ತಪ್ಪಿದ ಭಾರಿ ದುರಂತ: ಲ್ಯಾಂಡಿಂಗ್ ವೇಳೆ ರನ್‌ವೇಗೆ ಅಪ್ಪಳಿಸಿದ ಏರ್ ಇಂಡಿಯಾ ವಿಮಾನ

ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನವು ಇಂದು(ಮೇ 21) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ವೇಳೆ ತಾಂತ್ರಿಕ ಅಡಚಣೆಯಿಂದಾಗಿ ವಿಮಾನದ ಹಿಂಭಾಗ ರನ್‌ವೇಗೆ ಬಡಿದು ಭಾರಿ ಅವಘಡವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ್ದು, ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಏರ್ ಲೈನ್ಸ್ ಸಂಸ್ಥೆ ತಿಳಿಸಿದೆ.

ದೆಹಲಿಯಿಂದ 179 ಪ್ರಯಾಣಿಕರನ್ನು ಹೊತ್ತು ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ AI2651 ವಿಮಾನವು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಈ ತಾಂತ್ರಿಕ ಅಡಚಣೆ ಎದುರಾಗಿದೆ. ವಿಮಾನದ ಮುಂಭಾಗದಲ್ಲಿದ್ದ ಮತ್ತೊಂದು ವಿಮಾನದ ಗಾಳಿಯ ತಲ್ಲಣದಿಂದಾಗಿ ವಿಮಾನದ ಬ್ಯಾಲೆನ್ಸ್ ತಪ್ಪಿದೆ ಎನ್ನಲಾಗಿದೆ. ಈ ವೇಳೆ ವಿಮಾನದ ಹಿಂಭಾಗದ ಕೆಳಭಾಗ ರನ್‌ವೇಗೆ ಬಲವಾಗಿ ಉಜ್ಜಿ ಹೋದಂತಾಗಿದೆ.

ಘಟನೆ ನಡೆದ ತಕ್ಷಣ ವಿಮಾನವನ್ನು ಲ್ಯಾಂಡ್ ಮಾಡಲಾಗಿದ್ದು, ಅದರಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಗಿದೆ. ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂದು ಏರ್ ಇಂಡಿಯಾ ಸಂಸ್ಥೆ ಸ್ಪಷ್ಟಪಡಿಸಿದೆ.

ಘಟನೆಯ ಬೆನ್ನಲ್ಲೇ ಹೆಚ್ಚಿನ ತಾಂತ್ರಿಕ ತಪಾಸಣೆಗಾಗಿ ವಿಮಾನವನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲೇ ನಿಲ್ಲಿಸಲಾಗಿದೆ. ಇದರಿಂದಾಗಿ ಬೆಂಗಳೂರಿನಿಂದ ದೆಹಲಿಗೆ ಹಿಂತಿರುಗಬೇಕಿದ್ದ AI2652 ವಿಮಾನದ ಸೇವೆಯನ್ನು ರದ್ದುಗೊಳಿಸಲಾಗಿದ್ದು, ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ವಿಮಾನಯಾನ ಸಂಸ್ಥೆ ತಿಳಿಸಿದೆ.

error: Content is protected !!