ಎಂಟು ದಿನಗಳಲ್ಲಿ 1.50 ಲಕ್ಷ ಯಾತ್ರಿಗಳಿಂದ ಅಮರನಾಥನ ದರ್ಶನ

ಶ್ರೀನಗರ: ಕಳೆದ ಎಂಟು ದಿನಗಳಿಂದ ಸಾಗುತ್ತಿರುವ ಅಮರನಾಥ ಯಾತ್ರೆಗೆ ಇದುವರೆಗೆ 1.45 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಆಗಮಿಸಿ ಗುಹಾಂತರ ದೇಗುಲದಲ್ಲಿರುವ ಹಿಮ ಶಿವಲಿಂಗದ ದರ್ಶನ ಪಡೆದಿದ್ದಾರೆ. ಈ ನಡುವೆ ಶುಕ್ರವಾರದಂದು ಜಮ್ಮುವಿನಿಂದ ಕಾಶ್ಮೀರಕ್ಕೆ 6,482 ಯಾತ್ರಿಕರ ಮತ್ತೊಂದು ತಂಡ ತೆರಳಿದೆ. ಈ ಯಾತ್ರಿಕರ ತಂಡ ಭಗವತಿ ನಗರ ಯಾತ್ರಿ ನಿವಾಸದಿಂದ ಎರಡು ಬೆಂಗಾವಲು ಪಡೆಗಳ ರಕ್ಷಣೆಯೊಂದಿಗೆ ಸಾಗಿದೆ.

2,353 ಯಾತ್ರಿಗಳನ್ನು ಹೊತ್ತ 107 ವಾಹನಗಳ ಮೊದಲ ಬೆಂಗಾವಲು ಪಡೆಯು ಇಂದು ಬೆಳಗಿನಜಾವ 3.20ಕ್ಕೆ ಬಾಲ್ಟಾಲ್ ಬೇಸ್ ಕ್ಯಾಂಪ್‌ಗೆ ಹೊರಟಿತು. ಬಳಿಕ 4,129 ಯಾತ್ರಿಗಳನ್ನು ಹೊತ್ತ 161 ವಾಹನಗಳ ಎರಡನೇ ಬೆಂಗಾವಲು ಪಡೆಯು ಬೆಳಗಿನ ಜಾವ 4.04ಕ್ಕೆ ನುನ್ವಾನ್ (ಪಹಲ್ಗಾಮ್) ಬೇಸ್ ಕ್ಯಾಂಪ್‌ಗೆ ಹೊರಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿವನ ಪವಿತ್ರ ಗದೆಗೆ ವಿಶೇಷ ಪೂಜೆ: ಗುರುವಾರ ಪಹಲ್ಗಾಮ್‌ನಲ್ಲಿ ಛಾರಿ ಮುಬಾರಕ್ (ಶಿವನ ಪವಿತ್ರ ಗದೆ) ಭೂಮಿ ಪೂಜೆ ನಡೆಸಲಾಯಿತು. ಛಾರಿ ಮುಬಾರಕ್‌ನ ಏಕೈಕ ಪಾಲಕ ಮಹಾಂತ ಸ್ವಾಮಿ ದೀಪೇಂದ್ರ ಗಿರಿ ನೇತೃತ್ವದ ಸಾಧುಗಳ ಗುಂಪು, ಶ್ರೀನಗರದ ದಶನಾಮಿ ಅಖಾಡ ಕಟ್ಟಡದಿಂದ ಪಹಲ್ಗಾಮ್‌ಗೆ ಶಿವನ ಗದೆಯನ್ನು ಆಚರಣೆ ಅನುಸಾರ ಕೊಂಡೊಯ್ದಿತು. ಇಲ್ಲಿ ಪೂಜಾ ಕೈಂಕರ್ಯದ ಬಳಿಕ ಮಾರ್ತಾಂಡ ಸೂರ್ಯ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಲಾಯಿತು. ಅಲ್ಲಿ ಪೂಜೆ ಕೈಗೊಂಡು ಮಾರ್ತಾಂಡ ಸೂರ್ಯ ದೇವಸ್ಥಾನದಲ್ಲಿ ಗದೆಗೆ ಪವಿತ್ರ ಸ್ನಾನ ಮಾಡಿಸಲಾಯಿತು. ಆಗಸ್ಟ್ 9ರಂದು ಗದೆಯು ಪವಿತ್ರ ಗುಹಾ ದೇವಾಲಯ ತಲುಪಲಿದ್ದು, ಈ ಮೂಲಕ ಅಮರನಾಥ ಯಾತ್ರೆ ಅಧಿಕೃತವಾಗಿ ಮುಕ್ತಾಯಗೊಳ್ಳಲಿದೆ.

Hero Image

ಅಮರನಾಥ ಯಾತ್ರೆಗೆ ಭಾರೀ ಭದ್ರತೆ : ಜಮ್ಮುವಿನ ಭಗವತಿ ನಗರ ಯಾತ್ರಿ ನಿವಾಸಕ್ಕೆ ಬರುವ ಯಾತ್ರಿಕರು ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳಬಹುದು. ಯಾತ್ರಿಕರು ನೇರವಾಗಿ ಬಾಲ್ಟಾಲ್ ಮತ್ತು ನುನ್ವಾನ್​​ನಲ್ಲಿ ವರದಿ ಮಾಡಿಕೊಳ್ಳುತ್ತಿದ್ದಾರೆ. ಪಹಲ್ಗಾಮ್​ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಈ ಬಾರಿ ಅಮರನಾಥ ಯಾತ್ರೆಗೆ ಭಾರೀ ಭದ್ರತೆ ನೀಡಲಾಗಿದೆ. ಯಾತ್ರಿಕರ ಸುರಕ್ಷತೆಗೆ ಅಗತ್ಯ ಕ್ರಮ ವಹಿಸಲಾಗಿದೆ.

ಸೇನೆ, ಬಿಎಸ್‌ಎಫ್, ಸಿಆರ್‌ಪಿಎಫ್, ಎಸ್‌ಎಸ್‌ಬಿ ಮತ್ತು ಸ್ಥಳೀಯ ಪೊಲೀಸರ ಜೊತೆಗೆ ಹೆಚ್ಚುವರಿಯಾಗಿ 180 ಸಿಎಪಿಎಫ್‌ ತುಕಡಿಗಳನ್ನು ನಿಯೋಜಿಸಲಾಗಿದೆ. ಅಮರನಾಥ ಯಾತ್ರೆಯ ಎರಡು ಶಿಬಿರಗಳಿಗೆ ಹೋಗುವ ಯಾತ್ರಿಕರಿಗೆ ಅಗತ್ಯ ಸಾರಿಗೆ ಶಿಬಿರಗಳು ಮತ್ತು ಜಮ್ಮುವಿನ ಭಗವತಿ ನಗರ ಯಾತ್ರಿ ನಿವಾಸ್‌ನಿಂದ ಗುಹಾ ದೇಗುಲಕ್ಕೆ ಹೋಗುವ ಸಂಪೂರ್ಣ ಮಾರ್ಗದಲ್ಲಿ ಭದ್ರತಾ ಪಡೆಗಳ ಬೆಂಗಾವಲು ಇರಲಿದೆ.

ಜುಲೈ 3ರಂದು ಆರಂಭವಾಗಿರುವ ಯಾತ್ರೆಯು ಶ್ರಾವಣ ಪೂರ್ಣಿಮಾದಂದು ಅಂದರೆ ಆಗಸ್ಟ್ 9ರಂದು ಕೊನೆಗೊಳ್ಳಲಿದೆ. ಒಟ್ಟು 38 ದಿನಗಳ ಕಾಲ ಈ ಯಾತ್ರೆ ನಡೆಯಲಿದೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!