ಸುರತ್ಕಲ್: ತಿಂಗಳಿಗೆ ಒಂದು ಸಾವಿರ ಕಂತು ಕಟ್ಟಿದ್ರೆ ಸಾಕು, ಇಂತಿಷ್ಟು ತಿಂಗಳು ಆದ್ಮೇಲೆ ನಿಮಗೆ ಬೇಕಾದ ವಸ್ತು ಪಡೆಯಬಹುದು. ಅಷ್ಟೇ ಅಲ್ಲದೆ ಅದೃಷ್ಟವಿದ್ದರೆ ಪ್ರತೀ ತಿಂಗಳು ನಡೆಯುವ ಡ್ರಾದಲ್ಲಿ ಬಂಪರ್ ಬಹುಮಾನ ನಿಮ್ಮದಾಗಿಸಿಕೊಳ್ಳಬಹುದು. ಹೀಗೆಂದು ಪ್ರಚಾರ ಮಾಡಿರುವ ಸುರತ್ಕಲ್, ಕಾಟಿಪಳ್ಳ, ಕೃಷ್ಣಾಪುರ ಪರಿಸರದ ಲಕ್ಕಿ ಸ್ಕೀಮ್ ಗಳನ್ನು ನಂಬಿ ಸಾವಿರಾರು ಮಂದಿ ಮಹಿಳೆಯರು, ಯುವಕರು ಕೋಟ್ಯಂತರ ರೂಪಾಯಿ ಹಣವನ್ನು ತೊಡಗಿಸಿದ್ದು ಈಗ ಅವುಗಳೆಲ್ಲ ಜನರನ್ನು ಬೋಳಿಸುವ ಸ್ಕೀಮ್ ಆಗಿ ಬದಲಾಗಿವೆ.
ಸುರತ್ಕಲ್, ಕಾಟಿಪಳ್ಳ, ಕೃಷ್ಣಾಪುರ ಪರಿಸರದಲ್ಲಿ ಇಂತಹ ಹತ್ತಾರು ಸ್ಕೀಮ್ ಗಳಿವೆ. ಇವುಗಳಲ್ಲಿ ಒಂದೆರಡು ಸ್ಕೀಮ್ ಗಳು ಮಾತ್ರ ನಿಯತ್ತಾಗಿ ವ್ಯವಹಾರ ಮಾಡ್ಕೊಂಡಿದ್ರೆ ಇನ್ನುಳಿದ ಸ್ಕೀಮ್ ಗಳು 10-12 ಸೀಸನ್ ಮುಗಿಯುತ್ತಿದ್ದಂತೆ ಜನರಿಗೆ ಟೋಪಿ ಹಾಕಲು ಕಾಯ್ತಾ ಕುಳಿತಿವೆ.
ಕೆಲವು ದಿನಗಳ ಹಿಂದೆ ಕಾಟಿಪಳ್ಳ ಸಂಶುದ್ದಿನ್ ಸರ್ಕಲ್ ನಲ್ಲಿನ ಬಿಎಂಆರ್ ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿದ್ದ ನ್ಯೂ ಇಂಡಿಯಾ ಸ್ಕೀಮ್ ನ ವ್ಯವಸ್ಥಾಪಕನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ಸೀಸನ್ ನಲ್ಲಿ ಆರ್ಥಿಕ ಸಮಸ್ಯೆಎದುರಾಗಿದೆ ಆದಷ್ಟು ಬೇಗ ಪರಿಹಾರವಾಗುತ್ತೆ ಅದಕ್ಕಾಗಿ ಕಳೆದ ನಾಲ್ಕು ತಿಂಗಳುಗಳಿಂದ ಟೈಮ್ ಮೇಲೆ ಟೈಮ್ ಕೇಳುತ್ತಲೇ ಬಂದಿದ್ದು ಇಲ್ಲಿಯವರೆಗೆ ಯಾರಿಗೂ ಹಣ ಪಾವತಿ ಮಾಡಿಲ್ಲ. ಈಗ ಗಡುವು ಮುಗಿದ ಬಳಿಕ ಇನ್ನೂ 40 ದಿನ ಕೊಡಿ ಎನ್ನುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ ಹತ್ತಾರು ಕೋಟಿ ರೂ. ಸ್ಕೀಮ್ ಹೆಸರಲ್ಲಿ ವಂಚನೆ ನಡೆದಿದೆ. ಇದರ ಬೆನ್ನಿಗೆ ಇನ್ನೊಂದು ಸ್ಕೀಮ್ ವ್ಯವಸ್ಥಾಪಕ ಕುರೈಶ್ ಕಾಟಿಪಳ್ಳ ಎಂಬವನ ಮೆಸೇಜ್ ಹರಿದಾಡುತ್ತಿದೆ. ನ್ಯೂ ಶೈನ್ ಎಂಟರ್‌ಪ್ರೈಸಸ್‌ನ ಹೆಸರಿನಲ್ಲಿ ಸ್ಕೀಮ್ ಕಟ್ಟಿದ್ದ ಜನರು ಇದನ್ನು ನೋಡಿ ಕಂಗಾಲಾಗಿದ್ದಾರೆ. ಎಲ್ಲವೂ ನಿರೀಕ್ಷೆಯಂತೆಯೇ ನಡೆಯುತ್ತಿದೆ ಎನ್ನುವಾಗ ಅನಿರೀಕ್ಷಿತವಾಗಿ ಕೆಲವರು ಮಳಿಗೆಗೆ ನುಗ್ಗಿ ಅಲ್ಲಿರುವ ಕೆಲವು ವಸ್ತುಗಳನ್ನು ಎತ್ತಿ ಕೊಂಡು ಹೋಗಿದ್ದಾರೆ. ಈ ಘಟನೆ ನಮ್ಮ ನಿರೀಕ್ಷೆಗೆ ವಿರೋಧವಾಗಿದ್ದು, ನಮಗೆಲ್ಲಾ ಬೇಸರ ತಂದಿದೆ. ನೀವು ಬಯಸಿದ ವಸ್ತುಗಳನ್ನು ಜುಲೈ 30ರಿಂದ ನಾವು ಹಸ್ತಾಂತರಿಸಲು ಸಿದ್ಧರಾಗಿದ್ದೇವೆ. ಆದ್ದರಿಂದ ದಯವಿಟ್ಟು ಸ್ವಲ್ಪ ಸಹನೆ ವಹಿಸಿ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಬರೆಯಲಾಗಿದೆ. ಜುಲೈ ಹೋಗಿ ಆಗಸ್ಟ್ ಕಳೆದರೂ ಯಾರಿಗೂ ಹಣ, ಸೊತ್ತು ಮರಳಿಸಲಾಗಿಲ್ಲ.
ಶೈನ್ ಎಂಟರ್ ಪ್ರೈಸಸ್ ಸ್ಕೀಮ್ ಗ್ರಾಹಕರು ಆತನನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಅಂದಿನಿಂದ ಶೈನ್ ಬಾಗಿಲು ಪರ್ಮನೆಂಟ್ ಆಗಿ ಮುಚ್ಚಲಾಗಿದೆ. ಇದರ ಮಧ್ಯೆ ಕಾಟಿಪಳ್ಳ ಸಂಶುದ್ದಿನ್ ಸರ್ಕಲ್ ನಲ್ಲಿನ ಗ್ರೀನ್ ಲೈಟ್ ಎನ್ನುವ ಸ್ಕೀಮ್ ಕಚೇರಿ ಕೂಡ ಮುಚ್ಚಿದ್ದು ಬೋರ್ಡ್ ತೆಗೆದು ಕೆಳಗೆ ಇರಿಸಲಾಗಿದೆ.
ಲಕ್ಕಿ ಸ್ಕೀಮ್ ಗಳು ಮುಖ್ಯವಾಗಿ ಯುವತಿಯರು, ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡಿದ್ದು ಕೋಟ್ಯಂತರ ರೂಪಾಯಿ ಸಂಗ್ರಹಿಸುವುದಲ್ಲದೆ ಕಾರ್, ಫ್ಲ್ಯಾಟ್, ಬೈಕ್, ಸ್ಕೂಟರ್, ಚಿನ್ನಾಭರಣ ನೀಡುವುದಾಗಿ ಆಸೆ ಹುಟ್ಟಿಸುತ್ತಿವೆ. ಇವುಗಳನ್ನು ನಂಬಿದ ಗ್ರಾಹಕರು ಕಂತು ಕಟ್ಟಿ ಮುಗಿಸುವಷ್ಟರಲ್ಲಿ ಸ್ಕೀಮ್ ಬಂದ್ ಮಾಡಿ ಫೋನ್ ಸ್ವಿಚ್ ಆಫ್ ಮಾಡಿಬಿಡುತ್ತಾರೆ. ಇಂತಹ ಸ್ಕೀಮ್ ಗಳ ಬಗ್ಗೆ ಸುರತ್ಕಲ್ ಪೊಲೀಸರು ಕಣ್ಣಿಡದಿದ್ದಲ್ಲಿ ಮುಂದೆ ಇನ್ನಷ್ಟು ಸ್ಕೀಮ್ ಗಳು ಇಲ್ಲಿ ತಲೆ ಎತ್ತಲಿದೆ ಅನ್ನುವುದು ಸಾರ್ವಜನಿಕರ ಅಭಿಪ್ರಾಯ.