ಮಂಗಳೂರು: ಸ್ನೇಹಿತೆಯರೊಂದಿಗೆ ಪೇಟೆಗೆ ಹೋಗಿ ತಿರುಗಾಡಿ ಬರುತ್ತೇನೆ ಎಂದು ಹೇಳಿಹೋದ ಹೊಯ್ಗೆ ಬಜಾರ್ ಯುವತಿ ಶಾಹಿನಾ ಬಾನು (23) ಮನೆಗೆ ವಾಪಸ್ ಬಾರದೆ ನಿಗೂಢವಾಗಿ ನಾಪತ್ತೆಯಾದ ಘಟನೆ ಆ.7ರಂದು ಬೆಳಗ್ಗೆ ಸಂಭವಿಸಿದೆ.
ಅಂದು ಬೆಳಗ್ಗೆ 11 ಗಂಟೆ ವೇಳೆಗೆ ಪೇಟೆಗೆ ಹೋಗುವ ವಿಚಾರವನ್ನು ಶಾಹಿನಾ ತನ್ನ ತಾಯಿಯಲ್ಲಿ ಹೇಳಿ ಹೋಗಿದ್ದರು. ಆದರೆ ತಡರಾತ್ರಿ ವರೆಗೂ ವಾಪಸ್ ಬಾರದ ಕಾರಣ, ಮೊಬೈಲ್‌ಗೆ ಕರೆ ಮಾಡಿದರೆ ಅದು ಸ್ವಿಚ್ಡ್ ಆಫ್ ಆಗಿತ್ತು. ಹೀಗಾಗಿ ಇವಳ ಸ್ನೇಹಿತೆಯರಿಗೆ ಕರೆ ಮಾಡಿ ವಿಚಾರಿಸಿದಾಗ ಆಕೆ ನಮ್ಮ ಕಡೆಗೆ ಬಂದೇ ಇಲ್ಲ ಎಂದು ತಿಳಿಸಿದ್ದಾರೆ. ಶಾಹಿನಾಳಿಗಾಗಿ ಸಾಕಷ್ಟು ಕಡೆ ಹುಡುಕಾಡಿ ಹುಡುಕಾಡಿ ಎಲ್ಲೂ ಸಿಗದಿದ್ದಾಗ ಕೊನೆಗೆ ಮನೆಮಂದಿ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.
ಶಾಹಿನಾ ಬಾನು ಪ್ಯಾರಾ ಮೆಡಿಕಲ್ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿಯೇ ಇದ್ದರು. ಆದರೆ ಈಕೆ ದಿಢೀರ್ ಆಗಿ ಎಲ್ಲಿಗೆ ಹೋದಳು ಎಂಬ ಜಿಜ್ಞಾಸೆ ಉಂಟಾಗಿದೆ.
ಸುಮಾರು 4.8 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿರುವ ಶಾಹಿನಾ ಬಾನು ಮನೆಯಿಂದ ಹೋಗುವಾಗ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಬಿಳಿ ಬಣ್ಣದ ಟಾಪ್ ಹಾಗೂ ಕಪ್ಪು ಬಣ್ಣದ ಬುರ್ಖಾ ಧರಿಸಿದ್ದರು. ಕನ್ನಡ, ಬ್ಯಾರಿ, ತುಳು, ಹಿಂದಿ, ಇಂಗ್ಲಿಷ್ ಭಾಷೆ ಬಲ್ಲವರಾಗಿದ್ದಾರೆ. ಯುವತಿಯ ಬಗ್ಗೆ ಮಾಹಿತಿ ಇದ್ದಲ್ಲಿ ಪಾಂಡೇಶ್ವರ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.