ಬೆಳ್ತಂಗಡಿ: ಧರ್ಮಸ್ಥಳದ ಅರಣ್ಯದಲ್ಲಿ ಅನಾಮಧೇಯ ವ್ಯಕ್ತಿ ತಾನು ಎಲ್ಲೆಲ್ಲಾ ಶವಗಳನ್ನು ಹೂತು ಹಾಕಿದ್ದೇನೆಂದು ತಿಳಿಸಿದ್ದಾನೋ ಆ ಸ್ಥಳಗಳಲ್ಲಿರುವ ಹೆಣಗಳ ಕಳೇಬರ ತೆಗೆಯುವ ಕಾರ್ಯಾಚರಣೆಗೆ ಎಸ್‌ಐಟಿ ತಂಡ ಚಾಲನೆ ಇಂದು ನೀಡಿದೆ. ಇಂದು ವಿಶೇಷವಾಗಿ ವೈದ್ಯರ ತಂಡ ಕೂಡಾ ಎಸ್‌ಐಟಿ ಜೊತೆ ಸೇರಿದೆ.
ಇಂದು ಮುಂಜಾನೆಯ ಎಸ್.ಐ.ಟಿ ಕಚೇರಿಗೆ ಆಗಮಿಸಿದ ಅಧಿಕಾರಿಗಳು ಹಲವು ಸುತ್ತಿನ ಚರ್ಚೆ ನಡೆಸಿದ್ದಾರೆ. ಮಂಗಳೂರು ಕೆಎಂಸಿ ಆಸ್ಪತ್ರೆಯ ವೈದ್ಯರಾದ ಡಾ.ಜಗದೀಶ್ ರಾವ್ ಮತ್ತು ಡಾ.ರಶ್ಮಿ ಅವರನ್ನೊಳಗೊಂಡ ವೈದ್ಯಕೀಯ ಎಂಡ ಎಸ್.ಐ.ಟಿ ಜೊತೆ ಸೇರಿದೆ. ನಿನ್ನೆ ಅನಾಮಧೇಯ ವ್ಯಕ್ತಿ ಗುರುತಿಸಿದ ಸ್ಥಳಗಳನ್ನು ಲಾಕ್ ಮಾಡಲಾಗಿದ್ದು, ಇಂದು ಒಂದೊಂದೇ ಗುಂಡಿಗಳನ್ನು ಅಗೆಯುವ ಕಾರ್ಯಾಚರಣೆ ಆರಂಭಗೊಳ್ಳಲಿದೆ.
ನಿನ್ನೆ ಗುರುತಿಸಲಾದ ಸ್ಥಳದಲ್ಲಿ 12 ಮಂದಿ ಕಾರ್ಮಿಕರ ತಂಡ ಗುಂಡಿ ಅಗೆಯಲಿದೆ. ಅಲ್ಲಿ ಪ್ರತಿಯೊಂದು ವಸ್ತುಗಳನ್ನೂ ವಿಧಿವಿಜ್ಞಾನ ತಂಡ ಕಲೆ ಹಾಕಿ ಪ್ರಯೋಗಾಲಯಕ್ಕೆ ಕಳಿಸಲಿದೆ. ಅಲ್ಲಿ ಸಿಗುವ ಮಣ್ಣಿನಿಂದ ಹಿಡಿದು, ಪ್ಲಾಸ್ಟಿಕ್, ಬಟ್ಟೆ, ಎಲುಬು ಇತ್ಯಾದಿಗಳೂ ಕೂಡಾ ವೈಜ್ಞಾನಿಕ ಪರೀಕ್ಷೆಗೊಳಪಡಲಿದೆ. ಈ ಎಲ್ಲಾ ದೃಶ್ಯಗಳನ್ನೂ ಶೂಂಟಿಂಗ್ ಮಾಡಲಾಗುತ್ತದೆ.
ಡಿಐಜಿ ಅನುಚೇತ್, ಎಸ್.ಐ.ಟಿ. ತನಿಖಾಧಿಕಾರಿ ಜಿತೇಂದ್ರ ದಯಾಮ, ಎಸ್ಪಿ ಸೈಮನ್, ಪುತ್ತೂರು ವಿಭಾಗ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಮ್ ಸಹಿತ ಕಂದಾಯ, ಅರಣ್ಯ, ಎಫ್.ಎಸ್.ಎಲ್.ನ ಸೋಕೋ ವಿಭಾಗ, ಎ.ಎನ್.ಎಫ್., ಆಂತರಿಕ ಭದ್ರತಾ ದಳ, ಪೊಲೀಸ್ ತಂಡ ಕಾರ್ಯಾಚರಣೆಗಿಳಿಸಿದೆ. ಹೀಗಾಗಿ ಈ ಪ್ರಕರಣ ಪತ್ತೆದಾರಿ ಸಿನಿಮಾದಂತೆ ಒಂದೊಂದು ತಿರುವನ್ನು ಪಡೆಯುತ್ತಾ ರೋಚಕ ಘಟ್ಟ ತಲುಪುತ್ತಿದೆ.