ಸಹೋದರ-ಸಹೋದರಿ ಸಂಬಂಧವನ್ನು ಕಾಪಾಡುವ ವಿಧಿಯೇ ರಕ್ಷಾಬಂಧನ. ಪ್ರಾಚೀನ ಕಾಲದಿಂದಲೂ ರಕ್ಷಾಬಂಧನವನ್ನು ಆಚರಿಸಲಾಗುತ್ತಿದೆ. ರಕ್ಷಾಬಂಧನದಲ್ಲಿ ಯಾರಿಗೆ ರಾಖಿ ಕಟ್ಟಲಾಗು ತ್ತದೆಯೋ ಆ ವ್ಯಕ್ತಿಯು ಭೂತ, ಪ್ರೇತ ಮತ್ತು ಪಿಶಾಚಿಗಳಿಂದ ರಕ್ಷಿಸಲ್ಪಡುತ್ತಾನೆ. ಈ ಬಂಧನದಿಂದ ಎಲ್ಲಾ ರೋಗಗಳು ಮತ್ತು ಅಶುಭಗಳು ನಾಶವಾಗುತ್ತವೆ. ಈ ಬಂಧನವು ರಕ್ಷಣೆಯೊಂದಿಗೆ ವಿಜಯ, ಸುಖ, ಪುತ್ರ-ಪೌತ್ರ, ಧನ ಮತ್ತು ಆರೋಗ್ಯ ನೀಡುತ್ತದೆ ಎಂದು ‘ವ್ರತರಾಜ’ ಗ್ರಂಥದಲ್ಲಿ ವರ್ಣಿಸಲಾಗಿದೆ.
ರಕ್ಷಾಬಂಧನದ ಕಥೆ
‘ವ್ರತರಾಜ’ ಗ್ರಂಥದಲ್ಲಿ ರಕ್ಷಾಬಂಧನದ ಬಗ್ಗೆ ಈ ಕಥೆ ಕಂಡುಬರುತ್ತದೆ. ಒಮ್ಮೆ ಯುಧಿಷ್ಠಿರನು ಭಗವಾನ್ ಶ್ರೀಕೃಷ್ಣನನ್ನು, ‘ಹೇ ಕೇಶವ, ಭೂತ, ಪ್ರೇತ, ಪಿಶಾಚಿಗಳಿಂದ ರಕ್ಷಣೆ ದೊರಕುವ, ಹಾಗೆಯೇ ಎಲ್ಲಾ ರೋಗಗಳು ನಾಶವಾಗುವ ಮತ್ತು ಅಶುಭಗಳು ದೂರವಾಗುವ ಒಂದು ರಕ್ಷಾ ವಿಧಾನವನ್ನು ನನಗೆ ಹೇಳಿ, ಒಮ್ಮೆ ಈ ಬಂಧನವನ್ನು ಮಾಡಿದರೆ ವರ್ಷ ಪೂರ್ತಿ ರಕ್ಷಣೆ ದೊರಕುತ್ತದೆ”, ಎಂದು ಕೇಳಿದ್ದನು.
ಇದಕ್ಕೆ ಭಗವಾನ್ ಶ್ರೀಕೃಷ್ಣನು, ‘ಹೇ ಪಾಂಡವಶಾರ್ದೂಲ (ಯುಧಿಷ್ಠಿರ), ಇಂದ್ರನ ವಿಜಯಕ್ಕಾಗಿ, ಇಂದ್ರಾಣಿಯು ಪ್ರಾಚೀನ ಕಾಲದಲ್ಲಿ ಅವನಿಗೆ ಇದೇ ರೀತಿ ರಕ್ಷಾಬಂಧನ ಮಾಡಿದ್ದಳು. ದೇವತೆಗಳು ಮತ್ತು ಅಸುರರ ನಡುವೆ ೧೨ ವರ್ಷಗಳ ಯುದ್ಧ ನಡೆಯುತ್ತಿತ್ತು. ಆ ಯುದ್ಧದಲ್ಲಿ ಅಸುರರು ದೇವತೆಗಳು ಮತ್ತು ಇಂದ್ರನನ್ನು ಸೋಲಿಸಿದ್ದರು. ಆಗ ಇಂದ್ರನು ದೇವಗುರು ಬೃಹಸ್ಪತಿಯನ್ನು ಕರೆದು, ”ಪೀಡಿತನಾದ ನಾನು ಓಡಿ ಹೋಗಲು ಸಾಧ್ಯವಿಲ್ಲ ಮತ್ತು ಇಲ್ಲಿ ನಿಲ್ಲಲು ಕೂಡ ಸಾಧ್ಯವಿಲ್ಲ. ಅದಕ್ಕಿಂತ ನಾನು ನೇರವಾಗಿ ಯುದ್ಧವನ್ನು ಪ್ರಾರಂಭಿಸುತ್ತೇನೆ,” ಎಂದು ಹೇಳಿದನು.
ಇದಕ್ಕೆ ಬೃಹಸ್ಪತಿಯು, ʼಹೇ ಇಂದ್ರ, ಕೋಪವನ್ನು ತ್ಯಜಿಸು. ಇದು ಯುದ್ಧಕ್ಕೆ ಸೂಕ್ತ ಸಮಯವಲ್ಲ. ಸೂಕ್ತವಲ್ಲದ ಸಮಯದಲ್ಲಿ ಮಾಡಿದ ಕಾರ್ಯವು ಹೇಗೆ ಯಶಸ್ವಿಯಾಗುತ್ತದೆ ? ಬದಲಾಗಿ, ಹೀಗೆ ಮಾಡುವುದರಿಂದ ಭಯಂಕರ ಅನರ್ಥವಾಗುತ್ತದೆ” ಎಂದನು. ಅವರ ಮಾತುಕತೆ ನಡೆಯುತ್ತಿರುವಾಗಲೇ ಶಚಿ (ಇಂದ್ರಾಣಿ) ಇಂದ್ರನಿಗೆ, ”ಹೇ ದೇವ, ಇಂದು ಚತುರ್ದಶಿ ಇದೆ. ನಾಳೆ ಬೆಳಗ್ಗೆ ನಾನು ಮಂಗಳಸ್ನಾನಾದಿಗಳನ್ನು ಮಾಡಿ ನಿಮಗೆ ರಕ್ಷಾಬಂಧನವನ್ನು ಮಾಡುತ್ತೇನೆ, ಇದರಿಂದ ನಿಮಗೆ ವಿಜಯ ಪ್ರಾಪ್ತಿಯಾಗುತ್ತದೆ” ಎಂದಳು.
ಹೀಗೆ ಹೇಳಿ ಹುಣ್ಣಿಮೆಯ ದಿನ ಶಚಿಯು ಇಂದ್ರನ ಬಲಗೈಗೆ ರಕ್ಷಾ (ರಾಖಿ) ಕಟ್ಟಿದಳು. ಬ್ರಾಹ್ಮಣರ ಮಂಗಳ ಘೋಷದಲ್ಲಿ ರಕ್ಷಾಬಂಧನ ಮಾಡಿಸಿಕೊಂಡ ಇಂದ್ರನು ಐರಾವತದ ಮೇಲೆ ಆರೂಢನಾಗಿ ಅಸುರರ ಮೇಲೆ ವಿಜಯ ಸಾಧಿಸಲು ಯುದ್ಧಕ್ಕೆ ಹೋದನು. ಇಂದ್ರನನ್ನು ನೋಡಿ ಎಲ್ಲಾ ರಾಕ್ಷಸರು ಭಯಭೀತರಾಗಿ ಪರಾಜಿತರಾದರು. ಶಚಿಯು ಮಾಡಿದ ರಕ್ಷಾಬಂಧನದಿಂದ ಇಂದ್ರ ಮತ್ತು ದೇವಗಣಗಳಿಗೆ ವಿಜಯ ಪ್ರಾಪ್ತಿಯಾಯಿತು. ಈ ಕಥೆಯನ್ನು ಯುಧಿಷ್ಠಿರನಿಗೆ ಹೇಳಿ ಶ್ರೀಕೃಷ್ಣನು, ʼಈ ರಕ್ಷಾವಿಧಾನದಿಂದ ಮನುಷ್ಯನಿಗೆ ವಿಜಯ, ಸುಖ, ಪುತ್ರ-ಪೌತ್ರ, ಧನ, ಆರೋಗ್ಯ ಪ್ರಾಪ್ತಿಯಾಗುತ್ತದೆ” ಎಂದನು.
ರಾಣಿ ಕರ್ಣಾವತಿಯ ರಾಖಿ
ರಜಪೂತ ರಾಜ ಮನೆತನಗಳ ಮೇಲೆ ನಡೆದ ಮೊಘಲ್ ಸಾಮ್ರಾಜ್ಯದ ಅಕ್ರಮಣದ ಸಂದರ್ಭದಲ್ಲಿ ಆ ರಜಪೂತ ರಾಜಮನೆತನದ ಹೆಣ್ಣುಮಕ್ಕಳ ಮಾನಕ್ಕೆ, ಪ್ರಾಣಕ್ಕೆ ಕುತ್ತು ಬಂದಾಗ, ಅವರ ರಕ್ಷಣೆಗೆ ಒದಗಿ ಬಂದುದು ಇದೇ ರಕ್ಷೆ ಎಂಬುದು ಚರಿತ್ರೆ. ಮೇವಾಡದ ರಾಣಿ ಕರ್ಣಾವತಿ, ಮೊಘಲ್ ಸಾಮ್ರಾಟ್ ಹುಮಾಯೂನ್‌ಗೆ ರಾಖಿ ಕಳುಹಿಸಿದಳು. ಆ ಕಾಲದಲ್ಲಿ ಮೇವಾಡದ ಮೇಲೆ ಆಕ್ರಮಣ ನಡೆಯುತ್ತಿರುವಾಗ, ರಾಣಿ ತನ್ನ ರಕ್ಷಣೆಗೆ ಒಬ್ಬ ಸಹೋದರನಾಗಿ ಹುಮಾಯೂನ್‌ನಲ್ಲಿ ಕೋರಿದಳು. ಹುಮಾಯೂನ್ ಕೂಡ ಅದನ್ನು ಗೌರವದಿಂದ ಒಪ್ಪಿಕೊಂಡು ತನ್ನ ಸೇನೆ ಸಹಿತ ಮೇವಾಡಿಗೆ ಬಂದು ರಕ್ಷಣೆಗೆ ನಿಂತನು.
‘ರಕ್ಷಾಗಂಟು’
‘ಪುರಾತನ ಕಾಲದಲ್ಲಿ ‘ರಕ್ಷಾಗಂಟು’ ಎಂದರೆ ಒಂದು ಬಟ್ಟೆಯ ತುಂಡಿನ ಮೇಲೆ ಶುದ್ಧ ಅಕ್ಕಿ, ಬಿಳಿ ಸಾಸಿವೆ ಮತ್ತು ಚಿನ್ನವನ್ನು ಒಟ್ಟಿಗೆ ಇಟ್ಟು ಒಂದು ಗಂಟನ್ನು ಕಟ್ಟಲಾಗುತ್ತಿತ್ತು ಮತ್ತು ಇದನ್ನು ರೇಷ್ಮೆ ದಾರದಿಂದ ಕಟ್ಟಲಾಗುತ್ತಿತ್ತು’ ಎಂದು ‘ನಿರ್ಣಯಸಿಂಧು’ ಮತ್ತು ‘ವ್ರತರಾಜ’ ಗ್ರಂಥಗಳಲ್ಲಿ ಉಲ್ಲೇಖಗಳು ಕಂಡುಬರುತ್ತವೆ. ಈ ರಕ್ಷಾಬಂಧನವನ್ನು ವಿಜಯದ ಆಕಾಂಕ್ಷೆಯಿಂದ ಪತಿ-ಪತ್ನಿ, ಸಹೋದರ-ಸಹೋದರಿಯರು ಪರಸ್ಪರ ಮಾಡುತ್ತಿದ್ದರು. ಆದರೆ ಈಗ ರಕ್ಷಾಬಂಧನವನ್ನು ಸಹೋದರ-ಸಹೋದರಿಯರ ನಡುವೆ ಮಾಡುವ ಸಂಪ್ರದಾಯ ರೂಢಿಯಲ್ಲಿದೆ, ಹಾಗೆಯೇ ಗಂಟಿನ ಬದಲಿಗೆ ನಿರ್ದಿಷ್ಟ ಮಣಿಗಳು ಅಥವಾ ಇತರ ಶುಭ ಮತ್ತು ಮಂಗಳಕರ ಪ್ರತೀಕ ಗಳನ್ನು ದಾರದ ಮೂಲಕ ಕಟ್ಟಲಾಗುತ್ತದೆ.