ಉಡುಪಿ: ಕಾರಣಿಕ ತಾಣವಾಗಿರುವ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಹೆಬ್ಬಾಗಿಲಿನ ಬೀಗ ಮುರಿದು ಕಳವಿಗೆ ಯತ್ನಿಸಿ ಕಳ್ಳನೊಬ್ಬ ಕೆಲವೇ ಕ್ಷಣಗಳಲ್ಲಿ ಮೂರ್ಚೆ ತಪ್ಪಿ ಬಿದ್ದಿದ್ದು ಈ ವೇಳೆ ಆತನ ಜೊತೆಗಿದ್ದ ಕಳ್ಳ ಕೂಡಾ ಸ್ಥಳೀಯರ ವಶವಾದ ಘಟನೆ ಇಂದು ನಸುಕಿನ ಜಾವ ನಡೆದಿದೆ. ಘಟನೆಯಲ್ಲಿ ಕೇರಳ ಮೂಲದ ಇಬ್ಬರು ಕುಖ್ಯಾತ ಕಳ್ಳರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ನಸುಕಿನ ಜಾವ ದೇವಸ್ಥಾನದಲ್ಲಿ ಕಳ್ಳರ ಕೃತ್ಯ ಗಮನಿಸಿದ ಕಾವಲುಗಾರ ಬೊಬ್ಬಿಟ್ಟಿದ್ದು ಈ ವೇಳೆ ಕಾವಲುಗಾರನಿಗೆ ಚಾಕು ತೋರಿಸಿ ಜೀವಬೆದರಿಕೆಯೊಡ್ಡಿ ಪಲಾಯನಗೈದಿದ್ದಾರೆ. ಕಾವಲುಗಾರ ಸ್ಥಳೀಯರಿಗೆ ಮಾಹಿತಿ ನೀಡಿದ್ದು ಅವರು ಓಡೋಡಿ ಬಂದಿದ್ದಾರೆ. ಸ್ಥಳೀಯರು ಹುಡುಕಾಟ ನಡೆಸಿದಾಗ ಕಡಿಯಾಳಿ ಪೆಟ್ರೋಲ್ ಬಂಕ್ ಬಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಇಬ್ಬರು ಆರೋಪಿಗಳು ಅವಿತಿದ್ದು ಅದರಲ್ಲಿ ಒಬ್ಬ ಮೂರ್ಚೆ ಹೋಗಿದ್ದ. ಆತನನ್ನು ಉಪಚರಿಸುತ್ತಿದ್ದ ಇನ್ನೊಬ್ಬ ಕಳ್ಳ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಮೂರ್ಚೆ ಹೋದ ಕಳ್ಳನಿಗೆ ಸ್ಥಳೀಯರು ಉಪಚರಿಸಿ ಆಸ್ಪತ್ರೆಗೆ ದಾಖಲಿಸಿದ್ದು ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಡಿಯಾಳಿ ಮಹಿಷಮರ್ಧಿನಿ ಕ್ಷೇತ್ರ ಅನೇಕ ಕಾರಣಿಕ ಘಟನೆಗಳಿಗೆ ಪ್ರಸಿದ್ಧಿ ಪಡೆದಿದ್ದು ಕಳ್ಳರು ಸೆರೆಸಿಗಲು ದೇವಿಯೇ ಕಾರಣ ಎಂದು ಭಕ್ತರು ಹರ್ಷ ವ್ಯಕ್ತಪಡಿಸಿದ್ದಾರೆ.