ಕುಂದಾಪುರ: ಸಮುದ್ರದಲೆಯ ಅಬ್ಬರಕ್ಕೆ ಸಿಲುಕಿ ಮೀನುಗಾರಿಕೆಯ ದೋಣಿ ಮಗುಚಿಬಿದ್ದ ಪರಿಣಾಮ ಮೂವರು ಮೀನುಗಾರರು ನಾಪತ್ತೆಯಾದ ಘಟನೆ ಇಂದು ಬೆಳಿಗ್ಗೆ ಗಂಗೊಳ್ಳಿಯ ಸೀವಾಕ್ ಬಳಿ ಸಂಭವಿಸಿದೆ. ಒಬ್ಬರನ್ನು ರಕ್ಷಿಸಲಾಗಿದೆ.
ಸುರೇಶ್ ಖಾರ್ವಿ, ಜಗನ್ನಾಥ್ ಖಾರ್ವಿ ಮತ್ತು ರೋಹಿತ್ ಖಾರ್ವಿ ನಾಪತ್ತೆಯಾದ ಮೀನುಗಾರರು. ಸಂತೋಷ್ ಖಾರ್ವಿ ಎನ್ನುವವರನ್ನು ಬೇರೊಂದು ಬೋಟಿನಲ್ಲಿದ್ದವರು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.
ಸುರೇಶ ಖಾರ್ವಿ ಅವರ ದೋಣಿಯಲ್ಲಿ ಮಂಗಳವಾರ ಬೆಳಗ್ಗೆ ನಾಲ್ವರು ಮೀನುಗಾರರು ಮೀನುಗಾರಿಕೆಗೆಂದು ಹೊರಟಿದ್ದರು. ದುರದೃಷ್ಟಚಶಾತ್ ಸಮುದ್ರದ ಬೃಹತ್ ಗಾತ್ರದ ಅಲೆಗಳು ದೋಣಿಗೆ ಧುಮುಕಿ ದೋಣಿ ಮಗುಚಿ ಬಿದ್ದಿತು. ಈ ಪೈಕಿ ಸಂತೋಷ್ ಖಾರ್ವಿಯವರು ಈಜಿ ಜೀವ ಉಳಿಸಿಕೊಂಡಿದ್ದು, ಇವರನ್ನು ಬೇರೊಂದು ದೋಣಿಯವರು ಗಮನಿಸಿ ರಕ್ಷಿಸಿದ್ದಾರೆ. ಉಳಿದ ಮೂವರು ಮೀನುಗಾರರಿಗಾಗಿ ಪೊಲೀಸರು, ಕರಾವಳಿ ಕಾವಲು ಪಡೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.