ಹಾರ್ಮುಜ್ ದಿಗ್ಬಂಧನ, ಗಗನಕ್ಕೇರಿದ ತೈಲ ಬೆಲೆ: ಶ್ವೇತಭವನದ ದೊರೆ ಟ್ರಂಪ್ ವಿರುದ್ಧವೇ ತಿರುಗಿಬಿದ್ದ ಸಂಸದರು!

ವಾಷಿಂಗ್ಟನ್: ಅಮೆರಿಕಾದ ಸಂಸತ್ತಿನಲ್ಲಿ ಈಗ ಅಕ್ಷರಶಃ ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಆದರೆ ಇದು ಇರಾನ್ ಗಡಿಯಲ್ಲಿ ನಡೆಯುತ್ತಿರುವ ಯುದ್ಧವಲ್ಲ, ಬದಲಿಗೆ ಶ್ವೇತಭವನದ ದೊರೆ ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕನ್ ಸಂಸದರ ನಡುವೆ ನಡೆಯುತ್ತಿರುವ ಬಿಗ್ ಬ್ಯಾಟಲ್! ಇರಾನ್ ವಿರುದ್ಧದ ಯುದ್ಧದ ವಿಚಾರದಲ್ಲಿ ಅಮೆರಿಕಾದ ಜನಪ್ರತಿನಿಧಿಗಳ ತಾಳ್ಮೆ ಸಂಪೂರ್ಣವಾಗಿ ಕಳೆದುಹೋಗಿದ್ದು, ಟ್ರಂಪ್ ಅವರ ಏಕಪಕ್ಷೀಯ ನಿರ್ಧಾರಕ್ಕೆ ಬ್ರೇಕ್ ಹಾಕಲು ಸಂಸತ್ತು ರಣರಂಗವಾಗಿ ಮಾರ್ಪಟ್ಟಿದೆ.

ಯಾವಾಗ ಇರಾನ್ ಸೇನೆ ಆಯಕಟ್ಟಿನ ‘ಸ್ಟ್ರೈಟ್ ಆಫ್ ಹಾರ್ಮುಜ್’ (Strait of Hormuz) ಜಲಸಂಧಿಗೆ ಬೀಗ ಹಾಕಿತೋ, ಇಡೀ ಜಾಗತಿಕ ಹಡಗು ಸಂಚಾರ ಅಸ್ತವ್ಯಸ್ತಗೊಂಡಿದೆ. ಇದರ ನೇರ ಹೊಡೆತ ಬಿದ್ದಿರುವುದು ಅಮೆರಿಕಾದ ನಾಗರಿಕರ ಜೇಬಿಗೆ! ಅಮೆರಿಕಾದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರಿದ್ದು, ಇದು ಅಲ್ಲಿನ ಸಂಸದರನ್ನು ತೀವ್ರ ಕೆರಳಿಸಿದೆ. ಸಂಸತ್ತಿನ ಯಾವುದೇ ಅನುಮೋದನೆ ಇಲ್ಲದೆ, ಎರಡು ತಿಂಗಳ ಹಿಂದೆ ಟ್ರಂಪ್ ಆರಂಭಿಸಿದ ಈ ಸ್ವಯಂಕೃತ ಯುದ್ಧದಿಂದ ಅಮೆರಿಕನ್ನರು ಬೆಲೆ ತೆರುವಂತಾಗಿದೆ ಎಂಬ ಆಕ್ರೋಶ ಭುಗಿಲೆದ್ದಿದೆ.

ಅಧ್ಯಕ್ಷ ಟ್ರಂಪ್ ಅವರು ಇರಾನ್ ಯುದ್ಧದಿಂದ ಅಮೆರಿಕನ್ ಸೈನ್ಯವನ್ನು ತಕ್ಷಣವೇ ಹಿಂಪಡೆಯುವಂತೆ ಒತ್ತಾಯಿಸಲು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ (ಕೆಳಮನೆ) ಗುರುವಾರ ಮತ್ತೊಂದು ಮಹತ್ವದ ಯುದ್ಧ ಅಧಿಕಾರ ನಿರ್ಣಯದ (War Powers Resolution) ಮೇಲೆ ಹೈ-ವೋಲ್ಟೇಜ್ ಮತದಾನ ನಡೆಯಲಿದೆ. 1973ರ ಐತಿಹಾಸಿಕ ಕಾಯ್ದೆಯನ್ನು ಬಳಸಿಕೊಂಡು ಟ್ರಂಪ್ ಅವರ ಮಿಲಿಟರಿ ಅಧಿಕಾರಕ್ಕೆ ಲಗಾಮು ಹಾಕಲು ಡೆಮೋಕ್ರಾಟ್‌ಗಳು ಸರ್ವಸನ್ನದ್ಧರಾಗಿದ್ದಾರೆ.

ಕಳೆದ ವಾರ ನಡೆದ ಇಂತಹದೇ ಮತದಾನದಲ್ಲಿ ಮೂವರು ರಿಪಬ್ಲಿಕನ್ (ಟ್ರಂಪ್ ಪಕ್ಷದ) ಸಂಸದರು ಪಕ್ಷದ ಗೆರೆ ದಾಟಿ ಯುದ್ಧದ ವಿರುದ್ಧ ಮತ ಚಲಾಯಿಸಿದ್ದರು. ಆಗ ಉಭಯ ಪಕ್ಷಗಳ ನಡುವೆ ಸಮಬಲ ಉಂಟಾಗಿ ನಿರ್ಣಯ ಬಿದ್ದುಹೋಗಿತ್ತು. ಆದರೆ ಈ ಬಾರಿ ಹೌಸ್‌ನಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ!

ಈ ಮಹತ್ವದ ನಿರ್ಣಯದ ಪ್ರಾಯೋಜಕರಾದ ಡೆಮೋಕ್ರಾಟ್ ಸಂಸದ ಗ್ರೆಗೊರಿ ಮೀಕ್ಸ್ ಶ್ವೇತಭವನದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ಸಂಸತ್ತಿಗೆ ತನ್ನದೇ ಆದ ಸಾಂವಿಧಾನಿಕ ಜವಾಬ್ದಾರಿಯಿದೆ. ಸಂಸತ್ತಿನ ಕೆಲಸ ಸರ್ಕಾರದ ಯುದ್ಧದ ಹುಚ್ಚಿಗೆ ಚಪ್ಪಾಳೆ ತಟ್ಟುವುದಲ್ಲ. ಅದರಲ್ಲೂ ಯಾವುದೇ ಸ್ಪಷ್ಟ ಗುರಿಯಿಲ್ಲದ, ದೇಶದ ಮೇಲೆ ಬಲವಂತವಾಗಿ ಹೇರಿದ ಇಂತಹ ಯುದ್ಧವನ್ನು ಬೆಂಬಲಿಸಲು ಸಾಧ್ಯವೇ ಇಲ್ಲ” ಎಂದು ಖಾರವಾಗಿ ಎಚ್ಚರಿಸಿದ್ದಾರೆ.

ವಿಶೇಷವೆಂದರೆ, ಕಳೆದ ವಾರ ಯುದ್ಧದ ಪರವಾಗಿ ನಿಂತಿದ್ದ ಮೈನೆಯ ಏಕೈಕ ಡೆಮೋಕ್ರಾಟ್ ಸಂಸದ ಜ್ಯಾರೆಡ್ ಗೋಲ್ಡನ್ ಕೂಡ ಈ ಬಾರಿ ಟ್ರಂಪ್ ವಿರುದ್ಧ ಮತ ಚಲಾಯಿಸುವುದಾಗಿ ಘೋಷಿಸಿದ್ದಾರೆ. ಇತ್ತೀಚೆಗಷ್ಟೇ ಸೆನೆಟ್‌ನಲ್ಲೂ (ಮೇಲ್ಮನೆ) ನಾಲ್ಕು ರಿಪಬ್ಲಿಕನ್ ಸಂಸದರು ದಂಗೆ ಎದ್ದು ನಿರ್ಣಯಕ್ಕೆ ಬೆಂಬಲ ನೀಡಿದ್ದರು. ಸದ್ಯ ಉಭಯ ಪಕ್ಷಗಳ ಕೆಲವು ಸಂಸದರ ಗೈರುಹಾಜರಿ ಇಡೀ ಮತದಾನದ ದಿಕ್ಕನ್ನು ಬದಲಿಸಬಹುದಾಗಿದ್ದು, ಗುರುವಾರ ಸಂಜೆ ಹೊರಬೀಳಲಿರುವ ಈ ಫಲಿತಾಂಶ ಟ್ರಂಪ್ ಪಾಲಿಗೆ ಅತಿ ದೊಡ್ಡ ರಾಜಕೀಯ ಪೆಟ್ಟಾಗಲಿದೆಯೇ ಎಂಬುದನ್ನು ಇಡೀ ಜಗತ್ತು ಕುತೂಹಲದಿಂದ ನೋಡುತ್ತಿದೆ.

error: Content is protected !!