ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಇಂಧನ ಮೇಲಿನ ತೆರಿಗೆಯನ್ನು (Tax) ಕಡಿತಗೊಳಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ರಾಜ್ಯದಲ್ಲಿ ಇಂಧನ ತೆರಿಗೆ ಕಡಿತ ಮಾಡುತ್ತೀರಾ ಎಂಬ ಪ್ರಶ್ನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, “ಕೇಂದ್ರ ಸರ್ಕಾರದವರು ಬೆಲೆ ಏರಿಸೋದು, ನಾವು ಕಡಿಮೆ ಮಾಡೋದಾ? ಅವರು ಬೆಲೆ ಏರಿಕೆ ಮಾಡಿದಾಗ ನೀವು ಪ್ರಶ್ನೆ ಮಾಡುವುದೇ ಇಲ್ಲ. ನಾವು ಕಡಿಮೆ ಮಾಡುತ್ತೀರಾ ಅಂತ ಪ್ರಶ್ನೆ ಕೇಳುತ್ತೀರಾ ಹೊರತು, ಅವರು ಯಾಕೆ ಜಾಸ್ತಿ ಮಾಡಿದ್ದಾರೆ ಅಂತ ಕೇಳಲ್ಲ” ಎಂದು ತಿರುಗೇಟು ನೀಡಿದರು.

ಮುಂದುವರಿದು ಕೇಂದ್ರ ಸರ್ಕಾರದ ಇಂಧನ ನೀತಿಯನ್ನು ತರಾಟೆಗೆ ತೆಗೆದುಕೊಂಡ ಸಿಎಂ, “ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗ ದೇಶದಲ್ಲಿ ಇಂಧನ ಬೆಲೆ ಎಷ್ಟಿತ್ತು? ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಪೆಟ್ರೋಲ್ 70 ರೂಪಾಯಿ, ಡೀಸೆಲ್ 48 ರೂಪಾಯಿ ಮತ್ತು ಎಲ್‌ಪಿಜಿ ಗ್ಯಾಸ್ ಬೆಲೆ 414 ರೂಪಾಯಿ ಇತ್ತು. ಈಗ ಬೆಲೆ ಎಷ್ಟಾಗಿದೆ? ಯಾರು ಜಾಸ್ತಿ ಮಾಡಿದ್ದು?” ಎಂದು ಪ್ರಶ್ನಿಸುವ ಮೂಲಕ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಲೆ ಏರಿಕೆಯಿಂದ ಕಂಗಾಲಾಗಿರುವ ರಾಜ್ಯದ ಜನತೆಗೆ ರಾಜ್ಯ ಸರ್ಕಾರದಿಂದ ಏನಾದರೂ ಸಹಾಯ ಅಥವಾ ಸಮ್ಮುಖ ಪರಿಹಾರ ಸಿಗಲಿದೆಯೇ ಎಂಬ ಮಾಧ್ಯಮಗಳ ಮುಂದಿನ ಪ್ರಶ್ನೆಗೆ ಮುಖ್ಯಮಂತ್ರಿಗಳು ಮತ್ತಷ್ಟು ಗರಂ ಆದರು. “ಅವರು ಬೆಲೆ ಜಾಸ್ತಿ ಮಾಡಿದರೆ ನಮಗೆ ತೆರಿಗೆ ಕಡಿಮೆ ಮಾಡಿ ಅಂತ ಯಾಕೆ ಪ್ರಶ್ನೆ ಕೇಳುತ್ತೀರಾ? ನೀವೆಲ್ಲಾ ಕೇಂದ್ರ ಸರ್ಕಾರದ ಪರವಾಗಿದ್ದೀರಾ. ನೀವು ಪ್ರಶ್ನೆ ಕೇಳುವ ಧಾಟಿಯಲ್ಲೇ ಅದು ಗೊತ್ತಾಗುತ್ತದೆ” ಎಂದು ಮಾಧ್ಯಮಗಳ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳ ಈ ಸ್ಪಷ್ಟನೆಯಿಂದಾಗಿ ಸದ್ಯಕ್ಕೆ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ (VAT) ಅಥವಾ ತೆರಿಗೆ ಕಡಿತಗೊಳ್ಳುವುದಿಲ್ಲ ಎಂಬುದು ಸ್ಪಷ್ಟವಾಗಿದ್ದು, ಗ್ರಾಹಕರಿಗೆ ಇಂಧನ ದರದ ಬಿಸಿ ಮುಂದುವರಿಯಲಿದೆ.