ತುಮಕೂರು: ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ದೊಡ್ಡಸಾಗ್ಗೆರೆ ಗ್ರಾಪಂ ವ್ಯಾಪ್ತಿಯ ಚಿಂಪುಗಾನಹಳ್ಳಿ ಸಮೀಪದ ಮುತ್ಯಾಳಮ್ಮ ದೇವಾಲಯದ ಆಸುಪಾಸಿನಲ್ಲಿ ಜನರಿಗೆ ಕೆಟ್ಟ ವಾಸನೆ ಬರುತ್ತಿತ್ತು. ಇದೇನು ಕೆಟ್ಟ ವಾಸನೆ ಎಂದು ಜನರು ಕುತೂಹಲದಿಂದ ಅತ್ತ ಇತ್ತ ನೋಡಿದಾಗ ಒಂದು ಕಡೆ ತುಂಡಾಗಿ ಬಿದ್ದ ಕೈ ಸಿಕ್ಕಿತು. ಇನ್ನು ಸ್ವಲ್ಪ ದೂರ ಕಾಲು, ಮತ್ತೊಂದು ಕಡೆ ಕರುಳು ಹೀಗೆ ದೇಹದ ಒಂದೊಂದು ಅಂಗಗಳು ಪತ್ತೆಯಾಗಿದೆ.
ಮಹಿಳೆಯ ಕೊಲೆ ಮಾಡಿ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ರಸ್ತೆಯುದ್ದಕ್ಕೂ ಎಸೆದು ವಿಕೃತಿ ಮೆರೆದಿರುವ ಭೀಬತ್ಸ ಘಟನೆ ಗೃಹಸಚಿವ ಡಾ.ಜಿ.ಪರಮೇಶ್ವರ ಸ್ವಕ್ಷೇತ್ರದಲ್ಲಿಯೇ ನಡೆದಿದ್ದು, ದೇಹದ ತುಂಡುಗಳು ಸಿಕ್ಕ ಜಾಗದಲ್ಲಿಯೇ ಮೆಟಲ್ ಪೀಸ್‌ಗಳು ಕೂಡಾ ಸಿಕ್ಕಿವೆ. ಹೀಗಾಗಿ ವಾಮಾಚಾರದ ಶಂಕೆ ಕೂಡ ವ್ಯಕ್ತವಾಗಿದೆ.
ಮಹಿಳೆಯ ಕೊಲೆ ಮಾಡಿದ ನಂತರ ಮೃತ ದೇಹವನ್ನು ತುಂಡು ತುಂಡಾಗಿ ಬೇರ್ಪಡಿಸಿ ಕೈಕಾಲು ಒಂದು ಕಡೆ, ಹೃದಯದ ಭಾಗ ಮತ್ತೊಂದು ಕಡೆ, ಹೊಟ್ಟೆ ಮತ್ತು ಕರುಳಿನ ಭಾಗ ಇನ್ನೊಂದು ಕಡೆ, ತಲೆಬುರುಡೆ ಮತ್ತು ಮುಖವೇ ಕಾಣದಂತೆ ಕತ್ತರಿಸಿ ಕಪ್ಪು ಬಣ್ಣದ ಕವರ್‌ನಲ್ಲಿ ಹಾಕಿ ರಸ್ತೆಯುದ್ದಕ್ಕೂ ಎಸೆಯಲಾಗಿದೆ. ಲಿಂಗಾಪುರದ ಸೇತುವೆ ಬಳಿ ಮಹಿಳೆಯ ಹೊಟ್ಟೆಯ ಭಾಗ, ಚಿಂಪುಗಾನಹಳ್ಳಿ ಸೇತುವೆ ಬಳಿ ಕರುಳು ಮತ್ತು ಕೈ ಹಾಗೂ ಮುತ್ಯಾಲಮ್ಮ ದೇವಾಲಯದ ಮುಂದೆ ಮತ್ತೊಂದು ಕೈ ಇದರ ಜೊತೆಯಲ್ಲಿ ಗರುಡಚಲ ನದಿದ ದಡದಲ್ಲಿ ಮೂಟೆಯೊಂದು ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್, ತಿಪಟೂರು ಡಿವೈಎಸ್ಪಿ ಕುಮಾರಶರ್ಮ, ಕೊರಟಗೆರೆ ಸಿಪಿಐ ಅನಿಲ್ ಬೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಬೇರೆ ಕಡೆ ಕೊಲೆ ಮಾಡಿ, ಪೀಸ್ ಪೀಸ್ ಮಾಡಿ ಕವರ್‌ನಲ್ಲಿ ಹಾಕಿ ಎಸೆದಿರುವ ಸಾಧ್ಯತೆ ಇದೆ. ಆರಂಭದಲ್ಲಿ ದೇಹದ ಭಾಗಗಳು ಮಹಿಳೆಯದ್ದಾ, ಪುರುಷನದ್ದಾ ಎಂದು ಹುಡುಕಾಟ ನಡೆಸಲಾಗಿತ್ತು, ಕೈ, ಹೊಟ್ಟೆ ಭಾಗ, ಕರುಳಿನ ಭಾಗಗಳು ಸಿಕ್ಕಿವೆ. ಶವದ ವಾಸನೆ ಬಂದ ಹಿನ್ನೆಲೆ ಸ್ಥಳೀಯರು ದೂರು ನೀಡಿದ್ದರು.
ಕೈಗಳಲ್ಲಿ ಟ್ಯಾಟೂ ಗುರುತು
ಕೋಳಾಲ, ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ಶವದ ತುಂಡುಗಳು ಪತ್ತೆಯಾಗಿವೆ. ಎಫ್‌ಎಸ್‌ಎಲ್ ಮತ್ತು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಏನು ಆಗಿದೆ ಎಂದು ತಿಳಿದುಕೊಳ್ಳುತ್ತಿದ್ದೇವೆ. ಗುರುತು ಸಿಕ್ಕಿಲ್ಲ. ಯಾವಾಗ ತಂದು ಹಾಕಿದ್ದಾರೆಂದು ಗೊತ್ತಿಲ್ಲ. ಎರಡೂ ಕೈಗಳ ಮೇಲೆ ಟ್ಯಾಟೂ ಗುರುತು ಇದೆ. ನಾಪತ್ತೆ ಪ್ರಕರಣಗಳನ್ನು ತೆಗೆದುಕೊಂಡು ಪರಿಶೀಲನೆ ನಡೆಸಿ, ತನಿಖೆ ನಡೆಸುತ್ತೇವೆ. ಮೇಲ್ನೋಟಕ್ಕೆ ಮಹಿಳೆ ಮೃತದೇಹವೆಂದು ಅನಿಸುತ್ತಿದೆ ಎಂದು ತುಮಕೂರು ಎಸ್‌ಪಿ ಕೆ.ವಿ.ಅಶೋಕ್ ಹೇಳಿದ್ದಾರೆ.