ಸನಾ: ಯೆಮೆನ್‌ನಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ಭಾರತದ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರ ಕಚೇರಿ ಈ ಮಾಹಿತಿ ನೀಡಿದೆ. ಆದರೆ ಈ ವರದಿಗಳನ್ನು ವಿದೇಶಾಂಗ ಸಚಿವಾಲಯ ನಿರಾಕರಿಸಿದೆ.
ಸೋಮವಾರ (ಜುಲೈ 28) ಸುನ್ನಿ ನಾಯಕ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ಕಚೇರಿ, ಯೆಮೆನ್ ಪ್ರಜೆ ತಲಾಲ್ ಅಬ್ದೋ ಮಹ್ದಿ ಅವರ ಹತ್ಯೆಯ ಆರೋಪದಲ್ಲಿ ಮರಣದಂಡನೆ ಶಿಕ್ಷೆಯಲ್ಲಿರುವ ಮಲಯಾಳಿ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಯೆಮೆನ್ ರಾಜಧಾನಿ ಸನಾದಲ್ಲಿ ಹೌತಿ ಮಿಲಿಟಿಯಾ ರದ್ದುಗೊಳಿಸಿದ್ದಾಗಿ ಹೇಳಿತ್ತು. ಈತನ್ಮಧ್ಯೆ ನಿಮಿಷಪ್ರಿಯಾ ಮರಣದಂಡನೆ ರದ್ದುಪಡಿಸಲಾಗಿದೆ ಎಂಬ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಿಂದ ಹಿಂಪಡೆಯಲಾಗಿದೆ ಎಂಬ ಸುದ್ದಿಯೂ ಹರಿದಾಡಿತ್ತು. ಆದರೆ ಇದನ್ನು ಕಾಂತಪುರಂ ಕಚೇರಿ ನಿರಾಕರಿಸಿದೆ. ಗ್ರ್ಯಾಂಡ್ ಮುಫ್ತಿ ಕಚೇರಿ ಮಾಹಿತಿ ಪ್ರಕಾರ, ಯೆಮೆನ್ ರಾಜಧಾನಿ ಸನಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಶಿಕ್ಷೆ ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದ್ರೆ ಯೆಮನ್ ಸರ್ಕಾರದಿಂದ ಅಧಿಕೃತ ಲಿಖಿತ ಪ್ರಕಟಣೆ ಬಂದಿಲ್ಲ ಎಂದೂ ಸಹ ಸ್ಪಷ್ಟಪಡಿಸಲಾಗಿದೆ.
ಮರಣ ದಂಡನೆ ಸಂಪೂರ್ಣ ರದ್ದಾದ ಬಗ್ಗೆ ಗ್ರ್ಯಾಂಡ್ ಮುಫ್ತಿ ಕಚೇರಿ ಹೇಳಿಕೆಯನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ. ಶಿಕ್ಷೆ ಸಂಪೂರ್ಣ ರದ್ದಾಗಿರುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯಾಗಲಿ, ಲಿಖಿತ ಆದೇಶವಾಗಲಿ ಬಂದಿಲ್ಲ. ನಿಮಿಷಾ ಪ್ರಕರಣದ ಕುರಿತು ಕೆಲ ವ್ಯಕ್ತಿಗಳು ಹಂಚಿಕೊಳ್ಳುತ್ತಿರುವ ಮಾಹಿತಿ ತಪ್ಪಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. ಕೇಂದ್ರ ಸರ್ಕಾರ ಅಧಿಕೃತ ಪ್ರಕಟಣೆಯ ಬಳಿಕ ಸ್ಪಷ್ಟ ಮಾಹಿತಿ ಹೊರಬೀಳಲಿದೆ.