ಮಂಗಳೂರು: ಧರ್ಮಸ್ಥಳದ ನೇತ್ರಾವತಿ ನದಿ ತೀರದಲ್ಲಿ ಎಸ್ಐಟಿ ಈಗಾಗಲೇ ತನಿಖೆ ಕೈಗೊಂಡಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಕುಳಿತವರು, ತನಿಖೆ ಹೇಗೆ ನಡೆಯಬೇಕು ಎಂದು ನಿರ್ದೇಶಿಸಿ, ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ಆಗುವಂತಹ ಹೇಳಿಕೆ ನೀಡಿ ಅಂತಿಮ ತೀರ್ಪು ಸಹ ಕೊಟ್ಟು ಬಿಡುತ್ತಿದ್ದಾರೆ. ಇಂತಹ ಅತಿರೇಕದ ವರ್ತನೆಗಳಿಗೆ ರಾಜ್ಯ ಸರ್ಕಾರ ಕೂಡಲೇ ಕಡಿವಾಣ ಹಾಕಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಧರ್ಮಸ್ಥಳವು ರಾಜ್ಯದ ಸಾವಿರಾರು ದೇವಸ್ಥಾನಗಳ ಜೀರ್ಣೋದ್ಧಾರ, ಕೆರೆ ಅಭಿವೃದ್ಧಿ, ಹಿಂದೂ ರುದ್ರಭೂಮಿಗಳ ನವೀಕರಣ, ಸ್ತ್ರೀ ಸಬಲೀಕರಣ, ಮದ್ಯ ವಿರೋಧಿ ಶಿಬಿರ, ಮೊದಲಾದ ಸಾಮಾಜಿಕ ಕಾರ್ಯಗಳ ಮೂಲಕ ದೇಶಕ್ಕೇ ಮಾದರಿಯಾಗಿದೆ. ಇಂತಹ ಕ್ಷೇತ್ರದ ಬಗ್ಗೆ ಪೂರ್ವಾಗ್ರಹ ಪೀಡಿತ ಅಜೆಂಡಾಗಳನ್ನು ಹೊಂದಿರುವವರು ಅಪಪ್ರಚಾರ ನಡೆಸುತ್ತಿದ್ದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಿ ಭಕ್ತರು ಸಹನೆ ಕಳೆದುಕೊಳ್ಳಲು ಕಾರಣವಾಗುತ್ತಿದೆ. ನಮ್ಮ ಶ್ರದ್ಧಾ ಕೇಂದ್ರಗಳ ವಿರುದ್ಧ ಯಾರು ಏನು ಮಾಡಿದರೂ ನಡೆಯುತ್ತದೆ ಎನ್ನುವ ವಾತಾವರಣ ನಿರ್ಮಿಸಲಾಗುತ್ತಿದ್ದು ಇದೇ ರೀತಿ ಬೇರೆಯವರ ಶ್ರದ್ಧಾ ಕೇಂದ್ರಗಳ ವಿರುದ್ಧ ಆಗಿದ್ದರೆ ದೇಶದಲ್ಲಿ ಏನಾಗುತ್ತಿತ್ತು? ಆದರೆ ಹಿಂದೂಗಳು ವಿಶಾಲ ಚಿಂತನೆಯುಳ್ಳವರಾಗಿದ್ದು ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸಿದ್ದಾರೆ. ಹಾಗಂತ ಇದು ಪದೇ ಪದೇ ಪುನರಾವರ್ತನೆಯಾಗಿ ಹಿಂದೂಗಳು ಎದ್ದು ನಿಂತರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಈ ಹಿಂದೆ ಎಡಪಂಥೀಯರು ಹಾಗೂ ಹಿಂದೂ ವಿರೋಧಿ ಶಕ್ತಿಗಳೆಲ್ಲಾ ರಾಮಸೇತು, ತಿರುಪತಿ, ಕಾಶಿ, ಶಬರಿಮಲೈ, ಈಶಾ, ಅನಂತಪದ್ಮನಾಭ, ಸೇರಿದಂತೆ ಹಿಂದೂ ಶ್ರದ್ದಾ ಕೇಂದ್ರಗಳ ವಿರುದ್ಧ ಷಡ್ಯಂತರ ರೂಪಿಸಿದ್ದು ಇದೀಗ ಧರ್ಮಸ್ಥಳ ಅವರ ಟಾರ್ಗೆಟ್ ಆಗಿದೆ. ಎಸ್ಐಟಿ ತನಿಖೆ ಯಾವ ಹಂತಕ್ಕೆ ಬೇಕಾದರೂ ಹೋಗಲಿ. ಅಂತಿಮವಾಗಿ ಸತ್ಯಾಂಶ ಹೊರ ಬಂದು ಶ್ರೀ ಕ್ಷೇತ್ರದಲ್ಲಿ ಯಾವುದೇ ಲೋಪವಾಗಿಲ್ಲ ಎಂಬುದು ಬಹಿರಂಗವಾದರೆ, ಕ್ಷೇತ್ರದ ತೇಜೋವಧೆ ಮಾಡಿ, ಭಕ್ತರ ನಂಬಿಕೆಗಳನ್ನು ಘಾಸಿಗೊಳಿಸಿದ ದುರುಳರಿಗೆ ಯಾವ ಶಿಕ್ಷೆ ಎಂಬುದನ್ನು ಸರ್ಕಾರ ತಿಳಿಸಬೇಕು ಮತ್ತು ಕೂಡಲೇ ಈ ಎಲ್ಲಾ ವಿಚಾರಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿ ಭಕ್ತರು ಬೀದಿಗಿಳಿಯುವ ಮುನ್ನ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಶಾಸಕರು ಆಗ್ರಹಿಸಿದರು.