋನಪ್ಪ ಭಂಡಾರಿ, ಮಮತಾ ಗಟ್ಟಿ, ಶರಣ್ ಪಂಪ್ ವೆಲ್ ಮತ್ತಿತರರು ಉಪಸ್ಥಿತರಿದ್ದರು.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!