ಮಂಗಳೂರು: ಗ್ರಾಮ ಪಂಚಾಯತ್‌ಗಳ ಸೇವೆಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ ಇಲಾಖಾದೇಶಗಳನ್ನು ಮಾಡಿದ್ದು ಇವುಗಳ ಅನುಷ್ಟಾನದಲ್ಲಿ ಆಡಳಿತ ಹಾಗೂ ನಾಗರಿಕರು ಅನೇಕ ತೊಂದರೆಗಳನ್ನು ಅನುಭವಿಸುವಂತಾಗಿದೆ. ಅಲ್ಲದೆ ಇದರಿಂದಾಗಿ ಗ್ರಾಮ ಪಂಚಾಯತ್ ವ್ಯವಸ್ಥೆಗೂ ಕೆಟ್ಟ ಹೆಸರು ಬರುವಂತಾಗಿದೆ. ಇದನ್ನು ಸರಳೀಕರಣಗೊಳಿಸುವಂತೆ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ- ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿಗೆ ಮನವಿ ಮಾಡಲಾಗಿದೆ.
ಮನವಿಯಲ್ಲಿ ಏನಿದೆ?
ಮುಖ್ಯವಾಗಿ ಏಕ ನಿವೇಶನ ವಿನ್ಯಾಸ ನಕ್ಷೆ ಅನುಮೋದನೆ ಅಧಿಕಾರವನ್ನು ಗ್ರಾಮ ಪಂಚಾಯತ್ ಬದಲಾಗಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಗೆ ನೀಡಿರುವ ಕುರಿತು ಸ್ವಾಧೀನ ಪ್ರಮಾಣ ಪತ್ರ, ವಿದ್ಯುತ್ ಸಂಪರ್ಕ ನಿರಾಕ್ಷೇಪನ ಪತ್ರ, ಇ-ಸ್ವತ್ತು ತಂತ್ರಾಶದಲ್ಲಿ 11ಬಿ ಖಾತೆ, ರೇರಾ ನೋಂದಣಿಯಾಗಿರುವ ಬಗ್ಗೆ ಪರಿಶೀಲನೆ, ಕೃಷಿ ಭೂಮಿಯಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ಆಸ್ತಿ ಸಂಖ್ಯೆ, ಮನೆ ಅಡಿ ಸ್ಥಳದ ನಿವೇಶನ ಬೇರೆ ಅವರ ಹೆಸರಿನಲ್ಲಿರುವುದರಿಂದ ಕಟ್ಟಡದ ಮಾಲೀಕರ ಮೃತರಾದ ನಂತರ ಕಟ್ಟಡದ ಮಾಲೀಕರ ಹೆಸರನ್ನು ಬದಲಾಯಿಸಲು ಸಾಧ್ಯವಾಗುತ್ತಿಲ್ಲ.
ಕಟ್ಟಡ ಪರವಾನಿಗೆ ಪಡೆಯಲು ಕಟ್ಟಡ ನಕ್ಷೆಗೆ ಸ್ಥಳೀಯ ಯೋಜನಾ ಪ್ರಾಧಿಕಾರದ ತಾಂತ್ರಿಕ ಅಭಿಪ್ರಾಯ ಪಡೆಯಬೇಕಿದೆ. ವಸತಿ ನಿಗಮದ ಮನೆಗಳಿಗೆ ಒಪ್ಪಿಗೆ ಪತ್ರದ ಆಧಾರದಲ್ಲಿ ರಚಿಸಿದ ವಸತಿ ಯೋಜನೆಯಡಿ ಮನೆಗಳಿಗೆ ಕಟ್ಟಡ ಸಂಖ್ಯೆ 94 ಸಿ ಹಕ್ಕುಪತ್ರಗಳಿಗೆ ನಮೂನೆ 9/11 ಅವಕಾಶವಿಲ್ಲ. ಪಂಚತಂತ್ರ 2.0 ತಂತ್ರಾಶದ ಬಾಪೂಜಿ ಸೇವಾ ಕೇಂದ್ರದಲ್ಲಿ ನಿರಾಕ್ಷೇಪಣಾ ಪತ್ರ, ವ್ಯಾಪಾರ ಪರವಾನಿಗೆ, ಕಟ್ಟಡ ಅನುಮತಿ ಪತ್ರ ಇತರೆ ಸೇವೆಗಳನ್ನು ಪಡೆಯಲು ಪಾನ್ ಕಾರ್ಡ ಕಡ್ಡಾಯ ಮಾಡಲಾಗಿದೆ. ಮನೆ ನಂಬ್ರ ನೀಡಲು ಕಾರ್ಮಿಕ ಇಲಾಖೆಯ ನಿರಾಪೇಕ್ಷಣಾ ಪತ್ರ ಇತ್ಯಾದಿಗಳು ಸೇರಿವೆ.
ಆದ್ದರಿಂದ ತಾವು ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ತ ಪರಿಹಾರೋಪಾಯಗಳನ್ನು ಚರ್ಚಿಸಿ ನಿಯಮಗಳನ್ನು ಸರಳೀಕರಣಗೊಳಿಸಿ ಪಂಚಾಯತಿರಾಜ್ ವ್ಯವಸ್ಥೆಯಲ್ಲಿ ನಾಗರಿಕರಿಗೆ ನಂಬಿಕೆ ಮೂಡಿಸಿ ಕ್ಲಪ್ತ ಸಮಯದಲ್ಲಿ ನಾಗರೀಕ ಸೇವೆ ಒದಗಿಸಲು ಸಹಕರಿಸುವಂತೆ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷ ಕೆ. ಸುಭಾಶ್ಚಂದ್ರ ಶೆಟ್ಟಿ ಮನವಿ ಮಾಡಿದ್ದಾರೆ.