ಶೀಘ್ರದಲ್ಲೇ ಮರಳು, ಕೆಂಪುಕಲ್ಲು ಸಮಸ್ಯೆ ಪರಿಹಾರವಾಗುತ್ತಾ? ರಮಾನಾಥ ರೈ ಹೇಳಿದ್ದೇನು?

ಮಂಗಳೂರು: ಕೆಂಪು ಕಲ್ಲಿಗೆ ಕೇರಳದಲ್ಲಿ ರಾಜಧನ(ರಾಯಲ್ಟಿ) ಕಡಿಮೆ ಇದ್ದರೆ, ನಮ್ಮಲ್ಲಿ ಜಾಸ್ತಿ ಇದೆ. ಕೇರಳದಲ್ಲಿ ಕೆಂಪು ಕಲ್ಲು ರಾಯಲ್ಟಿ 2 ರೂ., ಇದ್ದರೆ ಕರ್ನಾಟಕದಲ್ಲಿ 280 ರೂ. ಇದೆ. ಇದನ್ನು ಕಡಿಮೆ ಮಾಡುವ ಸಲುವಾಗಿ ಸಂಬಂಧಿಸಿದ ಸಚಿವರು, ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೇನೆ. ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಯಲಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಳು ಸಮಸ್ಯೆಗೆ ಹಿಂದಿನ ಬಿಜೆಪಿ ಸರ್ಕಾರವೇ ಹೊಣೆ ಎಂದು ಹರಿಹಾಯ್ದರು.

ಜಿಲ್ಲೆಯಲ್ಲಿ ಕೆಂಪು ಕಲ್ಲು, ಮರಳು ಅಭಾವದಿಂದಾಗಿ ಜನ ಸಾಮಾನ್ಯರಿಗೆ, ಕಟ್ಟಡ ಕಾರ್ಮಿಕರಿಗೆ ಸಮಸ್ಯೆ ಆಗಿದೆ. ಪರ್ಮಿಟ್ ನೀಡುವ ಕಾರ್ಯ ಆರಂಭಗೊಂಡರೆ ಸಮಸ್ಯೆ ನಿವಾರಣೆಯಾಗಲಿದೆ. ಬಿಜೆಪಿ ಶಾಸಕರಿಗೆ ಜನರ ಕಾಳಜಿ ಇದ್ದರೆ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವಂತೆ ಆಗ್ರಹಿಸಿದರು. ಕೆಂಪು ಕಲ್ಲು, ಮರಳು ಸಿಗುತ್ತಿಲ್ಲವೆಂದು ರಸ್ತೆಯಲ್ಲಿ ನಿಂತು ಮಾತನಾಡುವುದು ಜನಪ್ರತಿನಿಧಿಗಳ ಜವಾಬ್ದಾರಿಯಲ್ಲ. ಆದರೆ ದ.ಕ. ಜಿಲ್ಲೆಯ ಬಿಜೆಪಿ ಶಾಸಕರು ಅದನ್ನೇ ಮಾಡುತ್ತಿರುವುದು ವಿಪರ್ಯಾಸ ಎಂದರು.

ಮರಳು, ಕೆಂಪುಕಲ್ಲು ಅಭಾವದ ಬಗ್ಗೆ ನಾನು ಮುಖ್ಯ ಮಂತ್ರಿಯ ಗಮನ ಸೆಳೆದಿದ್ದೇನೆ. ಆದರೆ ಈಗಿನ ವ್ಯವಸ್ಥೆಯಿಂದಾಗಿ ಸ್ವಲ್ಪ ಸಮಸ್ಯೆಯಾಗಿದೆ. ಇವೆರಡೂ ಜನಸಾಮಾನ್ಯರಿಗೆ ಸುಲಭವಾಗಿ ಸಿಗುವಂತೆ ಮಾಡಲು ವ್ಯವಸ್ಥೆಯನ್ನು ಸರಳೀಕರಣ ಮಾಡಲಾಗುವುದು. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಸಿಆರ್ ಝಡ್ ವ್ಯಾಪ್ತಿಯಲ್ಲೂ ರಾಜ್ಯ ಮತ್ತು ಕೇಂದ್ರದ ಅನುಮತಿ ಪಡೆದು ಮರಳುಗಾರಿಕೆಗೆ ಅವಕಾಶ ಕಲ್ಪಿಸಿದ್ದೆ. ಆದರೆ ಪರಿಸರ ಇಲಾಖೆ ಅನುಮತಿ ಸಿಗದೆ ಸಿಆರ್ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಂತಿತು. ನನ್ನ ಅವಧಿಯಲ್ಲಿ ನಾನ್ಸಿಆರ್ ಝಡ್‌ನಲ್ಲೂ ಮರಳೆತ್ತಲು ಮರಳು ಬ್ಲಾಕ್ಗಳನ್ನು ಗುರುತಿಸಿ, ಪರ್ಮಿಟ್ಗಳನ್ನು ನೀಡಲಾಗಿತ್ತು. ಆದರೆ ಆ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ನಾನ್ ಸಿಆರ್ಝಡ್‌ ವ್ಯಾಪ್ತಿಯಲ್ಲಿ ಪರ್ಮಿಟ್ ನೀಡಲು ಆಸಕ್ತಿ ವಹಿಸದೆ. ಅಕ್ರಮ ಮರಳುಗಾರಿಕೆಗೆ ಪೋತ್ಸಾಹ ನೀಡಿತ್ತು ಎಂದು ರಮಾನಾಥ ರೈ ಗಂಭೀರ ಆರೋ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮನಪಾ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಬ್ಲಾಕ್ ಅಧ್ಯಕ್ಷರಾದ ಜೆ.ಅಬ್ದುಲ್ ಸಲೀಮ್, ಪ್ರಕಾಶ್ ಸಾಲ್ಯಾನ್, ಶುಭೋದಯ ಆಳ್ವ, ಜಾರ್ಜ್, ನಝೀರ್ ಬಜಾಲ್ ಉಪಸ್ಥಿತರಿದ್ದರು.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!