ಮಂಗಳೂರು: ಪೌರಕಾರ್ಮಿಕನಾಗಿ ಕೆಲಸ ಮಾಡಿದ ವ್ಯಕ್ತಿ ಪರಾರಿಯಾಗಿ, ನಾಳೆ ನಾನು ಸತ್ಯ ಹೇಳದಿದ್ದರೆ ಸಮಸ್ಯೆ ಉಂಟಾಗಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದು, ನಾನು ಮಾಡಿದ ಕೃತ್ಯದಿಂದ ಪಾಪಪ್ರಜ್ಞೆ ಮೂಡಿದೆ. ನಾನು ಧರ್ಮಸ್ಥಳ ಸುತ್ತಮುತ್ತ ನೂರಾರು ಹೆಣ್ಮಕ್ಕಳ ಶವವನ್ನು ಹೂತು ಹಾಕಿರುವುದಾಗಿ ಸಾಕ್ಷಿ ಹೇಳಲು ಮುಂದೆ ಬಂದಿದ್ದಾಗಿ ಹೇಳಿದ್ದಾನೆ. ಆದರೆ ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿಲ್ಲ, ಧರ್ಮಸ್ಥಳದಲ್ಲಿ ನಿಗೂಢವಾಗಿ ಮೃತಪಟ್ಟಿರುವ ಸುಮಾರು 400ಕ್ಕೂ ಅಧಿಕ ಹೆಣ್ಮಕ್ಕಳಿಗೆ ನ್ಯಾಯ ಸಿಗುವಂತೆ ಆಗ್ರಹಿಸಿ ಗುರುವಾರದಿಂದ ಎಸ್‌ಡಿಪಿಐ ಬೆಳ್ತಂಗಡಿಯಲ್ಲಿ ಆರಂಭಿಸಿ ರಾಜ್ಯವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನ ಬಂದರ್‌ನಲ್ಲಿರುವ ಎಸ್‌ಡಿಪಿಐ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತಾಡಿದ ಅವರು, ಪೌರ ಕಾರ್ಮಿಕ ಸೆಕ್ಷನ್ 164ರ ಪ್ರಕಾರ ಸಾಕ್ಷಿ ಹೇಳಿದ್ದಾನೆ. ಅಲ್ಲದೆ ಒಂದು ಕಳೇಬರದ ಸಾಕ್ಷಿಯನ್ನು ಕೊಟ್ಟಿದ್ದಾಗಿ ಹೇಳಿದ್ದಾನೆ. ಪೊಲೀಸರ ಸಮ್ಮುಖದಲ್ಲಿಯೇ ಹೆಣ ಹೂತು ಹಾಕಿದ್ದಾಗಿ ಆತ ಹೇಳಿದರೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಧರ್ಮಸ್ಥಳ ಗ್ರಾಪಂ ಉಪಾಧ್ಯಕ್ಷನೋರ್ವ, ಧರ್ಮಸ್ಥಳಕ್ಕೆ ಬೇರೆ ಬೇರೆ ಕಡೆಗಳಿಂದ ಬರುವ ಜನರು ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ಅವರ ಹೆಣಗಳನ್ನು ಇಲ್ಲಿ ಹೂತಿದ್ದಾಗಿ ಹೇಳಿ ಎಂದು ಕೆಲವರ ರಕ್ಷಣೆಗೆ ಮುಂದಾಗಿದ್ದಾನೆ. ಪೋಸ್ಟ್ ಮಾರ್ಟಂ ಮಾಡಲು ಆರೋಗ್ಯ ಇಲಾಖೆ, ಪೊಲೀಸ್ ಇರುವಾಗ ಪಂಚಾಯತ್‌ಗೆ ಹೆಣಗಳನ್ನು ಕಾಡಿನಲ್ಲಿ ಹೂತು ಹಾಕಲು ಪಂಚಾಯತ್‌ಗೆ ಅನುಮತಿ ಕೊಟ್ಟವರು ಯಾರು? ಅದಕ್ಕೆ ಕಾನೂನು ಪ್ರಕ್ರಿಯೆಗಳಿಲ್ವಾ? ಎಂದು ಅನ್ವರ್ ಸಾದತ್ತ್ ಪ್ರಶ್ನಿಸಿದರು.
ಈ ಪ್ರಕರಣಗಳ ಬಗ್ಗೆ ಹಿಂದೂ ಸಂಘಟನೆಗಳು ಯಾಕೆ ಮೌನವಾಗಿದೆ? ಸಂಘಪರಿವಾರ ಸತ್ತುಹೋಗಿದೆಯಾ? ಹಿಂದೂಗಳಿಗೆ ಏನಾದರೂ ಆದರೆ ಓಡೋಡಿ ಬರುವ ಅರುಣ್ ಕುಮಾರ್ ಪುತ್ತಿಲ, ಕಲ್ಲಡ್ಕ ಪ್ರಭಾಕರ್ ಭಟ್, ನಳಿನ್ ಕುಮಾರ್ ಕಟೀಲ್ ಈಗ ಎಲ್ಲಿದ್ದಾರೆ? ಅಲ್ಲಿ 500ಕ್ಕೂ ಅಧಿಕ ಮಂದಿ ಸತ್ತವರು ಹಿಂದೂಗಳಲ್ವಾ? ಮುಸ್ಲಿಂ ಹುಡುಗನೋರ್ವ ಹಿಂದೂ ಹುಡುಗಿ ಜೊತೆ ಮಾತಾಡಿದಾಗ ಲವ್ ಜಿಹಾದ್ ಎಂದು ಬೊಬ್ಬೆ ಹೊಡೆಯುತ್ತಾರೆ. ಹರೀಶ್ ಪೂಂಜಾ ಅವರೇ ನಿಮ್ಮದೇ ಕ್ಷೇತ್ರದಲ್ಲಿ ನೂರಾರು ಮಂದಿ ಸತ್ತಿದ್ದರೂ ಯಾಕೆ ಮೌನವಾಗಿದ್ದೀರಿ? ಪುತ್ತೂರಿನ ನೊಂದ ಬಾಲಕಿಯ ಪರವಾಗಿ ನಮ್ಮ ಪ್ರತಿಭಟನೆಗೆ ಆಕೆಯ ತಾಯಿ ಬಂದಾಗ, ಪುತ್ತಿಲ, ನಮ್ಮ ಸಮಸ್ಯೆಯನ್ನು ನಾವೇ ಸರಿಪಡಿಸುತ್ತೇವೆ ನೀವು ಬರುವುದು ಬೇಡ ಎಂದಿದ್ದರು. ಹಾಗಾದರೆ ಈಗ ಈ ಘಟನೆಯ ಯಾಕೆ ಮಾತಾಡುತ್ತಿಲ್ಲ? ಭಯವಾ ಎಂದು ಪ್ರಶ್ನಿಸಿದರು.
ಧರ್ಮಸ್ಥಳದ ಧಣಿ ಕಾನೂನು, ಸಂವಿಧಾನಕ್ಕಿಂತ ದೊಡ್ಡವರಲ್ಲ. ಎಂತೆಂಥ ದೊಡ್ಡ ದೊಡ್ಡವರನ್ನು ಬಂಧಿಸಿದ್ದಾರೆ. ಎಸ್ಪಿ ಡಾ. ಅರುಣ್ ಕುಮಾರ್ ಅವರ ಪ್ರಾಮಣಿಕತೆ, ದಿಟ್ಟತನ ದಕ್ಷತೆಯ ಮೇಲೆ ಸಂಶಯ ಅಲ್ಲ. ಆದರೆ ಅವರ ಕೆಳಗಿರುವ ಅಧಿಕಾರಿಕಾರಿಗಳು ಧಣಿಗೆ ವಿಧೇಯ ಇದ್ದಾರೆ. ಸೌಜನ್ಯ ಪ್ರಕರಣದ ಸಾಕ್ಷಿ ನಾಶ ಆದಂತೆ ಇಲ್ಲೂ ಸಾಕ್ಷ ನಾಶ ಆಗುವ ಸಾಧ್ಯತೆ ಇದೆ. ಹಾಗಾಗಿ ಹೈಕೋರ್ಟ್ ಸಿಟ್ಟಿಂಗ್ ನ್ಯಾಯಾಧೀಶರ ನೇತೃತ್ವದಲ್ಲಿ, ಹಿರಿಯ ಐಪಿಎಸ್ ಅಧಿಕಾರಿಗಳ ಕಣ್ಗಾವಲಿನಲ್ಲಿ ತನಿಖೆ ಆಗ್ಬೇಕು. ಈ ಟೀಂನಲ್ಲಿ ತಾಂತ್ರಿಕ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ ಇರಬೇಕು. ಯಾವುದೇ ಸಾಕ್ಷ್ಯ ನಾಶ ಆದಂತೆ ನೋಡಿಕೊಳ್ಳಬೇಕು ಎಂದು ಸರ್ಕಾವನ್ನು ಒತ್ತಾಯಿಸಿದರಲ್ಲದೆ ಧರ್ಮಸ್ಥಳದಲ್ಲಿ ಎನ್‌ಐಎ ಕಚೇರಿ ತೆರೆಯಬೇಕು ಎಂದು ಆಗ್ರಹಿಸಿದರು
ಎಸ್‌ಡಿಪಿಐ ಮುಖಂಡೆ ತಾಹಿರಾ ತಸ್ಲೀಂ ಮಾತಾಡಿ, ಈ ಪ್ರಕರಣದ ಬಗ್ಗೆ ನಿಜವಾಗಿಯೂ ಸಂಘಪರಿವಾರ ಧ್ವನಿ ಎತ್ತಬೇಕಿತ್ತು. ಹಿಂದೂ ಹೆಣ್ಮಕ್ಕಳ ಸಾವಿಗೆ ದುರ್ಗಾವಾಹೀಣಿ ಯಾಕೆ ಪ್ರತಿಭಟನೆ ನಡೆಸಿಲ್ಲ? ಅಧಿಕಾರಕ್ಕಾಗಿ ದುರ್ಗಾವಾಹಿಣಿಯನ್ನು ಕಟ್ಟಿಕೊಂಡಿದ್ದಾರೆ. ಬ್ರೂಣ ಹತ್ಯೆ ತಡೆಯುವಂತೆ ʻಬೇಟಿ ಬಚಾವೋʼ ಎಂದು ಆಂದೋಲನ ನಡೆಸುವ ಬಿಜೆಪಿ ಈ ರೀತಿ ಬಚಾವಾದ ಭೇಟಿಯರು ಮೃತೊಟ್ಟ ಬಗ್ಗೆ ಯಾಕೆ ಮಾತಾಡುತ್ತಿಲ್ಲ? ಈ ಬಗ್ಗೆ ಖುಷ್ಬೂ, ಶೋಭಾ ಕರಂದ್ಲಾಜೆ ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು.
ಪ್ರತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐ ಮುಖಂಡರಾದ ಅಕ್ಬರ್ ಬೆಳ್ತಂಗಡಿ, ಮಹಮ್ಮದ್ ಜಮಾಲ್ ಮತ್ತಿರರಿದ್ದರು.