ಇಂದು ನಾಡಿನೆಲ್ಲೆಡೆ ನಾಗರಪಂಚಮಿಯನ್ನು ಭಕ್ತಿ, ಶ್ರದ್ಧಾಪೂರ್ವಕವಾಗಿ ಆಚರಿಸಲಾಗುತ್ತಿದೆ. ತುಳುವರಿಗೆ ಕುಟುಂಬದ ದೈವ ಹಾಗೂ ನಾಗಮೂಲಸ್ಥಾನದ ಆರಾಧನೆ ಕಡ್ಡಾಯ. ನಾಗಮೂಲದ ವಿಶೇಷತೆ ಏನೆಂದರೆ ಒಂದೇ ಕುಟುಂಬದ ಒಂದೇ ಗೋತ್ರ(ಬಳಿ) ಜನರು ಒಟ್ಟು ಸೇರಿ ನಾಗದೇವರಿಗೆ ಹಾಲೆರೆಯುವುದಾಗಿದೆ.
ನಾಗನಿಗೆ ಹಾಲೆರೆಯುವ ಒಂದು ಕುಟುಂಬದ ಜನರು ಸಹೋದರ ಸಹೋದರಿಯರ ಸಂಬಂಧವರಾಗಿರುತ್ತಾರೆ. ಮುಖ್ಯವಾಗಿ ಮದುವೆ ಮಾಡಿಕೊಟ್ಟ ಹೆಣ್ಣು ಆಷಾಢ(ಆಟಿ) ಮಾಸದಲ್ಲಿ ತವರು ಬಂದು ಸೇರುತ್ತಾಳೆ. ಆಗ ಸಹೋದರ-ಸಹೋದರಿ ತನ್ನ ಮಕ್ಕಳೊಂದಿಗೆ ಸೇರಿ ನಾಗಮೂಲಸ್ಥಾನಕ್ಕೆ ಹೋಗಿ ನಾಗನಿಗೆ ತಂಬಿಲ ಸಲ್ಲಿಸಿ ಬರುತ್ತಾರೆ. ಹಾಗಾಗಿ ಇದನ್ನು ಸಹೋದರ-ಸಹೋದರಿಯರ ಹಬ್ಬವೆಂದೂ ಕರೆಯುತ್ತಾರೆ.
ತನ್ನ ಕುಟುಂಬದ ವಂಶಾಭಿವೃದ್ಧಿ, ದೃಷ್ಟಿದೋಶ, ನಾಗದೋಷ, ಪಿತೃದೋಷ ಪರಿಹಾರ, ನಾಗಬೀದಿ ಇವೆಲ್ಲಾ ನಾಗ ಸಂತುಷ್ಟನಾಗದಿದ್ದರೆ ಆಗುವ ಅಪಾಯಗಳು. ಇದೊಂದು ಪ್ರಕೃತಿಯ ಹಬ್ಬವಾಗಿರುವುದರಿಂದ ಯಾವ ಜಾಗದಲ್ಲಿ ಯಾವ ವಸ್ತುಗಳು ಯಾವುದು ಇರಬೇಕು ಅದೇ ಜಾಗದಲ್ಲಿ ಇರಬೇಕು ಎನ್ನುವುದನ್ನು ನಾಗಾರಾಧನೆ ಸೂಚಿಸುತ್ತದೆ. ಹಾಗಾಗಿ ತುಳುನಾಡಿನ ಪ್ರಕಾರ ನಾಗ ಒಂದು ವಾಸ್ತು ಕೂಡಾ ಆಗಿದೆ.
ನಾಗಬೀದಿ ಇರುವ ಜಾಗದಲ್ಲಿ ಮನೆ ಕಟ್ಟಬಾರದು ಎಂದು ನಮ್ಮ ಹಿರಿಯರು ಹೇಳಿದಾಗ ಈಗಿನವರಿಗೆ ನಗು ಬರಬಹುದು, ಆದರೆ ನಾಗ ತನ್ನ ಸರಹದ್ದು ದಾಟಿ ಹೋಗುವುದುದಿಲ್ಲ. ತನ್ನಿಂದ ಹುಟ್ಟಿದ ಮರಿಗಳೂ ಕೂಡಾ ಅದೇ ಸರಹದ್ದಿನಲ್ಲಿಯೇ ಬೆಳೆಯುತ್ತದೆ. ಹಾಗಾಗಿ ನಾಗ ತನ್ನ ದಾರಿಯನ್ನು ಮೊದಲೇ ಗುರುತು ಹಾಕಿರುತ್ತದೆ. ಆ ಹಾದಿಯಲ್ಲಿ ನಾವೇನಾದರೂ ಮನೆ ಕಟ್ಟಿದರೆ ನಾಗನ ಹಾದಿ ಬಂದ್ ಆಗುತ್ತದೆ. ಆಗ ಆ ನಾಗ ಸತ್ತು ಹೋಗಬಹುದು. ಅಲ್ಲದೆ ಅವುಗಳು ಇಡೀ ಪರಿವಾರವೇ ನಾಶವಾಗುತ್ತದೆ. ಒಂದು ಜಾಗದಿಂದ ಸಿಕ್ಕ ನಾಗನನ್ನು ಬಚಾವ್ ಮಾಡಿ ನಾವು ಕಾಡಿಗೆ ಬಿಟ್ಟರು ಆ ಸರಹದ್ದಿನ ನಾಗಗಳು/ಕಳಿಂಗಗಳು ದಾಳಿ ಮಾಡಿ ಇದನ್ನು ಕೊಂದು ಹಾಕುತ್ತದೆ. ಇದು ವೈಜ್ಞಾನಿಕವಾಗಿ ಸಾಬೀತಾದ ಸತ್ಯ. ಹಾಗಾಗಿ ನಾಗಾರಾಧನೆ ವೈಜ್ಞಾನಿಕ ದೃಷ್ಟಿಯುಳ್ಳ ಪರಿಪೂರ್ಣ ಹಬ್ಬ.
ಜೀವಂತ ಹಾವಿಗೆ ಪೂಜಿಸುವ ಪದ್ಧತಿ ತುಳುನಾಡಲ್ಲಿ ಇಲ್ಲ:
ಕೆಲವರು ಕಲ್ಲಿನ ನಾಗಕ್ಕೆ ಪೂಜೆ ಮಾಡುವುದರ ಬದಲು ಜೀವಂತ ನಾಗಕ್ಕೆ ಪೂಜೆ ಮಾಡಬೇಕು ಎಂದು ವಿವರಣೆ ನೀಡುತ್ತಾರೆ. ಮುಖ್ಯವಾಗಿ ತುಳುನಾಡಲ್ಲಿ ಜೀವಂತ ನಾಗನಿಗೆ ಪೂಜೆ ಮಾಡುವ ಆಚರಣೆಯೂ ಇಲ್ಲ. ಅಲ್ಲದೆ ಒಂದು ಜಾಗದಲ್ಲಿ ಬಂದ ಹಾವನ್ನು ಹಿಡಿದು ಇನ್ನೊಂದು ಕಡೆಗೆ ಸಾಗಿಸುವ ಕ್ರಮವೂ ಇರಲಿಲ್ಲ. ಯಾರಾದರೂ ಮನೆಗೆ ನಾಗ ಬಂದರೆ ಅದನ್ನು ಮನೆಯ ಯಜಮಾನನೇ ಕುಟುಂಬದ ನಾಗನಿಗೆ ಕೈ ಮುಗಿದು, ಅವನಿಗೊಂದು ತಂಬಿಲ ಹೇಳಿ, ಮನುಷ್ಯರಲ್ಲಿ ಮಾತಾಡುವಂತೆ ಬುದ್ಧಿ ಹೇಳಿ ಕಳಿಸುತ್ತಿದ್ದರು. ಕೆಲವೊಮ್ಮೆ ನಾಗಗಳು ಮನುಷ್ಯನ ಮಾತನ್ನು ಅರ್ಥ ಮಾಡಿದಂತೆ ಹೋಗುತ್ತಿದ್ದವು.
ಒಂದು ವೇಳೆ ನಾಗ ಹೋಗದಿದ್ದರೆ ಊರಿನ ಅರ್ಚಕರನ್ನು ಕರೆಸಿ, ಅವರಿಂದ ಮಂತ್ರ ಮಾಡಿಸಿ, ಅಥವಾ ಕುರಿನೀರ್ ಹಾಕಿಸಿ ಕಳಿಸುತ್ತಿದ್ದರು.
ಆದರೆ ಈಗ ಯಾರಾದರೂ ಮನೆಗೆ ನಾಗ ಬಂದರೆ ಸಾಕು, ಅದನ್ನು ಉರಗ ಹಿಡಿಯುವವರಿಗೆ ಕರೆ ಮಾಡಿ ಅದನ್ನು ಹಿಡಿದು ಕಾಡಿನಲ್ಲಿ ಬಿಡುತ್ತಾರೆ. ಆದರೆ ಹಾಗೆ ಕಾಡಿಗೆ ಹೋದ ನಾಗ ಇನ್ನೊಂದು ನಾಗಸಂತತಿಯ ಸರಹದ್ದನ್ನು ಪ್ರವೇಶಿಸುತ್ತದೆ. ಅವುಗಳು ಈ ಹಾವನ್ನು ನುಂಗಿ ಹಾಕುವ ಸಾಧ್ಯತೆ ಇದೆ. ತುಳುನಾಡಿಲ್ಲಿ ಹಾವುಗಳು ಬಂದರೆ ಅವುಗಳು ಎರಡು- ಮೂರು ದಿನ ಇದ್ದರು ಕೊನೆಗೆ ತಾನಾಗಿಯೇ ಹೋಗುತ್ತದೆ. ಮನೆಯಲ್ಲಿ ಇಲಿಗಳ ಸಂಖ್ಯೆ ಜಾಸ್ತಿ ಆದರೆ ಹಾವು ಬರುವುದು ಸಾಮಾನ್ಯ. ಹಾಗಾಗಿ ಊರಿಗೆ ನಾಗ ಬಂದರೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಸ್ವಲ್ಪ ಎಚ್ಚರಿಕೆಯಿಂದ ಇದ್ದರೆ ಸಾಕು.
ತುಳುನಾಡಲ್ಲಿ ಬೇರೆ ಬೇರೆ ದೇವರಿಗೆ ಸೇರಿದ ನಾಗಗಳಿವೆ:
ಹೌದು ತುಳುನಾಡಲ್ಲಿ ಬೇರೆ ಬೇರೆ ದೇವರಿಗೆ ಸೇರಿದ ನಾಗಗಳಿವೆ. ಮುಖ್ಯವಾಗಿ ಜುಮಾದಿ, ಮೈಸಂದಾಯ, ರಕ್ತೇಶ್ವರಿ ಇರುವ ಜಾಗದಲ್ಲಿ ನಾಗನ ಕಲ್ಲು ಇರುತ್ತದೆ. ದೇವಸ್ಥಾನಗಳಿಗೆ ಸಂಬಂಧಪಟ್ಟ ನಾಗರ ಕಲ್ಲುಗಳಿವೆ. ಕುಟುಂಬದ ನಾಗಗಳು, ಸ್ಥಳ ಮಹಿಮೆಯಿಂದ ಇರುವ ನಾಗ, ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಬಂಧಪಟ್ಟ ನಾಗರ ಕಟ್ಟೆಗಳಿರುತ್ತದೆ. ಹಾಗಾಗಿ ಒಂದೊಂದು ನಾಗರ ಕಟ್ಟೆಗಳಿಗೂ ಪೂಜಾ ವಿಧಿ ವಿಧಾನಗಳು ಭಿನ್ನವಾಗಿರುತ್ತದೆ.
ನಾಗಮೂಲಸ್ಥಾನ- ಕುಟುಂಬದ ದೈವ
ತುಳುನಾಡಿನ ಜನರಿಗೆ ಮುಖ್ಯವಾಗಿ ನಾಗಮೂಲಸ್ಥಾನ ಹಾಗೂ ಕುಟುಂದಬ ದೈವಗಳು ಮುಖ್ಯವಾಗಿರುತ್ತದೆ. ಕುಟುಂಬದ ದೈವಗಳಿಗೆ ನಮ್ಮ ಗತಿಸಿದ ಪೂರ್ವಜರನ್ನು ಕುಟುಂಬಕ್ಕೆ ಸೇರಿಸಲಾಗುತ್ತದೆ. ತುಳುನಾಡಲ್ಲಿ ಪುನರ್ಜನ್ಮದ ಕಲ್ಪನೆಯೇ ಭಿನ್ನವಾಗಿರುತ್ತದೆ. ಒಂದು ಕುಟುಂಬದ ವ್ಯಕ್ತಿ ಗತಿಸಿದ ಬಳಿಕ ಅವನಿಗೆ ಶ್ರಾದ್ಧಾ ಮಾಡಿ, ರಾತ್ರಿ ಅಕ್ಕಿ-ಹುಂಡಿ, ಕೋಳಿ ಮಾಡಿ ಕುಲೆಗಳಿಗೆ ಬಡಿಸುವ ಕ್ರಮ ಇದೆ. ಕುಟುಂಬದ ದೈವಗಳಿಗೆ ಸೇರಿಸುವವರೆಗೂ ನಮ್ಮ ಗತಿಸಿದವರ ಆತ್ಮ ನಮ್ಮ ಜೊತೆಯೇ ಇರುತ್ತದೆ. ಕಟುಂಬದ ಅಗೆಲ್‌ನ ಸಂದರ್ಭ ನಮ್ಮ ಅಗಲಿದ ನಮ್ಮ ಸದಸ್ಯರನ್ನು ಒಂದು ತೆಂಗಿನಕಾಯಿಯಲ್ಲಿ ಪ್ರತಿಷ್ಠಾಪಿಸಿ ಅದನ್ನು ಕುಟುಂಬದ ಮನೆಗೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಪದಿನಾಜೆಕ್ ಸೇರ್ಸಾವುನು ಎಂಬ ಕ್ರಮವಿದೆ. ದೈವಗಳಿಗೆ ಅಗೆಲ್ ಆದ ಬಳಿಕ ಹದಿನಾರು ಕೊಡಿ ಎಲೆಯಲ್ಲಿ ಕೋಳಿಯೂಟ ಬಡಿಸಿ, ಗತಿಸಿದವರಿಗೂ ಪ್ರತ್ಯೇಕವಾಗಿ ಬಡಿಸಲಾಗುತ್ತದೆ. ಅವರ ಇಷ್ಟದ ಬಟ್ಟೆ, ಊಟ, ತಿಂಡಿಯನ್ನು ಇಡುವ ಕ್ರಮವಿದೆ. ಕೊನೆಗೆ ಕುಟುಂಬದ ಮನೆಯ ಯಜಮಾನ ಪ್ರಾರ್ಥಿಸಿ, ನೀವು ನಮ್ಮ ಪೂರ್ವಜರೊಂದಿಗೆ ಚೆನ್ನಾಗಿರಿ, ಕಾಲಕಾಲಕ್ಕೆ ಹರಿಸಿ ಎಂದು ಹೇಳಿದ ಬಳಿಕ ಆ ಆತ್ಮ ನಮ್ಮ ದೈವಗಳ ಪಾದ ಸೇರುತ್ತದೆ ಎನ್ನುವ ಕ್ರಮ ಇದೆ.
ಅದೇ ರೀತಿ ನಾಗಮೂಲವೂ ಅಷ್ಟೆ. ನಮ್ಮ ನಾಗಮೂಲ ಬದಲಾಗಬಾರದು ಎಂಬ ಕ್ರಮವಿದೆ. ನಾಗಮೂಲ ನಮ್ಮ ವಂಶವನ್ನು ಸೂಚಿಸುತ್ತದೆ. ಒಂದು ವೇಳೆ ನಮ್ಮ ನಾಗಮೂಲ ಬದಲಾದರೆ ನಮ್ಮ ವಂಶವೂ ಬದಲಾಗುತ್ತದೆ. ಹೀಗಾದರೆ ಸಹೋದರ-ಸಹೋದರಿಯರು ಮದುವೆಯಾಗುವ ಸಾಧ್ಯತೆ ಇರುತ್ತದೆ. ಇದಕ್ಕಾಗಿಯೇ ನಾಗಮೂಲ ಬದಲಾಗದಂತೆ ನಮ್ಮ ಹಿರಿಯರು ತೀರಾ ಎಚ್ಚರಿಕೆ ವಹಿಸುತ್ತಿದ್ದರು.
-ಗಿರಿ
(ಈ ಬರೆಹಕ್ಕೆ ಸಂಬಂಧಿಸಿ ಚರ್ಚೆಗಳಿಗೆ ಸದಾ ಸ್ವಾಗತ- ನಿಮ್ಮ ಬರಹಗಳನ್ನು vopkudla@gmail.com ಕ್ಕೆ ಕಳಿಸಬಹುದು)