ಹೈದರಾಬಾದ್: ನಟಿ ನಿಧಿ ಅಗರ್ವಾಲ್ ಖಾಸಗಿ ಕಾರ್ಯಕ್ರಮವೊಂದ ಸರ್ಕಾರಿ ವಾಹನದಲ್ಲಿ ಬಂದಿರುವುದು ಚರ್ಚೆ ಆಗ್ತಿದೆ. ನಿಧಿ ಸರ್ಕಾರಿ ವಾಹನದಿಂದ ಕೆಳಗೆ ಇಳಿಯುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ನಟಿಯೊಬ್ಬರು ತಮ್ಮ ಖಾಸಗಿ ಕಾರ್ಯಕ್ರಮಕ್ಕೆ ಸರ್ಕಾರಿ ವಾಹನವನ್ನು ಬಳಸಿದ್ದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.
ನಟಿ ನಿಧಿ ಅಗರ್ವಾಲ್ ಇತ್ತೀಚೆಗೆ ಆಂಧ್ರ ಪ್ರದೇಶದ ಭೀಮವರಂ ನಗರದಲ್ಲಿ ಅಂಗಡಿಯೊಂದರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ನಿಧಿ ಅವರು ಈ ಕಾರ್ಯಕ್ರಮಕ್ಕೆ ಇನ್ನೋವಾ ಕಾರಿನಲ್ಲಿ ಆಗಮಿಸಿದ್ದರು. ಆದರೆ ಆ ಕಾರಿನ ಮೇಲೆ ಆಂಧ್ರ ಪ್ರದೇಶ ಸರ್ಕಾರದ ಬೋರ್ಡ್ ಇತ್ತು. ಸರ್ಕಾರಕ್ಕೆ ಸೇರಿದ ವಾಹನದಲ್ಲಿ ನಿಧಿ ಅಗರ್ವಾಲ್, ಮಳಿಗೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನಿಧಿ ಅವರು ಸರ್ಕಾರಿ ವಾಹನದಿಂದ ಕಾರ್ಯಕ್ರಮಕ್ಕೆ ಬಂದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು.
ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ನಟಿಸಿರುವ ‘ಹರಿ ಹರ ವೀರ ಮಲ್ಲು’ ಸಿನಿಮಾನಲ್ಲಿ ನಿಧಿ ಅಗರ್ವಾಲ್ ನಾಯಕಿಯಾಗಿ ನಟಿಸಿದ್ದರು. ಇದೇ ಕಾರಣಕ್ಕೆ ಸರ್ಕಾರಿ ಅಧಿಕಾರಿಗಳು ತುಸು ಉದಾರಿಯಾಗಿ ನಟಿಗೆ ಸರ್ಕಾರಿ ವಾಹನವನ್ನೇ ಕೊಟ್ಟುಬಿಟ್ಟಿದ್ದಾರೆ ಎಂಬ ಚರ್ಚೆಗಳು ಆರಂಭವಾದವು. ಕೆಲವು ವಿಪಕ್ಷದ ಸದಸ್ಯರು ಇದನ್ನು ಪ್ರಶ್ನೆ ಸಹ ಮಾಡಿದರು. ತೆಲುಗು ಮಾಧ್ಯಮಗಳು ಸಹ ಈ ಬಗ್ಗೆ ವರದಿ ಮಾಡಿ ಪ್ರಶ್ನೆ ಮಾಡಿದ್ದವು.
ಇದೀಗ ಸ್ವತಃ ನಟಿ ನಿಧಿ ಅಗರ್ವಾಲ್ ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ‘ಆ ಕಾರ್ಯಕ್ರಮದ ಸ್ಥಳೀಯ ಆಯೋಜಕರು ನನಗೆ ವಾಹನವನ್ನು ಕಳಿಸಿದ್ದರು. ನಾನು ಇಂಥಹುದೇ ವಾಹನ ನನಗೆ ಬೇಕೆಂದು ಬೇಡಿಕೆ ಇಟ್ಟಿರಲಿಲ್ಲ. ಆಯೋಜಕರು ಕಳಿಸಿದ ವಾಹನದಲ್ಲಿ ನಾನು ಬಂದೆ. ಸರ್ಕಾರಿ ಅಧಿಕಾರಿಗಳೇ ಆ ವಾಹನವನ್ನು ನನಗೆ ಕಳಿಸಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ ಅದೂ ಸಹ ಸುಳ್ಳಾಗಿದ್ದು, ಆ ವಾಹನವನ್ನು ನನಗೆ ಯಾವುದೇ ಸರ್ಕಾರಿ ಅಧಿಕಾರಿಗಳು ಕಳಿಸಿಲ್ಲ. ನನಗೆ ಯಾವುದೇ ಅಧಿಕಾರಿಗಳೊಟ್ಟಿಗೆ ಸಂಪರ್ಕ ಸಹ ಇಲ್ಲ’ ಎಂದಿದ್ದಾರೆ.
ಅಸಲಿಗೆ ನಿಧಿ ಅಗರ್ವಾಲ್ ಭೀಮವರಂ ಕಾರ್ಯಕ್ರಮಕ್ಕೆ ಆಗಮಿಸಿದ ಕಾರು ಹೋಟೆಲ್ ಒಂದಕ್ಕೆ ಸೇರಿದ್ದಾಗಿತ್ತಂತೆ. ಆದರೆ ಹೋಟೆಲ್ನ ಕಾರಿನ ಮೇಲೆ ಸರ್ಕಾರದ ಬೋರ್ಡನ್ನು ಲಗ್ಗತ್ತಿಸಲಾಗಿತ್ತು. ಇದೀಗ ಘಟನೆ ಬಗ್ಗೆ ದೂರು ದಾಖಲಿಸಿದ್ದು ತನಿಖೆ ನಡೆಯುತ್ತಿದೆ.