ಕೋಲ್ಕತ್ತಾ: ನಕಲಿ ದಾಖಲೆಗಳನ್ನು ಸೃಷ್ಟಿಸಿ ಭಾರತದಲ್ಲಿ ವಾಸಿಸುತ್ತಿದ್ದ ಬಾಂಗ್ಲಾದೇಶದ ಖ್ಯಾತ ಮಾಡೆಲ್ ಓರ್ವಳನ್ನು ಕೋಲ್ಕತ್ತಾದಲ್ಲಿ ಬಂಧಿಸಲಾಗಿದೆ. ಶಾಂತಾ ಪಾಲ್ ಬಂಧಿತ ಆರೋಪಿ. ಈಕೆ ರೀಜೆಂಟ್ ಏರ್ವೇಸ್ (ಬಾಂಗ್ಲಾದೇಶ) ವಿಮಾನಯಾನ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳಲ್ಲದೆ ಮಾಡೆಲ್, ಫುಡ್ ಬ್ಲಾಗರ್ ಕೂಡಾ ಆಗಿದ್ದಳು. ಈಕೆ ಸೃಷ್ಟಿಸಿದ ನಕಲಿ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.
ಈಕೆ 2023 ರಲ್ಲಿ ಬಾಂಗ್ಲಾದೇಶದ ಬಾರಿಸಾಲ್‌ನಿಂದ ಪಾಸ್‌ಪೋರ್ಟ್ ಬಳಸಿ ಭಾರತ ಪ್ರವೇಶಿಸಿ ಬ್ರೋಕರ್ ಮೂಲಕ ಕೋಲ್ಕತ್ತಾದಲ್ಲಿ ಫ್ಲಾಟ್ ಬಾಡಿಗೆಗೆ ಪಡೆದಿದ್ದಳು. ಇಲ್ಲಿ ಈಕೆ ಅಶ್ರಫ್ ಶೇಕ್ ಮೊಹಮ್ಮದ್ ಅಶ್ರಫ್ ಎಂಬಾತನನ್ನು ಮದುವೆಯಾಗಿದ್ದಳು. ಆದರೆ ಗಂಡನ ಕಿರುಕುಳದಿಂದ ಪ್ರತ್ಯೇಕವಾಗಿ ವಾಸಿಸುವ ಸಲುವಾಗಿ ಆಸ್ತಿ ಬ್ರೋಕರ್ ಒಬ್ಬನ ಸಹಾಯದಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಆತನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಬಾಡಿಗೆ ಒಪ್ಪಂದಕ್ಕೆ ಸಹಿ ಹಾಕಲು, ಬ್ರೋಕರ್ ಆಕೆಗೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಯಂತಹ ನಕಲಿ ಭಾರತೀಯ ದಾಖಲೆಗಳನ್ನು ನೀಡಿದ್ದಾನೆ. ಆಕೆಯ ನಕಲಿ ದಾಖಲೆಗಳ ಪ್ರಕಾರ ಈಕೆಯ ಹುಟ್ಟಿದ ವರ್ಷ 1998 ಎಂದು ಸೂಚಿಸಿದೆ. ಈಕೆಯ ವಿವಾಹ ಪ್ರಮಾಣಪತ್ರದ ಪ್ರಕಾರ, ಅವರು ಜೂನ್ 5 ರಂದು ಆಂಧ್ರಪ್ರದೇಶದ ನಿವಾಸಿ ಶೇಕ್ ಮೊಹಮ್ಮದ್ ಅಶ್ರಫ್ ಎಂಬವನನ್ನು ವಿವಾಹವಾಗಿದ್ದು, ಇದನ್ನು ಗಡಿ ಜಿಲ್ಲೆ ನಾಡಿಯಾದಲ್ಲಿ ನೋಂದಾಯಿಸಲಾಗಿದೆ.
ಈಕೆಯ ಇನ್ನೊಂದು ಪಾಸ್‌ಪೋರ್ಟ್‌ನಲ್ಲಿ ಬಾಂಗ್ಲಾದೇಶದ ಹಿಂದೂ ಯುವಕ ಚಂದ್ರಶೀಲ್ ಎಂಬಾತನನ್ನು ಮದುವೆಯಾಗಿರುವ ದಾಖಲೆಗಳಿವೆ. ಈತ ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹಾಗಾಗಿ ಈಕೆಯ ನಡೆ ನಿಗೂಢತೆ ಸೃಷ್ಟಿಸಿದೆ.
ಶಾಂತಾ ಹಾಗೂ ಶೇಕ್ ಮೊಹಮ್ಮದ್ ಅಶ್ರಫ್ ಪಾರ್ಕ್ ಸ್ಟ್ರೀಟ್‌ನಲ್ಲಿ ಅಪಾರ್ಟ್‌ಮೆಂಟ್ ಬಾಡಿಗೆಗೆ ಪಡೆದು ನಂತರ ಗಾಲ್ಫ್ ಗ್ರೀನ್‌ಗೆ ಸ್ಥಳಾಂತರಗೊಂಡು ಒಟ್ಟಿಗೆ ವಾಸಿಸಲು ಪ್ರಾರಂಭಿಸಿದಳು. ಅಶ್ರಫ್ ಶಾಂತಾಗೆ ಕಿರುಕುಳ ನೀಡಿದ್ದಲ್ಲದೆ, ಆಕೆಯ ಪಾಸ್‌ಪೋರ್ಟ್ ಅನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದ ಎಂದು ವರದಿಯಾಗಿದೆ. ಹೀಗಾಗಿ ಈತನಿಂದ ಪ್ರತ್ಯೇಕವಾಗಿ ವಾಸಿಸುವ ಸಲುವಾಗಿ ಸ್ಥಳೀಯ ಏಜೆಂಟ್‌ನ ಸಹಾಯದಿಂದ, ಅವರು ಪಡಿತರ ಚೀಟಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಪ್ಯಾನ್ ಕಾರ್ಡ್ ಸೇರಿದಂತೆ ಹಲವು ಭಾರತೀಯ ಗುರುತಿನ ದಾಖಲೆಗಳನ್ನು ನಕಲಿ ಮಾಡಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಪಾಲ್ ವ್ಯಾಪಾರಿ ನೌಕಾಪಡೆಯಲ್ಲಿ ಕೆಲಸ ಮಾಡುವ ಅಶ್ರಫ್ ಜೊತೆಗೆ ಕೋಲ್ಕತ್ತಾದಲ್ಲಿ ಆಸ್ತಿಗಳನ್ನು ಬಾಡಿಗೆಗೆ ಪಡೆಯಲು ನಕಲಿ ಭಾರತೀಯ ದಾಖಲೆಗಳನ್ನು ಬಳಸಿದ್ದಾರೆ ಎಂದು ಅಧಿಕಾರಿ ಹೇಳಿದರು.
ಶಾಂತಾ 2016 ರಲ್ಲಿ ಇಂಡೋ-ಬಾಂಗ್ಲಾ ಸೌಂದರ್ಯ ಸ್ಪರ್ಧೆಯಲ್ಲಿ ಬಾಂಗ್ಲಾದೇಶವನ್ನು ಪ್ರತಿನಿಧಿಸಿ 2019 ರಲ್ಲಿ ಮಿಸ್ ಏಷ್ಯಾ ಗ್ಲೋಬಲ್ ಆಗಿದ್ದಳು. ಕಳೆದ ಎರಡು ವರ್ಷಗಳಲ್ಲಿ, ಅವರು ತಮಿಳು ಮತ್ತು ಬಂಗಾಳಿ ಚಿತ್ರಗಳಲ್ಲಿ ನಟಿಸಿದ್ದರು ಮತ್ತು ಒಡಿಯಾ ಚಿತ್ರಕ್ಕೂ ಸಹಿ ಹಾಕಿದ್ದಳು. ಮಾಡೆಲಿಂಗ್‌ನಲ್ಲಿ ಯಶಸ್ಸಿನ ನಂತರ, ಅವರು ಬಾಂಗ್ಲಾದೇಶದ ವಿಮಾನಯಾನ ಸಂಸ್ಥೆಗೆ ಸೇರುವ ಮೊದಲು ತಮ್ಮ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾಗಿ ಅಧಿಕಾರಿ ಹೇಳಿದ್ದಾರೆ. ಶಾಂತಾಳನ್ನು ಪ್ರಸ್ತುತ ಆಗಸ್ಟ್ 8 ರವರೆಗೆ ಪೊಲೀಸ್ ಕಸ್ಟಡಿಗೆ ಕೊಡಲಾಗಿದೆ.