ಮಂಗಳೂರು: ವಿಶ್ವ ಹಿಂದು ಪರಿಷತ್ – ಬಜರಂಗದಳ, ಕೋಡಿಕಲ್ ಶಾಖೆ ಮತ್ತು ಶ್ರೀ ಗಣೇಶೋತ್ಸವ ಸಮಿತಿ ಕೋಡಿಕಲ್, ಮಂಗಳೂರು ವತಿಯಿಂದ ಆಗಸ್ಟ್ ತಿಂಗಳ 27 ಬುಧವಾರದಿಂದ 29ರ ಶುಕ್ರವಾರದವರೆಗೆ ಗಣೇಶೋತ್ಸವ ನಡೆಸಲು ನಿರ್ಧರಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ, ಮಾಜಿ ಮೇಯರ್ ಮನೋಜ್ ಕುಮಾರ್ ಹೇಳಿದರು.
ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತಾಡಿದ ಅವರು, ದೇಶದಲ್ಲೇ ಪ್ರಪ್ರಥಮವಾಗಿ ಬೆಳೆದು ನಿಂತದ್ದು ನಮ್ಮ ಕೋಡಿಕಲ್ ಗಣೇಶೋತ್ಸವದ ವೈಭವ. ನಿರಂತರ ಹದಿನಾರು ವರ್ಷಗಳಿಂದ ವಿಶ್ವ ಹಿಂದೂ ಪರಿಷದ್, ಬಜರಂಗದಳ -ಕೋಡಿಕಲ್ ಶಾಖೆ ಮತ್ತು ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಬಹಳ ವಿಜೃಂಭಣೆಯಿಂದ ನಡೆದು ಬಂದಿದೆ. ಸಜ್ಜನ ಸದ್ಭಕ್ತರ ಆಶಯಗಳನ್ನು ಕ್ಷಿಪ್ರವಾಗಿ ನೆರವೇರಿಸುವ ದೇವರೆಂದೇ ಖ್ಯಾತಿಯನ್ನು ಪಡೆದು ಮನೆಮಾತಾಗಿದೆ ಎಂಬುದು ಅತಿಶಯೋಕ್ತಿಯಲ್ಲ ಎಂದರು.
ವೇ। ಮೂ॥ ವಿಶ್ವಕುಮಾರ್ ಜೋಯಿಸರ ಪೌರೋಹಿತ್ಯದಲ್ಲಿ 27ರ ಬೆಳಿಗ್ಗೆ ಗಣೇಶನನ್ನು ಸ್ಥಾಪಿಸಿ 29ರ ಸಾಯಂಕಾಲ ವೈಭವದ ಶೋಭಾಯಾತ್ರೆಯಲ್ಲಿ ಸಾಗಿ ಫಲ್ಗುಣಿ ನದಿಯಲ್ಲಿ ಜಲಸ್ಥಂಭನಗೊಳಿಸಲಾಗುವುದು. “ಕೋಡಿಕಲ್ ಶ್ರೀ ಗಣೇಶೋತ್ಸವ” ಎಂದೇ ಖ್ಯಾತಿಯಾದ ಈ ಸಂಭ್ರಮದಲ್ಲಿ ಮೂರು ದಿನಗಳಲ್ಲಿ ವಿಶೇಷ ಸೇವೆಗಳೊಂದಿಗೆ ವಿಶೇಷ ಧಾರ್ಮಿಕ ಪ್ರಕ್ರಿಯೆಗಳೂ ಜರಗಲಿದೆ ಎಂದರು.
ಶ್ರೀ ಗಣೇಶ ಕ್ರೀಡೋತ್ಸವ ಅಂಗವಾಗಿ ಆಗಸ್ಟ್ 17ರ ರವಿವಾರ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ದೈಹಿಕ ಹಾಗೂ ಬೌದ್ಧಿಕ ಸ್ಪರ್ಧೆಗಳನ್ನು ಕೋಡಿಕಲ್‌ನ ಸರಕಾರಿ ಶಾಲೆಯಲ್ಲಿ ಆಯೋಜಿಸಲಾಗುತ್ತಿದೆ. ಪ್ರಶಸ್ತಿಗಳನ್ನು ಗಣೇಶ ಮಂಟಪದಲ್ಲಿ ನೀಡಲಾಗುವುದು. ದ.ಕ. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜಿನ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರೂ ಭಾಗವಹಿಸಲಿರುವರು. ಗಣ್ಯರು ಕ್ರೀಡೋತ್ಸವವನ್ನು ಉದ್ಘಾಟಿಸಲಿರುವರು ಎಂದು ಮಾಹಿತಿ ನೀಡಿದರು.
ಸೇವಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ ಅವರು, ಸಮಾಜದಲ್ಲಿ ಅನಿವಾರ್ಯತೆ ಉಳ್ಳವರಿಗೆ ಸಹಾಯ ಹಸ್ತ ಚಾಚುವುದು, ರಕ್ತದಾನ ಶಿಬಿರಗಳ ಮೂಲಕ ಹೆಚ್ಚು ಹೆಚ್ಚು ಮಂದಿಯಿಂದ ರಕ್ತದಾನ ನಡೆದು, ಎಷ್ಟೋ ಮಂದಿಗಳಿಗೆ ಜೀವದಾನ ಮಾಡುವುದು ಸಂಸ್ಥೆಯ ಉದ್ದೇಶವಾಗಿದ್ದು, ನಮ್ಮ ರಕ್ತಪೂರಣಕ್ಕಾಗಿ ಸದಾ ಸಿದ್ಧವಾಗಿರುವ ಗುಂಪು ಎಂದರು.
ರಾಷ್ಟ್ರಭಕ್ತಿಯ ಬಗ್ಗೆ ಸದಾ ಜಾಗೃತಗೊಳಿಸುವ ಸಲುವಾಗಿ, ಬಾಲ ಸಂಸ್ಕಾರ ಶಿಬಿರ ಆಯೋಜನೆ, “ಗೋ ರಕ್ಷಾ ಅಭಿಯಾನ” “ವಂದೇ ಗೋಮಾತರಂ” – ಗೋಪೂಜೆ, ಕೃಷಿ-ಋಷಿ ಸಂಸ್ಕೃತಿಯ ಅರಿವು ಮೂಡಿಸುವುದು, ಭಜನೆಯಿದ್ದಲ್ಲಿ ವಿಭಜನೆಯಿಲ್ಲ ಎಂಬಂತೆ ಮನೆಮನೆ ಭಜನೆ, ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಭಜನೆ ನಡೆಸಿ ಸಂಕೀರ್ತನೆಯ ಮಹತ್ವವನ್ನು ತಿಳಿಸುವುದು, ದೇಶ-ಧರ್ಮಕ್ಕಾಗಿ ಸಾಮಯಿಕ ಹಾಗೂ ಸಾಮಾಜಿಕ ಹೋರಾಟಗಳನ್ನು ನಡೆಸುತ್ತಾ ಬಂದಿದೆ ಎಂದು ಮನೋಜ್ ಕುಮಾರ್ ಹೇಳಿದರು.
ಆ.27 ರಂದು ಸಂಜೆ 6 ಗಂಟೆಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದೆ. ರಾತ್ರಿ ರಂಗಪೂಜೆಯ ಬಳಿಕ ಪ್ರಶಸ್ತಿ ವಿಜೇತ ಜೈಮಾತಾ ಕಲಾತಂಡ ಮಂಗಳೂರು ಇವರ ತೆಲಿಕೆದ ಕಲಾವಿದೆರ್ ಅಭಿನಯಿಸುವ ತುಳು ಹಾಸ್ಯಮಯ ನಾಟಕ “ಪೊಣ್ಣು” ಪ್ರದರ್ಶನಗೊಳ್ಳಲಿದೆ. ಮರುದಿನ ಆ.28ರಂದು ವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ 6 ಗಂಟೆಗೆ ಸಭಾ ಕಾರ್ಯಕ್ರಮಗಳು, ಮಹಾಪೂಜೆಯ ಬಳಿಕ ವಿಸ್ಮಯ ವಿನಾಯಕ ಬಳಗದವರಿಂದ “ಕಡೆಕೊಡಿ ಕಾಮಿಡಿ” ನಡೆಯಲಿದೆ ಎಂದರು.
ವೈಭವದ ಶೋಭಾಯಾತ್ರೆ : ಆ.29ರ ಸಂಜೆ 6 ಗಂಟೆಗೆ ವಿಸರ್ಜನಾ ಪೂಜೆ ಜರಗಿ, ಗಣೇಶ ಮಂಟಪದಿಂದ ಶ್ರೀ ವಿನಾಯಕನ ವೈಭವದ ಶೋಭಾಯಾತ್ರೆ ಜರಗಲಿದೆ. ಈ ಯಾತ್ರೆ ಕೋಡಿಕಲ್‌ನ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ರಾಷ್ಟ್ರೀಯ ಹೆದ್ದಾರಿಯ ಮೂಲಕ ಉರ್ವಸ್ಟೋರಿಗೆ ಬಂದು ನಂತರ ಅಶೋಕನಗರಕ್ಕೆ ಸಾಗಿ ದಂಬೆಲ್ ಘಲ್ಗುಣಿ ನದಿಯಲ್ಲಿ ವಿಸರ್ಜಿಸಲ್ಪಡುತ್ತದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಗೌರವಾಧ್ಯಕ್ಷರಾದ ಕಿರಣ್ ಜೋಗಿ, ಗೌರವ ಸಲಹೆಗಾರರಾದ ಪಿ. ಮಹಾಬಲ ಚೌಟ, ಪ್ರಧಾನ ಕಾರ್ಯದರ್ಶಿ ರವಿ ಅಲೆವೂರಾಯ ವರ್ಕಾಡಿ, ವಿಶ್ವ ಹಿಂದೂ ಪರಿಷತ್‌ನ ಮಣ್ಣಗುಡ್ಡ ಸೇವಾ ಪ್ರಮುಖ್ ಸತೀಶ್ ಶೆಟ್ಟಿ, ಕೋಶಾಧಿಕಾರಿ ಮನೋಜ್ ಕಲ್ಪನೆ, ಉಪಾಧ್ಯಕ್ಷರಾದ ಮಾಜಿ ಮ.ನ.ಪಾ ಸದಸ್ಯ ಶ್ರೀ ಕಿರಣ್ ಕುಮಾರ್, ಕ್ರೀಡಾ ಕಾರ್ಯದರ್ಶಿ ಅಖಿಲೇಶ್ ಶೆಟ್ಟಿ ಉಪಸ್ಥಿತರಿದ್ದರು.