ಬೆಳ್ತಂಗಡಿ: ವಿವಾಹಿತ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮರೋಡಿಯಲ್ಲಿ ಜು.28 ರಂದು ಸಂಭವಿಸಿದ್ದು, ಇಂದು ಬೆಳಕಿಗೆ ಬಂದಿದೆ. ಮರೋಡಿ ಗ್ರಾಮದ ಮೂಕಾಂಬಿಕಾ ನಿಲಯ ಪಚ್ಚಡಿ ಮನೆಯ ವಾಣಿಶ್ರೀ (26 ವ) ಮೃತಪಟ್ಟ ದುರ್ದೈವಿ. ಈಕೆಯದ್ದು ಆತ್ಮಹತ್ಯೆಯೋ ಅಥವಾ ಇನ್ನೇಮಾದರೂ ದುರ್ಘಟನೆ ನಡೆಯಿತೋ ಎನ್ನುವ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಾಣಿಶ್ರೀಗೆ ಕಳೆದೊಂದು ವರ್ಷದ ಹಿಂದೆ ಪ್ರಶಾಂತ್ ಜೊತೆ ಮದುವೆಯಾಗಿದ್ದು, ಎಲ್ಲರೊಂದಿಗೂ ಉತ್ತಮ ಒಡನಾಟ ಹೊಂದಿದ್ದರು ಎನ್ನಲಾಗಿದೆ. ಆದರೆ ನಿನ್ನೆ ವಿಪರೀತ ಹೊಟ್ಟೆನೋವೆಂದು ಪಕ್ಕದ ದೊಡ್ಡಮ್ಮ ಮನೆಗೆ ಹೋಗಿದ್ದರು. ಅವರು ಕೂಡಲೇ ವಾಣಿಶ್ರೀ ಪತಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೂಲಗಳ ಪ್ರಕಾರ ಈಕೆ ವಿಷ ಸೇವಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಘಟನಾ ಸ್ಥಳಕ್ಕೆ ವೇಣೂರು ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.