ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂನ ಬುಕ್ಕಾ ಸ್ಟ್ರೀಟ್ ಬಳಿ ಇರುವ ಗುಜರಿ ಅಂಗಡಿಯಲ್ಲಿ ಇಂದು ಸಂಭವಿಸಿದ ಅನಿಲ ಸಿಲಿಂಡರ್ ಸ್ಫೋಟದಲ್ಲಿ 5 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ. ಇಲ್ಲಿನ ವೆಲ್ಡಿಂಗ್ ಸಿಲಿಂಡರ್ ಅಸಮರ್ಪಕವಾಗಿ ಕಾರ್ಯನಿರ್ವಹಿಸುದ್ದು, ದಿಢೀರ್ ಸ್ಫೋಟವಾಗಿದೆ. ಸ್ಫೋಟದ ಪರಿಣಾಮ ಎಷ್ಟು ಪ್ರಬಲವಾಗಿತ್ತೆಂದರೆ ಮೃತರ ದೇಹಗಳು ಗುರುತಿಸಲಾಗದಷ್ಟು ಚದುರಿಹೋಗಿದ್ದು, ದೂರಕ್ಕೆ ಚಿಮ್ಮಿ ಬಿದ್ದಿದ್ದವು.
ಈ ಘಟನೆಯ ನಂತರ, ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಪೊಲೀಸರ ತಂಡಗಳು ತಕ್ಷಣ ಸ್ಥಳಕ್ಕೆ ಆಗಮಿಸಿದವು. ನಗರ ಪೊಲೀಸ್ ಆಯುಕ್ತ ಶಂಖಬ್ರತ ಬಾಗ್ಚಿ ಗಾಯಾಳುಗಳನ್ನು ನೋಡಲು ವಿಶಾಖಪಟ್ಟಣಂನ ಕಿಂಗ್ ಜಾರ್ಜ್ ಆಸ್ಪತ್ರೆಗೆ (ಕೆಜಿಹೆಚ್) ಭೇಟಿ ನೀಡಿದರು. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲು ಸಂಪೂರ್ಣ ಕ್ರಮಗಳನ್ನು ಜಾರಿಗೆ ತರುವಂತೆ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ. ಅಧಿಕಾರಿಗಳು ಸ್ಫೋಟಕ್ಕೆ ಕಾರಣವಾದ ಅಂಶಗಳನ್ನು ಪರಿಶೀಲಿಸುತ್ತಲೇ ಇದ್ದಾರೆ, ಆದರೆ ಸ್ಥಳೀಯ ಜನರು ಈ ಘಟನೆಯಿಂದ ದಿಗ್ಭ್ರಮೆಗೊಂಡಿದ್ದಾರೆ.