ಸುರತ್ಕಲ್: ಅಮೋನಿಯಾ ಸೋರಿಕೆಯಿಂದ ಉಸಿರಾಟದ ಸಮಸ್ಯೆಗೆ ತುತ್ತಾಗಿ ಸುಮಾರು 25ಕ್ಕೂ ಅಧಿಕ ಮಂದಿ ಕಾರ್ಮಿಕರು ಅಸ್ವಸ್ಥಗೊಂಡಿದ್ದು, ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಸುರತ್ಕಲ್ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಕೈಗಾರಿಕೆಯೊಂದರ ಸ್ಥಾವರದಲ್ಲಿ ಈ ದುರ್ಘಟನೆ ಸಂಭವಿಸಿದೆ. ಗಂಭೀರ ಸ್ಥಿತಿಯಲ್ಲಿರುವ ನಾಲ್ವರು ಕಾರ್ಮಿಕರು ಉತ್ತರ ಭಾರತ ಮೂಲದವರು ಎಂದು ತಿಳಿದುಬಂದಿದ್ದು, ಇವರನ್ನು ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿದೆ.
Representative Image
ಸುಮಾರು 200ಕ್ಕೂ ಅಧಿಕ ಕಾರ್ಮಿಕರಿರುವ ಈ ಕಂಪೆನಿಯಲ್ಲಿ ಸಂಜೆಯ ಪಾಳಿಯ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾಗ ನಿನ್ನ ಸಂಜೆ ಸುಮಾರು 4.30ರ ಸುಮಾರಿಗೆ ಸ್ಥಾವರದ ಒಳಗಿರುವ ಪೈಪ್‌ನಲ್ಲಿ ಅಮೋನಿಯಾ ಸೋರಿಕೆತಯಾಗಿ ಕಾರ್ಮಿಕರಿಗೆ ಉಸಿರುಗಟ್ಟಿ ಬೊಬ್ಬೆ ಹೊಡೆದಿದ್ದಾರೆ. ತಕ್ಷಣ ಸೈರನ್ ಮೊಳಗಿಸಿ ಕಾರ್ಮಿಕರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿತ್ತು. ಆದರೆ ಅಷ್ಟರಲ್ಲಿ ಸುಮಾರು 25ಕ್ಕೂ ಅಧಿಕ ಕಾರ್ಮಿಕರು ಅಸ್ವಸ್ಥಗೊಂಡು ನಾಲ್ವರು ಗಂಭೀರ ಸ್ಥಿತಿಗೆ ತಲುಪಿದ್ದಾರೆ.
ಕಂಪೆನಿಗೆ ಸ್ಥಳೀಯ ಎಂಸಿಎಫ್ ಸಹಿತ ಅಗ್ನಿಶಾಮಕ ಪಡೆಯು ಧಾವಿಸಿ ಕಾರ್ಯಾಚರಣೆ ನಡೆಸಿತು. ಅಲ್ಲದೆ ಮಂಗಳೂರು ತಹಶೀಲ್ದಾರ್, ಉಪತಹಶೀಲ್ದಾರ್, ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತುರ್ತು ಮಾಹಿತಿ ಪಡೆದುಕೊಂಡರು. ಪಣಂಬೂರು ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಕಾನೂನು ಕ್ರಮ ಜರಗಿಸಿದ್ದಾರೆ. ಅಮೋನಿಯ ಸೋರಿಕೆ ನಿಯಂತ್ರಿಸಲಾಗಿದೆ ಎಂದು ತಿಳಿದುಬಂದಿದೆ.