ಬೆಳ್ತಂಗಡಿ: ಧರ್ಮಸ್ಥಳ ಕಾಡಿನಲ್ಲಿ ಶವಗಳನ್ನು ಹೂತು ಹಾಕಿದ್ದೇನೆ ಎಂದು ನಿಗೂಢ ವ್ಯಕ್ತಿ ತೋರಿಸಿದ ಪಾಯಿಂಟ್ ನಂಬರ್ 11ರ ಶೋಧ ಕಾರ್ಯಾಚರಣೆಯನ್ನು ಎಸ್‌ಐಟಿ ಆರಂಭಿಸಿದೆ. ನೇತ್ರಾವತಿ ಸ್ನಾನಘಟ್ಟದ ಬಳಿಯ ಕಾಡಿನಲ್ಲಿ ಸಾಕ್ಷಿ ದೂರುದಾರ ಗುರುತಿಸಿದ್ದ ಸ್ಥಳಗಳ ಶೋಧ ಕಾರ್ಯಾಚರಣೆ ಇಂದಿಗೆ ಏಳನೇ ದಿನಕ್ಕೆ ಕಾಲಿಟ್ಟಿದೆ.
ನಿನ್ನೆ ಶೋಧಕಾರ್ಯಕ್ಕಾಗಿ ನಿಗದಿಪಡಿಸಿದ 11ನೇ ಪಾಯಿಂಟ್ ಬಿಟ್ಟು, ಹೊಸ ಸ್ಥಳದಲ್ಲಿ ಅಂದರೆ ಪಾಯಿಂಟ್ ನಂಬರ್ 14ರಲ್ಲಿ ಮಹಜರು ನಡೆಸಲಾಗಿದ್ದು, ಈ ವೇಳೆ ನೆಲದ ಮೇಲೆ ಪುರುಷನೋರ್ವನ ಅಸ್ಥಿಪಂಜರ ಸಿಕ್ಕಿತ್ತು ಎನ್ನಲಾಗಿದೆ. ನಿಗೂಢ ವ್ಯಕ್ತಿಯ ಪ್ರಕಾರ, 1998 ರಿಂದ 2014 ರವರೆಗೆ ಧರ್ಮಸ್ಥಳದ ಕಾಡಿನಲ್ಲಿ ಹೂತಿಟ್ಟ ಶವಗಳ ಶೋಧಕಾರ್ಯ ಕಾರ್ಯ ನಡೆಯುತ್ತಿದೆ. ಈ ವೇಳೆ ಒಂದೂವರೆ ವರ್ಷಗಳ ಹಿಂದೆ ಮೃತಪಟ್ಟ ಈ ಪುರುಷನ ದೇಹ, ಅದರೊಂದಿಗೆ ಕೆಲ ಕೊಳೆತ ದೇಹ ಭಾಗ ಪತ್ತೆಯಾಗಿವೆ.
ಇಂದು ಪಾಯಿಂಟ್ ನಂಬರ್ 11ರಲ್ಲಿ ಶೋಧ ಮುಂದುವರಿದಿದ್ದು, ಪ್ರಕರಣ ಭಾರೀ ಕುತೂಹಲ ಕೆರಳಿಸಿದೆ. ಎಸ್ಪಿ ದರ್ಜೆಯ ಅಧಿಕಾರಿ ಜಿತೇಂದ್ರ ಕುಮಾರ್ ದಯಾಮ ಸಹಿತ ಎಸ್ಐಟಿ ಅಧಿಕಾರಿಗಳ ಜೊತೆಗೆ ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಮಂಗಳೂರಿನ ಕೆಎಂಸಿ ವೈದ್ಯರ ತಂಡ, ಎಫ್.ಎಸ್.ಎಲ್. ತಂಡ, ಐ.ಎಸ್.ಡಿ. ಹಾಗೂ ಇತರ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.