ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನದಿ ದಡದ ಅರಣ್ಯ ಪ್ರದೇಶದಲ್ಲಿ ಅನಾಮಿಕ ವ್ಯಕ್ತಿ ಸುಮಾರು 20 ವರ್ಷಗಳ ಹಿಂದೆ ಶವಗಳನ್ನು ಹೂತಿದ್ದ ಜಾಗವನ್ನು ಸುಮಾರು 4.5 ಅಡಿಗಳವರೆಗೆ ಅಗೆಯಲಾಗಿದ್ದು, ಇದುವರೆಗೆ ಯಾವುದೇ ಕಳೇಬರಹ ದೊರೆತಿಲ್ಲ ಎನ್ನಲಾಗಿದೆ. ಅಗೆಯುವಾಗ ನೀರು ನುಗ್ಗಿ ಬರುತ್ತಿರುವುದಲ್ಲದೆ, ಮರಳು ಕುಸಿಯುತ್ತಿರುವುದು ಕೂಡಾ ಕಾರ್ಯಾಚರಣೆಗೆ ಅಡಚಣೆಯಾಗುತ್ತಿದೆ.
ಅನಾಮಿಕ ವ್ಯಕ್ತಿ ತೋರಿಸಿದ 13 ಪಾಯಿಂಟ್‌ಗಳ ಪೈಕಿ ಮೊದಲ ಪಾಯಿಂಟ್ ಅನ್ನು ಸುಮಾರು 4.5 ಅಡಿವರೆಗೆ ಅಗೆಯಲಾಗಿದ್ದು, ಅಲ್ಲಿಯ ತನಕ ಯಾವುದೇ ಕಳೆಬರಹ ಕಂಡುಬಂದಿಲ್ಲ. ಹಾದರೆ ಮುಸಕುಧಾರಿ ಇದೇ ಸ್ಥಳದಲ್ಲಿ ಶವ ಇದೆ ಎಂದು ಸ್ಪಷ್ಟವಾಗಿ ಹೇಳುತ್ತಿರುವುದರಿಂದ ಇನ್ನಷ್ಟು ಆಳವಾಗಿ ಹಾಗೂ ಅಕ್ಕಪಕ್ಕದ ಸ್ಥಳವನ್ನು ಕೂಡಾ ಅಗೆಯಲು ಎಸ್‌ಐಟಿ ನಿರ್ಧರಿಸಿದೆ.
ಅನಾಮಧೇಯ ಮುಸುಕುಧಾರಿ ಎಸ್‌ಐಟಿ ಅಧಿಕಾರಿಗಳ ಜೊತೆಗೆ ಇನ್ನಷ್ಟು ಆಳವಾಗಿ ಅಗೆಯಲು ಮನವಿ ಮಾಡಿರುವ ಹಿನ್ನೆಲೆ ಹಿಟಾಚಿ ಮೂಲಕ 1ನೇ ಮಾರ್ಕಿಂಗ್ ಜಾಗದಲ್ಲೇ ಇನ್ನಷ್ಟು ಅಗೆಯಲು ಸೂಚನೆ ನೀಡಲಾಗಿದೆ. ಇಲ್ಲಿ ಅಗೆದ ಬಳಿಕ ಎರಡು ಹಾಗೂ ಮೂರನೇ ಪಾಯಿಂಟ್‌ಗಳನ್ನು ಅಗೆಯಲು ನಿರ್ಧರಿಸಲಾಗಿದೆ. ಮೊದಲ ಪಾಯಿಂಟ್‌ನಲ್ಲಿ ಜೆಸಿಬಿ ಮೂಲಕ ಸುಮಾರು 12 ಅಡಿಗಳಷ್ಟು ಗುಂಡಿ ತೆಗೆಯಲು ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ. ಸದ್ಯ ಅನಾಮಧೇಯ ವ್ಯಕ್ತಿ ಹೇಳುವವರೆಗೂ ಉತ್ಖನನ ಕಾರ್ಯವನ್ನು ಮುಂದುವರೆಸುವುದಾಗಿ ಎಸ್‌ಐಟಿ ಮೂಲಗಳು ಮಾಹಿತಿ ನೀಡಿವೆ.
ಮೊದಲ ಪಾಯಿಂಟ್‌ನಲ್ಲಿ ಸುಮಾರು 4 ಅಡಿ ಅಗೆದಾಗಲೂ ಏನು ಸಿಗದೇ ಇದ್ದಾ ಮತ್ತಷ್ಟು ಅಡಿ ಉತ್ಖನನ ಸೂಚಿಸಿದ್ದಾನೆ. ಹೀಗಾಗಿ ಹಿಟಾಚಿ ಮೂಲಕ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಇದೀಗ ಪಾಯಿಂಟ್ ನಂಬರ್ 1 ಸ್ಥಳಕ್ಕೆ ಡಿಐಜಿ ಅನುಚೇತ್ ಭೇಟಿ ನೀಡಿ ಅನಾಮಿಕನ ಜೊತೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಆತ ಇನ್ನಷ್ಟು ಆಳ ತೋಡಲು ಮನವಿ ಮಾಡಿದ್ದಾನೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಜೆಸಿಬಿ ಮೂಲಕ ಉತ್ಖನನ ಮಾಡಲು ಎಸ್‌ಐಟಿ ಅಧಿಕಾರಿಗಳು ನಿರ್ಧರಿಸಿದ್ದಾರೆ.