ಉಡುಪಿ: ಉಡುಪಿಯ ರಾಷ್ಟ್ರೀಯ ಹೆದ್ದಾರಿ-66 ಹಾಗೂ ಇಲ್ಲಿನ ಪ್ರಮುಖ ರಸ್ತೆಗಳು ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಿತ್ತುಹೋಗಿ ಹೊಂಡ ಗುಂಡಿಗಳಿಂದ ತುಂಬಿ ಹೋಗಿದೆ. ಹಾಗಾಗಿ ಇದನ್ನು ಕೂಡಲೇ ಸರಿಪಡಿಸುವಂತೆ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಬಾರಿ ಕರಾವಳಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಹೀಗೆ ನಿರಂತರವಾಗಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಉಡುಪಿ ನಗರದ ಪ್ರಮುಖ ರಸ್ತೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿ 66ರ ರಸ್ತೆ ಕಿತ್ತು ಹೋಗಿ ಹೊಂಡ ಗುಂಡಿಗಳಿಂದ ತುಂಬಿ ಹೋಗಿವೆ. ಇದರಿಂದ ವಾಹನ ಸಂಚಾರಕ್ಕೆ ಬಹಳಷ್ಟು ತೊಡಕಾಗಿದೆ. ಉಡುಪಿ ಜಿಲ್ಲೆಯ ಉಡುಪಿ ನಗರಸಭೆ ವ್ಯಾಪ್ತಿಯ ರಸ್ತೆಗಳ ಅವ್ಯವಸ್ಥೆಯ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿವೆ. ಮಳೆಗಾಲಕ್ಕೆ ಎರಡು ಮೂರು ತಿಂಗಳ ಹಿಂದೆಯಷ್ಟೇ ಉಡುಪಿ ನಗರಸಭೆಯಿಂದ ರಸ್ತೆಗಳಿಗೆ ತೇಪೆ ಹಾಕುವ ಕಾರ್ಯ ಮಾಡಲಾಗಿತ್ತು. ಆದರೆ ನಿರಂತರ ಮಳೆಯಿಂದಾಗಿ ಇಲ್ಲಿನ ಡಾಂಬರು ಕಿತ್ತು ಹೋಗಿ ಮತ್ತೆ ಹೊಂಡಮಯವಾಗಿವೆ. ನಗರದ ಕಿನ್ನಿಮುಲ್ಕಿ ಸ್ವಾಗತ ಗೋಪುರ ಸಮೀಪದ ರಸ್ತೆ ಸಂಪೂರ್ಣ ಹಾಳಾಗಿದ್ದು, ಕನ್ನರ್ಪಾಡಿಯಿಂದ ಕಿನ್ನಿಮುಲ್ಕಿವರೆಗಿನ ರಸ್ತೆಯುದ್ದಕ್ಕೂ ಬೃಹತ್ ಆಕಾರದ ಹೊಂಡಗಳು ಸೃಷ್ಟಿಯಾಗಿವೆ. ಈ ಬಗ್ಗೆ ವಾಹನ ಸವಾರರಿಗೆ ಅಪಾಯದ ಎಚ್ಚರಿಕೆ ನೀಡುವ ಹಿನ್ನೆಲೆಯಲ್ಲಿ ಸ್ಥಳೀಯರು ಹೊಂಡಕ್ಕೆ ಗಿಡಗಳನ್ನು ನೆಟ್ಟಿದ್ದಾರೆ. ಇದೇ ವಾರ್ಡ್ ಗೋವಿಂದ ಕಲ್ಯಾಣ ಮಂಟಪ ರಸ್ತೆ ಕೂಡ ಮಳೆಯಿಂದ ಸಂಪೂರ್ಣ ಹಾಳಾಗಿದೆ.
ನಗರದ ಜೋಡುರಸ್ತೆಯ ಜಂಕ್ಷನ್‌ನಲ್ಲಿಯೇ ದೊಡ್ಡ ಹೊಂಡ ಬಿದ್ದಿರುವುದರಿಂದ ಹಳೆ ತಾಲೂಕು ಕಚೇರಿಯಿಂದ ಬಂದ ವಾಹನಗಳು ʻಯೂʼ ಟರ್ನ್ ಮಾಡಲು ಮತ್ತು ಅಜ್ಜರಕಾಡು ರಸ್ತೆಯಿಂದ ಕೋರ್ಟ್ ರಸ್ತೆಗೆ ಹೋಗುವ ವಾಹನಗಳಿಗೆ ತೊಂದರೆಯಾಗುತ್ತಿದೆ. ಹೊಂಡದಲ್ಲಿ ನೀರು ತುಂಬಿರುವುದರಿಂದ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ಕಳೆದುಕೊಳ್ಳುತ್ತಿರುವುದಾಗಿ ವರದಿಯಾಗಿದೆ. ಹಾಗಾಗಿ ಅಪಘಾತಗಳಾಗಿ ಹೆಚ್ಚಿನ ಜೀವಹಾನಿಯಾಗುವುದನ್ನು ತಡೆಯಲು ಸಾರ್ವಜನಿಕ ಹಿತದೃಷ್ಟಿಯಿಂದ ಉಡುಪಿ ನಗರಸಭೆ ರಸ್ತೆಗಳ ಅವ್ಯವಸ್ಥೆಯನ್ನು ಸರಿಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಮಂಜುನಾಥ ಭಂಡಾರಿ ಸೂಚಿಸಿದ್ದಾರೆ.