ಕೂಳೂರು ಬ್ರಿಜ್‌ನಲ್ಲಿ ದಿಢೀರ್‌ ತೇಪೆ : ಸುರತ್ಕಲ್‌ ಸಂಪೂರ್ಣ ಬ್ಲಾಕ್

ಮಂಗಳೂರು: ಹೇಳದೆ ಕೇಳದೆ ಕೂಳೂರು ಬ್ರಿಜ್‌ನಲ್ಲಿ ದಿಢೀರ್‌ ತೇಪೆ ಕಾರ್ಯ ಆರಂಭಿಸಿದ್ದರಿಂದ ಕೊಟ್ಟಾರ ಪ್ವೈವೋವರ್‌ನಿಂದ ಬೈಕಂಪಾಡಿವರೆಗಿನ ಸುರತ್ಕಲ್ ರಸ್ತೆ ಸಂಪೂರ್ಣ ಬ್ಲಾಕ್‌ ಆಗಿ‌ ವಾಹನ ಸವಾರರು ಇನ್ನಿಲ್ಲದ ತೊಂದರೆ ಅನುಭವಿಸಿದ್ದಾರೆ. ತೇಪೆ ನಡೆಸುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಡಳಿತವಾಗಲೀ, ಟ್ರಾಫಿಕ್‌ ಪೊಲೀಸರಾಗಲೀ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದ ಕಾರಣ ವಾಹನ ಸವಾರರು ಮಧ್ಯಾಹ್ನದಿಂದ ರಸ್ತೆಯಲ್ಲೇ ಬಾಕಿಯಾಗಿ ಪರದಾಟ ನಡೆಸುತ್ತಿದ್ದಾರೆ.

ಕಳೆದ ಬಾರಿ ಕೂಳೂರು ಬ್ರಿಜ್‌ ಬಳಿ ಕೇವಲ 50 ಮೀಟರ್ ಇಂಟರ್‌ಲಾಕ್‌ ಅಳವಡಿಸುವ ನೆಪದಲ್ಲಿ ಇಡೀ ಸುರತ್ಕಲ್ ಅನ್ನು ಬ್ಲಾಕ್‌ ಮಾಡಿ ಜಿಲ್ಲಾಡಳಿತ ಸಾರ್ವಜನಿಕರಿಗೆ ಕಷ್ಟ ಕೊಟ್ಟಿತ್ತು. ಇದೀಗೀ ಬಾರಿಯೂ ಜಿಲ್ಲಾಡಳಿತ ಜನರಿಗೆ ಯಾವುದೇ ಮಾಹಿತಿ ನೀಡದೆ ತೇಪೆ ಕಾರ್ಯ ಆರಂಭಿಸಿ ರಸ್ತೆ ಬ್ಲಾಕ್‌ ಮಾಡಿ ವಾಹನ ಸವಾರರಿಗೆ ತೊಂದರೆ ಕೊಟ್ಟಿದೆ. ಕಳೆದ ಬಾರಿ ರಸ್ತೆ ಬಂದ್‌ ಮಾಡಿದ್ದರಿಂದ ಎದೆನೋವಿನಿಂದ ಬಳಲುತ್ತಿದ್ದ ಮಹಿಳೆಯೋರ್ವರು ಸಕಾಲದಲ್ಲಿ ಅಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಲಾಗದೆ ದುರಂತ ಅಂತ್ಯ ಕಂಡಿದ್ದರು ಎಂದು ಸುರತ್ಕಲ್‌ ಪರಿಸರದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕೂಳೂರು ಬ್ರಿಜ್‌ನ ಗೋಳು ಈ ಯುಗದಲ್ಲಿ ಮುಗಿಯುವ ಲಕ್ಷಣವಿಲ್ಲ. ಇಂದು ಯಾವುದೇ ಮಾಹಿತಿ ನೀಡದೆ ಕೂಳೂರು ಬ್ರಿಜ್‌ ತೇಪೆ ಕಾರ್ಯ ನಡೆಸುತ್ತಿರುವುದರಿಂದ ಹೆದ್ದಾರಿ ಸಂಪೂರ್ಣ ಬ್ಲಾಕ್‌ ಆಗಿದೆ. ಕೇವಲ ಐದಾರು ಸಿಬ್ಬಂದಿ ಕಾಟಾಚಾರಕ್ಕೆಂದು ತೇಪೆ ಹಾಕುತ್ತಿದ್ದು, ಇದು ಇಂದು ಮುಗಿಯುವ ಲಕ್ಷಣ ಕಾಣ್ತಾ ಇಲ್ಲ. ಅಂಬ್ಯಲೆನ್ಸ್‌ನವರು ಸಿಕ್ಕ ಸಿಕ್ಕ ಓಣಿಯಲ್ಲಿ ಎದ್ದು ಬಿದ್ದು ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಹರಸಾಹಸ ಪಡುತ್ತಿದ್ದಾರೆ.

ಟ್ರಾಫಿಕ್‌ ಜಾಂನಿಂದ ತಪ್ಪಿಸಿಕೊಳ್ಳಲು ಲಾರಿಯೊಂದು ಕೂಳೂರು ಸರ್ವಿಸ್‌ ರೋಡಿಗಿಳಿದಿತ್ತು. ಈ ವೇಳೆ ಟ್ರಾಫಿಕ್‌ನಲ್ಲಿ ಸಿಲುಕಿದ್ದ ಬಸ್‌ ಚಾಲಕರು ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆಯೂ ನಡೆಯಿತು ಎಂದು ತಿಳಿದು ಬಂದಿದೆ.

ಇಂದು ಮಧ್ಯಾಹ್ನದಿಂದ ಸಂಜೆಯವರೆಗೂ ರಸ್ತೆಯಲ್ಲೇ ವಾಹನ ಬಾಕಿಯಾಗಿದೆ. ಆಸ್ಪತ್ರೆ, ಕೆಲಸ, ಶಾಲೆ, ಇತ್ಯಾದಿ ಕೆಲಸಗಳಿಗೆ ತೆರಳುವ ಜನರೆಲ್ಲಾ ರಸ್ತೆಯಲ್ಲೇ ಬಾಕಿಯಾಗಿದ್ದಾರೆ. ಶಾಲಾ ಮಕ್ಕಳು ಶಾಲೆಗೆ ಹೋಗದೆ ರಜೆಯಾಗಿದದೆ. ಕಳೆದ ಬಾರಿಕೇವಲ 50 ಮೀಟರ್‌ ಇಂಟರ್‌ಲಾಕ್‌ ಹಾಕಲು ರೋಡೆಲ್ಲಾ ಬಂದ್‌ ಮಾಡಿದ್ದ ಜಿಲ್ಲಾಡಳಿತ ಈ ಬಾರಿ ಯಾವುದೇ ಮಾಹಿತಿ ನೀಡದೆ ರಸ್ತೆ ಬಂದ್‌ ಮಾಡಿದ್ದು ಯಾಕೆ? ಎಂದು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾಹನ ದಟ್ಟನೆ ಹೆಚ್ಚಿರುವ ಹಗಲು ಹೊತ್ತಿನಲ್ಲಿಯೇ ರಸ್ತೆಗೆ ತೇಪೆ ಹಾಕಿದ್ದು ಯಾಕೆ? ರಾತ್ರಿ ಇವರಿಗೆ ಪುರ್ಸೊತ್ತು ಇರಲಿಲ್ಲವೇ? ಕೂಳೂರು ವಿಷಯದಲ್ಲಿ ಜಿಲ್ಲಾಡಳಿತ ಯಾಕೆ ಹೀಗೆ ನೀರಲ್ಲಿ ಬಿದ್ದವರ ಹಾಗೆ ವರ್ತಿಸುತ್ತಿದೆ. ಟ್ರಾಫಿಕ್‌ ಪೊಲೀಸರು ಎಲ್ಲಿದ್ದಾರೆ? ಇವರನ್ನು ಹೇಳುವವರು ಕೇಳುವವರು ಯಾರೂ ಇಲ್ಲವಾ? ಜನಪ್ರತಿನಿಧಿಗಳಿಗಾದರೂ ಜವಾಬ್ದಾರಿ ಬೇಡವಾ? ಕೂಳೂರು ಹೊಸ ಸೇತುವೆ ನಿರ್ಮಾಣವಾಗಲು ಎಷ್ಟು ದಿನಬೇಕು ಎಂದು ಜನರು ಆಕ್ರೋಶಿತರಾಗಿ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

 

 

 

 

 

error: Content is protected !!