🪳!ಇನ್‌ಸ್ಟಾಗ್ರಾಮ್‌ನಲ್ಲಿ ದಾಖಲೆ ಬರೆದ ಕೆಲವೇ ಗಂಟೆಗಳಲ್ಲಿ ʻಕಾಕ್ರೋಚ್ ಜನತಾ ಪಾರ್ಟಿ’ಯ X ಖಾತೆ ನಿರ್ಬಂಧ! 🪳

ನವದೆಹಲಿ: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಆಡಳಿತಾರೂಢ ಬಿಜೆಪಿಯ ಫಾಲೋವರ್ಸ್ ಸಂಖ್ಯೆಯನ್ನು ಮೀರಿಸಿ ಭಾರಿ ಸಂಚಲನ ಮೂಡಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ಗೆ (CJP) ದೊಡ್ಡ ಆಘಾತ ಎದುರಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಸಾಧನೆ ಮಾಡಿದ ಕೆಲವೇ ಗಂಟೆಗಳಲ್ಲಿ, ಭಾರತದಲ್ಲಿ ಸಿಜೆಪಿಯ ಅಧಿಕೃತ ‘X’ (ಟ್ವಿಟರ್) ಖಾತೆಯನ್ನು ಕಾನೂನುಬದ್ಧ ವಿನಂತಿಯ ಮೇರೆಗೆ ನಿರ್ಬಂಧಿಸಲಾಗಿದೆ (Withheld).

ಇನ್‌ಸ್ಟಾಗ್ರಾಮ್‌ನಲ್ಲಿ ದಾಖಲೆ ಬರೆದ ಕೆಲವೇ ಗಂಟೆಗಳಲ್ಲಿ ʻಕಾಕ್ರೋಚ್ ಜನತಾ ಪಾರ್ಟಿ'ಯ X ಖಾತೆ ನಿರ್ಬಂಧ!

ನಿರ್ಬಂಧಕ್ಕೊಳಗಾಗುವ ಮುನ್ನ ಸಿಜೆಪಿಯ ಅಧಿಕೃತ ಎಕ್ಸ್ (X) ಖಾತೆಯು ಕೇವಲ ಕೆಲವೇ ದಿನಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಸಂಪಾದಿಸಿತ್ತು. ವಿಶೇಷವೆಂದರೆ, ಈ ಖಾತೆಯನ್ನು ದೇಶದ ಪ್ರಮುಖ ಪ್ರಭಾವಿ ವ್ಯಕ್ತಿಗಳು ಮತ್ತು ಸಾಮಾಜಿಕ ಹೋರಾಟಗಾರರಾದ ಅರುಂಧತಿ ರಾಯ್, ಪ್ರಶಾಂತ್ ಭೂಷಣ್, ಪ್ರಖ್ಯಾತ ಯುಟ್ಯೂಬರ್ ಧ್ರುವ್ ರಾಠಿ ಹಾಗೂ ಕುನಾಲ್ ಕಮ್ರಾ ಸೇರಿದಂತೆ ಹಲವು ಗಣ್ಯರು ಫಾಲೋ ಮಾಡುತ್ತಿದ್ದರು.

ತಮ್ಮ ಅಧಿಕೃತ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಿರುವ ಕುರಿತು ‘ಕಾಕ್ರೋಚ್ ಜನತಾ ಪಾರ್ಟಿ’ಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. “ನಾವು ಮೊದಲೇ ನಿರೀಕ್ಷಿಸಿದಂತೆಯೇ, ಭಾರತದಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಅಧಿಕೃತ ಖಾತೆಯನ್ನು ತಡೆಹಿಡಿಯಲಾಗಿದೆ” ಎಂದು ಅವರು ಬರೆದುಕೊಂಡಿದ್ದಾರೆ.

ಸಾಮಾನ್ಯವಾಗಿ ನಿಯಮಾವಳಿಗಳ ಪ್ರಕಾರ, ಅಧಿಕೃತ ಸಂಸ್ಥೆಗಳಿಂದ ಸೂಕ್ತ ಮತ್ತು ಕಾನೂನುಬದ್ಧ ವಿನಂತಿಗಳು ಬಂದಾಗ ಎಕ್ಸ್ (X) ಸಂಸ್ಥೆಯು ನಿರ್ದಿಷ್ಟ ದೇಶಗಳಲ್ಲಿ ಅಂತಹ ಖಾತೆಗಳ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸುತ್ತದೆ. ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಸಿಜೆಪಿ ಖಾತೆಯು ಸಕ್ರಿಯವಾಗಿದೆ.

error: Content is protected !!