23ಕ್ಕೆ ಸಿಗುತ್ತಿದ್ದ ಕೆಂಪು ಕಲ್ಲಿಗೆ 60, 8 ಸಾವಿರಕ್ಕೆ ಸಿಗುತ್ತಿದ್ದ ಮರಳಿಗೆ 20,000!?

ದ.ಕ. ಜಿಲ್ಲಾಡಳಿತ ನಿರ್ಬಂಧದಿಂದ ಬೀದಿಗೆ ಬಿದ್ದ ಕಾರ್ಮಿಕರ ಬದುಕು!,
ಕಟ್ಟಡ ಕಾಮಗಾರಿ ನೆನೆಗುದಿಗೆ, ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಐಸಿಯುನಲ್ಲಿ!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆ, ಕೋಮುಗಲಭೆ ಹೆಚ್ಚುತ್ತಿದೆ ಎಂದು ರಾಜ್ಯ ಸರಕಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಮಂಗಳೂರು ಪೊಲೀಸ್ ಕಮಿಷನರ್ ಅವರನ್ನು ವರ್ಗಾವಣೆ ಮಾಡಿ ಅವರ ಜಾಗಕ್ಕೆ ಹೊಸ ಅಧಿಕಾರಿಗಳು ಬಂದಿದ್ದು ಹಳೇ ಸುದ್ದಿ. ಆನಂತರ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಣಕ್ಕೆ ಬಂತು, ಆದರೆ ಬಡಜನರ, ಕೂಲಿ ಕಾರ್ಮಿಕರ ಬದುಕು ಮಾತ್ರ ಬೀದಿಗೆ ಬೀಳುವಂತಾಯಿತು.

ಇದಕ್ಕೆಲ್ಲ ಕಾರಣ ಜಿಲ್ಲೆಯಲ್ಲಿ ಕೆಂಪು ಕಲ್ಲು, ಮರಳು ವ್ಯಾಪಾರ ʻಅಕ್ರಮʼವಾಗಿ ನಡೆಯುತ್ತಿದೆ ಎಂದು ಹಠಾತ್ ಆಗಿ ನಿಲ್ಲಿಸಿದ್ದು! ಈಗ ಮರಳು, ಕೆಂಪು ಕಲ್ಲು ಇಲ್ಲದೆ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ, ಮನೆ ನಿರ್ಮಾಣದಿಂದ ಹಿಡಿದು ಹೋಟೆಲ್, ಬಾರ್, ಹಾರ್ಡ್ ವೇರ್, ಗೂಡಂಗಡಿ ವ್ಯಾಪಾರದವರೆಗೆ ಎಲ್ಲವೂ ಸಂಕಷ್ಟಕ್ಕೆ ಸಿಲುಕಿದೆ. ಇನ್ನು ಲಾರಿ, ಟೆಂಪೋ, ರಿಕ್ಷಾ ಚಾಲಕರು ದಿನವಿಡೀ ಬಾಡಿಗೆ ಸಿಗದೇ ಸಂಸಾರ ಒಂದು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿಗೆ ಬಂದುಮುಟ್ಟಿದೆ.

ಕಟ್ಟಡ ಕಾರ್ಮಿಕರಲ್ಲಿ ಹೆಲ್ಪರ್‌ಗಳಿಗೆ 800ರಿಂದ 1200ರ ವರೆಗೆ ದಿನ ಸಂಬಳವಿದ್ದು, ಮೇಸ್ತ್ರಿಗಳಿಗೆ 1200ರಿಂದ 1500 ರೂ. ದಿನ ಸಂಬಳವಿದೆ. ಈ ಹಣವನ್ನು ಅವರು ಪ್ರತಿದಿನ ಚಲಾವಣೆ ಮಾಡುವುದರಿಂದ ಜಿಲ್ಲೆಯಲ್ಲಿ ಹಣಕಾಸು ಚೆನ್ನಾಗಿ ಓಡಾಡುತ್ತಿತ್ತು. ಇವರಿಂದಾಗಿ ಜಿಲ್ಲೆಯ ಆರ್ಥಿಕ ವ್ಯವಹಾರ ನಿರ್ಧಾರವಾಗುತ್ತದೆ. ಹೋಟೆಕ್‌, ಗೂಡಂಗಡಿ, ಬಾರ್‌, ವೈನ್‌ ಶಾಪ್‌ಗಳಲ್ಲಿ ಚೆನ್ನಾಗಿ ವ್ಯವಹಾರ ನಡೆಯುತ್ತಿತ್ತು. ರಿಕ್ಷದಂತಹಾ ಸಾರಿಗೆಯಿಂದ ಬದುಕು ಕಟ್ಟಿಕೊಂಡವರ ಬದುಕೂ ಚೆನ್ನಾಗಿತ್ತು. ಇದೀಗ ಮರಳ, ಕೆಂಪು ಕಲ್ಲು ಸ್ಥಗಿತಗೊಂಡಿರುವುದರಿಂದ ನಿರ್ಮಾಣ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡು ಇದರ ಪರಿಣಾಮ ಇತರ ಕ್ಷೇತ್ರಗಳತ್ತವೂ ಬೀರಿದೆ. ಇದರಿಂದಾಗಿ ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಐಸಿಯುವಿನಲ್ಲಿದೆ.

ಕಟ್ಟಡ ಕಾರ್ಮಿಕರು ಕೆಲಸವಿಲ್ಲದೆ ಕಣ್ಣೀರು ಹಾಕುತ್ತಿದ್ದು, ನಾಲ್ಕು ತಿಂಗಳಿನಿಂದ ಮನೆಯಲ್ಲಿಯೇ ಇದ್ದಾರೆ. ಇಎಂಐ ಮೂಲಕ ಮನೆ ಸಾಲ, ವಾಹನ ಸಾಲ ಮಾಡಿದವರು ಇದೀಗ ಕಂತು ಕಟ್ಟಲು ಪರದಾಡುತ್ತಿದ್ದು, ಕೆಲವರಿಗೆ ಬ್ಯಾಂಕ್‌ ನೋಟೀಸ್‌ ಕೂಡ ಬಂದಿದೆ. ಇದನ್ನೇ ನಂಬಿ ಜೀವನ ನಡೆಸುತ್ತಿದ್ದ ಕಟ್ಟಡ ಕಾರ್ಮಿಕರ ಬದುಕು ಬೀದಿಗೆ ಬಿದ್ದಿದೆ.

ಕಲ್ಲು, ಮರಳಿನ ರೇಟ್‌ ಕಡಿಮೆಯಾಯ್ತಾ?

ಕಲ್ಲು ಹಾಗೂ ಮರಳು ಗಣಿಗಾರಿಕೆ ಲೀಗಲ್‌ ಆಗಿ ನಡೆಯಬೇಕು, ಇದರಿಂದ ಸರ್ಕಾರಕ್ಕೆ ರಾಜಧನ ಸಿಗಬೇಕು. ಇಲ್ಲಿ ಅಕ್ರಮಗಳು ನಡೆಯದೆ ಜನರಿಗೆ ಕಡಿಮೆ ದರದಲ್ಲಿ ಮರಳು, ಕಲ್ಲು ಸಿಗಬೇಕು, ಪ್ರಕೃತಿಗೆ ಹಾನಿಯಾಗಬಾರದು ಎಂಬಿತ್ಯಾದಿ ಸದುದ್ದೇಶದಿಂದ ಜಿಲ್ಲಾಡಳಿತ ಕೆಲವೊಂದು ನಿರ್ಬಂಧ, ಷರತ್ತುಗಳನ್ನು ವಿಧಿಸುತ್ತದೆ. ಆದರೆ, ಇದರಿಂದ ಸಮಾಜಕ್ಕೆ ಲಾಭವಾಗಬೇಕೇ ಹೊರತು ಇನ್ನಷ್ಟು ಹಾನಿಯಾಗಬಾರದು. ಯಾಕೆಂದರೆ 23ಕ್ಕೆ ಸಿಗುತ್ತಿದ್ದ ಕೆಂಪು ಕಲ್ಲಿಗೆ ಈಗ 60 ರೂ.ವರೆಗೆ ತುಲುಪಿದೆ. ಈ ಹಿಂದೆ 8 ಸಾವಿರಕ್ಕೆ ಸಿಗುತ್ತಿದ್ದ ಒಂದು ಲೋಡ್‌ ಮರಳಿಗೆ ಈಗ 20,000 ತಲುಪಿದೆ. ಹಾಗಾದರೆ ನಾಲ್ಕು ತಿಂಗಳಿನಿಂದ ಈ ರೀತಿ ನಿರ್ಬಂಧ ಹೇರಿ ಏನು ಲಾಭವಾಯಿತು? ಒಂದು ವೇಳೆ ಎಲ್ಲವೂ ಸರಿಯಾಗಿರುತ್ತಿದ್ದರೆ ಈ ಹಿಂದಿನದಕ್ಕಿಂತಲೂ ದರ ಕಡಿಮೆಯಾಗಿರಬೇಕಿತ್ತು ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಕಾಂಗ್ರೆಸ್-ಬಿಜೆಪಿ ಯಾರಿಗೂ ಬೇಕಾಗಿಲ್ಲ!

ಜಿಲ್ಲೆಯಲ್ಲಿ ಇಷ್ಟೊಂದು ಜ್ವಲಂತ ಸಮಸ್ಯೆ ಎದುರಾಗಿದ್ದರೂ ಕಾಂಗ್ರೆಸ್, ಬಿಜೆಪಿ ನಾಯಕರಿಗೆ ಇದೊಂದು ಸಮಸ್ಯೆಯೇ ಅಲ್ಲ. ಅವರು ಕಾಟಾಚಾರಕ್ಕೆ ಪ್ರತಿಭಟನೆಗೆ ಕರೆ ಕೊಟ್ಟು ಸುಮ್ಮನಾಗುತ್ತಾರೆ. ಕಾಂಗ್ರೆಸ್ ಸರಕಾರ ಇದಕ್ಕೆಲ್ಲ ಕಾರಣ ಎಂದು ಬಿಜೆಪಿ ಮುಖಂಡರು ವಾದಿಸಿದರೆ ಕಾಂಗ್ರೆಸಿಗರು ಇದಕ್ಕೆಲ್ಲ ಬಿಜೆಪಿ ನಾಯಕರ ಕೋಮುದ್ವೇಷ ಕಾರಣ ಎನ್ನುತ್ತಿದ್ದಾರೆ. ಇತ್ತೀಚೆಗೆ ಬಿಜೆಪಿಗರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದರೂ ಫಲಿತಾಂಶ ಮಾತ್ರ ಶೂನ್ಯ.
ಮರಳು, ಕೆಂಪು ಕಲ್ಲು, ಕಟ್ಟಡ ನಿರ್ಮಾಣ ಇದನ್ನೇ ನಂಬಿಕೊಂಡು ಇಲ್ಲಿ ಲಕ್ಷಾಂತರ ಮಂದಿ ಕೂಲಿ ಕಾರ್ಮಿಕರು, ಚಾಲಕರು, ಸಣ್ಣಪುಟ್ಟ ಕ್ಯಾಂಟೀನ್, ಹೋಟೆಲ್ ಮಾಲಕರು ಮತ್ತವರ ಕುಟುಂಬ ಇದೆ. ಕೆಂಪು ಕಲ್ಲು, ಮರಳು ಅಕ್ರಮವಾಗಿ ಸಾಗಾಟವಾಗುತ್ತಿದ್ದರೆ ಅದಕ್ಕೆ ಬೇಕಾದ ಕಠಿಣ ನಿಯಮಗಳನ್ನು ಜಾರಿಗೆ ತರಲಿ. ಗಣಿ ಇಲಾಖೆಯ ಅಧಿಕಾರಿಗಳಿಗೆ ಮೂಗುದಾರ ಹಾಕಲಿ. ಅದನ್ನು ಬಿಟ್ಟು ಏಕಾಏಕಿ ಬಂದ್ ಮಾಡಿರುವುದು ಸರಿಯಲ್ಲ ಅನ್ನುವುದು ಜನರ ವಾದ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!