ಮಂಗಳೂರು: ಇತ್ತೀಚೆಗೆ ಕಳೆದುಹೋಗಿದ್ದ ಚಿನ್ನವನ್ನು ಮೂಡಬಿದ್ರೆ ಪೊಲೀಸರು ಪತ್ತೆಹಚ್ಚಿ ವಾರಸುದಾರರಿಗೆ ಒಪ್ಪಿಸಿದ್ದಾರೆ.
ಆಗಸ್ಟ್ 8ರಂದು ಪಡು ಮಾರ್ನಾಡು ಗ್ರಾಮದ ಧರ್ಮಪಾಲ ಬಲ್ಲಾಳರ ಪತ್ನಿ ವಿಜಯ ಕುಪ್ಪೆ ಪದವಿನಲ್ಲಿ ಅವರ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದರು. ಅಂದು ಮಧ್ಯಾಹ್ನ 2:00 ಗಂಟೆಗೆ ಮೂಡಬಿದ್ರೆ ಪೇಟೆಯಲ್ಲಿ ಎರಡು ಬಳೆ ಮತ್ತು ಚಿನ್ನದ ಸರ ಸೇರಿ ಒಟ್ಟು ಒಂಬತ್ತು ಪವನ್ ಚಿನ್ನ ಮತ್ತು ಪರ್ಸ್ ಸಮೇತ ಕಳೆದುಕೊಂಡಿದ್ದರು. ಈ ಬಗ್ಗೆ ಅದೇ ದಿನ ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರಿನ ಅನ್ವಯ ಪತ್ತೆ ಕಾರ್ಯದಲ್ಲಿ ಮೂಡಬಿದ್ರೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ನೇತೃತ್ವದಲ್ಲಿ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿ ಮಹಮದ್ ಹುಸೇನ್, ಮಹಮದ್ ಇಕ್ಬಾಲ್, ಅಖಿಲ್, ಅಹಮದ್, ನಾಗರಾಜ ಲಮಾಣಿ ಮತ್ತು ವೆಂಕಟೇಶ್ ಎರಡು ದಿನಗಳಲ್ಲಿ ಪತ್ತೆಗೆ ಶ್ರಮಿಸಿ ಪತ್ತೆಹಚ್ಚಿದ್ದಾರೆ.
ಬಂಗಾರ ಮತ್ತು ಪರ್ಸನ್ನು ವಾರಸುದಾರರಿಗೆ ಹಸ್ತಾಂತರಿಸುತ್ತಾರೆ. ಬಂಗಾರದ ಮೌಲ್ಯ ಸುಮಾರು 10 ಲಕ್ಷ ಆಗಬಹುದು. ಪೊಲೀಸರ ಕಾರ್ಯಾಚರಣೆಯ ಬಗ್ಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸುತ್ತಾರೆ.