ಮಂಗಳೂರು: ಅನೇಕ ಕಡೆ ದೇವಸ್ಥಾನದಲ್ಲಿ ಪೂಜೆ ಮಾಡುವವರೂ ಪೂಜಾರಿ ಎಂದು ಗುರುತಿಸಿಕೊಂಡಿರುವುದರಿಂದ ಈ ಸಲದ ಜನಗಣತಿಯಲ್ಲಿ ನಾವು ʻಜಾತಿ’ ಎಂಬ ಕಾಲಂನಲ್ಲಿ ಕಡ್ಡಾಯವಾಗಿ ʻಬಿಲ್ಲವ’ ಎಂದೇ ನಮೂದಿಸಬೇಕು ಎಂದು ಬಿಲ್ಲವ ಮುಖಂಡರು ಆಗ್ರಹಿಸಿದ್ದಾರೆ.
ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಲ್ಲವ ಮುಖಂಡರು, ಸರಕಾರದ ಎಲ್ಲಾ ಮೀಸಲಾತಿ, ಸವಲತ್ತು ಸೌಲಭ್ಯಗಳು ಜನಸಂಖ್ಯೆಯ ಆಧಾರದ ಮೇಲೆಯೇ ನಿರ್ಧಾರ ಆಗುತ್ತದೆ. ನಮ್ಮ ಹೆಸರಿನ ಜೊತೆಗೆ ನಾವು ನಮ್ಮ ‘ಬರಿ’ ನಮೂದಿಸುವ ಪರಿಪಾಠ ಬೆಳೆಸಿಕೊಂಡಿದ್ದರೂ ಜಾತಿ ಎನ್ನುವ ಕಾಲಂನಲ್ಲಿ “ಬಿಲ್ಲವ” ಎಂಬ ಹೆಸರಿನಿಂದಲೇ ಗುರುತಿಸಿಕೊಂಡು ನಮ್ಮ ಸಮಾಜದ ಸರಿಯಾದ ಜನಸಂಖ್ಯೆಯ ಲೆಕ್ಕ ಸಿಗಬೇಕೆಂದು ವಿನಂತಿ ಮಾಡುತ್ತಿದ್ದೇವೆ. ಕಾಂತರಾಜು ಆಯೋಗದ ವರದಿಯಲ್ಲಿ ಸರಕಾರದ ಈಡಿಗ 26 ಪಂಗಡಗಳಲ್ಲಿ ಬಿಲ್ಲವ ಮತ್ತು ಪೂಜಾರಿ ಎಂದು ಎರಡಾಗಿ ಪ್ರತ್ಯೇಕವಾಗಿ ನಮೂದಿಸಿದ್ದರೂ ಅನೇಕ ಕಡೆ ದೇವಸ್ಥಾನದಲ್ಲಿ ಪೂಜೆ ಮಾಡುವವರೂ ಪೂಜಾರಿ ಎಂದು ಗುರುತಿಸಿಕೊಂಡಿರುವುದರಿಂದ ಕೆಲವೊಂದು ವ್ಯತ್ಯಾಸಗಳಾಗುವ ಸಾಧ್ಯತೆಗಳೂ ಇವೆ.
ಕಾಂತರಾಜು ಆಯೋಗದ ವರದಿಯ ಪ್ರಕಾರ ಬಿಲ್ಲವ ಮತ್ತು ಪೂಜಾರಿ ಈ ಎರಡೂ ಸಮಾಜದ ಹೆಸರಿನಲ್ಲಿ ಗುರುತಿಸಿಕೊಂಡಿರುವ ಸಮಾಜದ ಸಂಖ್ಯೆ ಕೇವಲ 6 ಲಕ್ಷದವರೆಗೆ ಮಾತ್ರ. ಆದರೆ ನಮ್ಮ ಸಮಾಜದ ಜನಸಂಖ್ಯೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿಯೇ ಸುಮಾರು 8 ಲಕ್ಷದಷ್ಟಿದ್ದು ಇದನ್ನು ಹೊರತುಪಡಿಸಿ ರಾಜ್ಯದಲ್ಲಿ ನಾವು ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಬೆಂಗಳೂರು, ಹುಬ್ಬಳ್ಳಿ, ಧಾರವಾಡದಂತಹ ಜಿಲ್ಲೆಗಳಲ್ಲೂ ದೊಡ್ಡ ಪ್ರಮಾಣದಲ್ಲಿದ್ದೇವೆ. ಸರಕಾರದ ಎಲ್ಲಾ ಮೀಸಲಾತಿ, ಸವಲತ್ತು ಸೌಲಭ್ಯಗಳು ಜನಸಂಖ್ಯೆಯ ಆಧಾರದ ಮೇಲೆಯೇ ನಿರ್ಧಾರ ಆಗುವುದರಿಂದ ಈ ಸಲದ ಜನಗಣತಿಯಲ್ಲಿ ನಾವು ʻಜಾತಿ’ ಎಂಬ ಕಾಲಂನಲ್ಲಿ ಕಡ್ಡಾಯವಾಗಿ ‘ಬಿಲ್ಲವ’ ಎಂದೇ ನಮೂದಿಸಬೇಕೆಂದು ವಿನಂತಿಸುತ್ತೇವೆ. ಸಮಾಜದ ಪ್ರಮುಖ ಸಂಘಟನೆಗಳಾದ ರಾಷ್ಟ್ರೀಯ ಬಿಲ್ಲವರ ಮಹಾಮಂಡಲ, ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ, ಗೆಜ್ಜೆಗಿರಿ ಕ್ಷೇತ್ರ, ಕಟಪಾಡಿ ವಿಶ್ವನಾಥ ಕ್ಷೇತ್ರಗಳ ಆಡಳಿತ ಸಮಿತಿಯ ಅಧ್ಯಕ್ಷರುಗಳು ಸೇರಿಕೊಂಡು ಈ ನಿರ್ಧಾರ ತಳೆಯಲಾಗಿದೆ. ಈ ಮೂಲಕ ನಮ್ಮ ಸಮಾಜದ ನಿಖರವಾದ ಜನಸಂಖ್ಯೆಯನ್ನು ಸರಕಾರದ ಗಮನಕ್ಕೆ ತರುವ ಮುಖಾಂತರ ಮುಂದಿನ ದಿನಗಳಲ್ಲಿ ನಮ್ಮ ಸಮಾಜದ ಉಜ್ವಲ ಭವಿಷ್ಯದ ರೂವಾರಿಗಳಾಗಬೇಕೆಂದು ಬಿಲ್ಲವ ಮುಖಂಡರು ವಿನಂತಿಸಿದ್ದಾರೆ.
ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಮೂಲ್ಕಿ ಅಧ್ಯಕ್ಷ ಡಾ. ರಾಜಶೇಖರ್ ಕೋಟ್ಯಾನ್, ಅಖಿಲ ಭಾರತ ಬಿಲ್ಲವರ ಯೂನಿಯನ್ ಮ ನಿಯನ್ (ರಿ.) ಕುದ್ರೋಳಿ ಇದರ ಅಧ್ಯಕ್ಷ ನವೀನ್ ಡಿ. ಡಿ. ಸುವರ್ಣ, ಶ್ರೀಗೋಕರ್ಣನಾಥ ಕ್ಷೇತ್ರ, ಕುದ್ರೋಳಿ ಆಡಳಿತ ಸಮಿತಿ ಅಧ್ಯಕ್ಷ ಯರಾಜ್ ಹೆಚ್. ಸೋಮಸುಂದರಮ್, ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ ಆಡಳಿತ ಸಮಿತಿ ಅಧ್ಯಕ್ಷ ಮಹೇಶ್ ಅಂಚನ್, ಶ್ರೀ ಗೆಜ್ಜೆಗಿರಿ ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ನಾರಾಯಣಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಬಿಲ್ಲವರ ಒಕ್ಕೂಟ, ಚಿಕ್ಕಮಗಳೂರು ಅಧ್ಯಕ್ಷ ಹೆಚ್.ಎಂ. ಸತೀಶ್, ಬಿಲ್ಲವ ಸಮಾಜ ಸೇವಾ ಸಂಘ, ಬ್ರಹ್ಮಾವರ, ಉಡುಪಿ , ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ, ನಾರಾಯಣಗುರು ಅರ್ಬನ್ ಕೋ.ಆಪ್. ಬ್ಯಾಂಕ್ ಲಿ. ಚೆರ್‌ಮೆನ್ ಹರಿಶ್ಚಂದ್ರ ಅಮೀನ್, ಪರಮೇಶ್ವರ ಪೂಜಾರಿ ಮಂಗಳೂರು ಉಪಸ್ಥಿತರಿದ್ದರು.