ಚಾಮರಾಜನಗರ: ಬಂಡೀಪುರದಲ್ಲಿ ಸೆಲ್ಫಿ ತೆಗೆಯಲು ಹೋಗಿ ಕಾಡಾನೆ ತುಳಿತಕ್ಕೊಳಗಾಗಿ ಪಾರಾದವನಿಗೆ ಅರಣ್ಯ ಇಲಾಖೆ 25,000 ರೂ. ದಂಡ ವಿಧಿಸಿ, ಇನ್ಯಾರೂ ಕಾಡು ಪ್ರಾಣಿಗಳೊಂದಿಗೆ ದುಸ್ಸಾಹ ನಡೆಸಬೇಡಿ ಎಂದು ಅಧಿಕಾರಿಗಳು ವಿಡಿಯೋ ಮಾಡಿಸಿದ್ದಾರೆ.
ಆನೆದಾಳಿಯಿಂದ ಪಾರಾದ ವ್ಯಕ್ತಿ ನಂಜನಗೂಡಿನ ಬಸವರಾಜು ಎಂದು ಗುರುತಿಸಲಾಗಿದೆ. ಈತ ಆನೆಯೊಂದಿಗೆ ಸೆಲ್ಫಿ ತೆಗೆಯಲು ಹೋಗಿದ್ದ. ರೊಚ್ಚಿಗೆದ್ದಿದ್ದ ಆನೆ ಆತನನ್ನು ಅಟ್ಟಿಸಿಕೊಂಡು ಬಂದು ತುಳಿದಿತ್ತು. ಆನೆ ಸರಿಯಾಗಿ ತುಳಿದಿದ್ದರೆ ಅಪಾಯ ಉಂಟಾಗುವ ಸಾಧ್ಯತೆ ಇತ್ತು. ಆದರೆ ಅದೃಷ್ಟವಶಾತ್ ಬದುಕುಳಿದಿದ್ದ. ಈತನ ಹುಚ್ಚಾಟದ ವಿಡಿಯೋ ಸೋಷಿಯಲ್ ಮೀಡಿಯದಲ್ಲಿ ವೈರಲ್ ಆಗಿದ್ದು, ಈತನ ಕಥೆ ಏನಾಯಿತು ಎಂದು ನೆಟಿಜಿನ್ಸ್ ಪ್ರಶ್ನಿಸುತ್ತಿದ್ದರು.
ಅರಣ್ಯ ಇಲಾಖೆಯ ಸಿಬ್ಬಂದಿ ಕೂಡಾ ಈತನನ್ನು ಹುಡುಕಾಡಿ ಪತ್ತೆ ಮಾಡಿದಾಗ ಈತ ನಂಜನಗೂಡಿನ ಬಸವರಾಜ ಎಂದು ಪತ್ತೆಯಾಯಿತು.
ಈತ ಘಟನೆ ಬಳಿಕ ಅರಣ್ಯ ಇಲಾಖೆ ಕಣ್ತಪ್ಪಿಸಿ ಕೇರಳಕ್ಕೆ ಹೋಗಿ ಕರ್ನಾಟಕಕ್ಕೆ ಬಂದಿದ್ದ. ಘಟನೆ ಬಳಿಕ ಮೊಬೈಲ್ ಸ್ವೀಚ್ ಆಫ್ ಮಾಡಿದ್ದ. ಕೊನೆಗೂ ಬಸವರಾಜುನನ್ನು ಅರಣ್ಯ ಸಿಬ್ಬಂದಿ ಪತ್ತೆ ಹಚ್ಚಿ ಬಿಸಿ ಮುಟ್ಟಿಸಿದ್ದಾರೆ.
ಸೆಲ್ಫಿ ತೆಗೆಯಬೇಡಿ: ಜಾಗೃತಿ ಮೂಡಿಸಿದ ಬಸವರಾಜು!
ಇದೀಗ ಬಂಡೀಪುರದ ಅರಣ್ಯ ಇಲಾಖೆ ಅಧಿಕಾರಿಗಳು ಬಸವರಾಜು ಅವರಿಂದ ವಿಡಿಯೋ ಮಾಡಿಸಿ ಹರಿಬಿಟ್ಟಿದ್ದಾರೆ. ಈ ವಿಡಿಯೋದಲ್ಲಿ ಆತ, “ನಾನು ಬಸವರಾಜು, ನಾನು ಬಂಕಾಪುರದ ದೇವಾಸ್ಥಾನಕ್ಕೆ ಹೋಗಿದ್ದೆ. ಅಲ್ಲಿಂದ ಬರುವಾಗ ಮೋಜು ಮಸ್ತಿಗಾಗಿ ಸೆಲ್ಫಿ, ಫೋಟೋ ತೆಗೆಯಲು ಮುಂದಾಗಿದ್ದೆ. ಈ ವೇಳೆ ಕಾಡಾನೆ ನನ್ನ ಮೇಲೆ ದಾಳಿ ನಡೆಸಿತು. ಇನ್ಮುಂದೆ ಯಾರೂ ಕೂಡ ಅರಣ್ಯ ಪ್ರದೇಶದಲ್ಲಿ ವಾಹನ ನಿಲ್ಲಿಸಬೇಡಿ, ಯಾರು ಕೂಡ ದುಸ್ಸಾಹಸಕ್ಕೆ ಕೈ ಹಾಕಬೇಡಿ ಎಂದು ಫೋಟೋ, ಸೆಲ್ಫಿ ತೆಗೆಯುವ ಕೆಲಸ ಮಾಡ್ಬೇಡಿ” ಎಂದು ಜಾಗೃತಿ ಮೂಡಿಸುವ ಮಾತಾಡಿದ್ದಾನೆ.