ಬಿರಿಯಾನಿ ಯಾರಿಗಿಷ್ಟ ಇಲ್ಲ ಹೇಳಿ. ನಾನ್ ವೆಜ್ ಪ್ರಿಯರು ಬಿರಿಯಾನಿ ತುಂಬಾ ಇಷ್ಟಪಡುತ್ತಾರೆ. ಹಲವಾರು ಬಗೆಯ ಬಿರಿಯಾನಿಗಳನ್ನು ನಾವು ತಿಂದಿರುತ್ತೇವೆ ಅದರಲ್ಲಿ ಮುಖ್ಯವಾಗಿ ಚಿಕನ್ ಬಿರಿಯಾನಿ, ಚಿಕನ್ ಧಮ್ ಬಿರಿಯಾನಿ, ದೊನ್ನೆ ಬಿರಿಯಾನಿ, ಮಟನ್ ಬಿರಿಯಾನಿ, ಫಿಶ್ ಬಿರಿಯಾನಿ, ಮಶ್ರೂಮ್ ಬಿರಿಯಾನಿ, ಪನೀರ್ ಬಿರಿಯಾನಿ ಹೀಗೆ ಬಿರಿಯಾನಿಗಳ ಪಟ್ಟಿ ದೊಡ್ಡದಿದೆ. ಆದರೆ ಈ ವೀಕೆಂಡ್ ನೀವು ಘಮ್ಮೆನ್ನುವ “ಹೈದ್ರಾಬಾದಿ ಚಿಕನ್ ಬಿರಿಯಾನಿ” ಮಾಡ್ಕೊಂಡು ತಿನ್ನಿ. ಅದನ್ನು ಮಾಡೋದ್ ಹೇಗೆ ಅಂತ ನೋಡ್ಕೊಂಡು ಬನ್ನಿ.
ಬೇಕಾಗುವ ಸಾಮಗ್ರಿಗಳು:
ಚಿಕನ್ 1 ಕೆಜಿ , ಬಾಸ್ಮತಿ ಅಕ್ಕಿ 4 ಕಪ್, ಈರುಳ್ಳಿ 5-6, ಟೊಮೆಟೋ 2. ಪುದೀನಾ 1ಕಟ್ಟು , ಕೊತ್ತಂಬರಿ ಸೊಪ್ಪು 1 ಕಟ್ಟು. ಹಸಿ ಮೆಣಸು 7-8, ಶುಂಠಿ-ಬೆಳ್ಳುಳ್ಳಿ ಪೇಸ್ಟ್ 5 ಚಮಚ , ಮೊಸರು 1ಕಪ್, ಚಕ್ಕೆ, ಲವಂಗ, ಪಲಾವ್ ಎಲೆ, ಜೀರಿಗೆ ಸ್ವಲ್ಪ, ಅರಿಶಿನ ಪುಡಿ ಸ್ವಲ್ಪ ಖಾರದ ಪುಡಿ 2 ಚಮಚ, ಲಿಂಬೆ ರಸ. ತುಪ್ಪ /ಎಣ್ಣೆ 7 ಚಮಚ. ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ:
ಚಿಕನ್ ಅನ್ನು ನೀರಿನಲ್ಲಿ ತೊಳೆದು ನಿಮಗೆ ಬೇಕಾಗುವ ರೀತಿಯಲ್ಲಿ ಕಟ್ ಮಾಡಿ ಒಂದು ಬೌಲ್ ಗೆ ಹಾಕಿ, ಮೊಸರು ಅರಿಶಿನ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ ಹಾಗೂ ಉಪ್ಪನ್ನು ಸೇರಿಸಿ ಸುಮಾರು 30 ನಿಮಿಷಗಳ ಕಾಲ ಬಿಡಿ. ಅಕ್ಕಿಯನ್ನು ತೊಳೆದು ನೀರಿನಲ್ಲಿ 15ನಿಮಿಷಗಳ ಕಾಲ ನೆನೆಸಿರಿ. ಪುದೀನಾ, ಕೊತ್ತಂಬರಿ ಸೊಪ್ಪು ಮತ್ತು ಹಸಿಮೆಣಸನ್ನು ಮಿಕ್ಸಿಗೆ ಹಾಕಿ ರುಬ್ಬಿಟ್ಟುಕೊಳ್ಳಿ, ಒಂದು ಕುಕ್ಕರಿಗೆ ತುಪ್ಪ /ಎಣ್ಣೆಯನ್ನು ಹಾಕಿ ಚಕ್ಕೆ, ಲವಂಗ, ಪಲಾವ್ ಎಲೆ, ಏಲಕ್ಕಿ, ಜೀರಿಗೆ ಹಾಕಿ ಫ್ರೈ ಮಾಡಿಕೊಳ್ಳಿ .ನಂತರ ಈರುಳ್ಳಿ, ಟೊಮೆಟೋ ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಫ್ರೈ ಮಾಡಿಕೊಳ್ಳಿ. ನಂತರ ಮಿಕ್ಸ್ ಮಾಡಿಕೊಂಡಿದ್ದ ಚಿಕನ್ ಗೆ ಲಿಂಬೆ ರಸ ಹಾಕಿ ರುಬ್ಬಿಟ್ಟುಕೊಂಡಿದ್ದ ಮಸಾಲವನ್ನು ಹಾಕಿ ಮಿಕ್ಸ್ ಮಾಡಿ ಸುಮಾರು 10 ನಿಮಿಷಗಳ ಕಾಲ ಬೇಯಿಸಿರಿ. ನಂತರ ನೆನೆಸಿಟ್ಟ ಅಕ್ಕಿಯನ್ನು ಹಾಕಿ ಅದರ ಜೊತೆಗೆ 3 ಕಪ್ ನೀರನ್ನು ಸೇರಿಸಿ ಒಂದು ಕುದಿ ಬಂದ ನಂತರ ಕುಕ್ಕರಿನ ಮುಚ್ಚಳವನ್ನು ಹಾಕಿ ಎರಡು ವಿಷಲ್ ತೆಗೆಯಿರಿ. ಬಿಸಿ-ಬಿಸಿಯಾದ ಹೈದರಾಬಾದ್ ಚಿಕನ್ ಬಿರಿಯಾನಿ ಮೊಸರು ಸಲಾಡ್ ನೊಂದಿಗೆ ಸವಿಯಲು ಸಿದ್ಧ. ಮನೆಯವರೊಂದಿಗೆ ಎಂಜಾಯ್ ಮಾಡಿ.