ಮಂಗಳೂರು: ʻಹೃದಯ ಹೃದಯಗಳನ್ನು ಬೆಸೆಯೋಣ’ ಎಂಬ ಘೋಷಣೆಯೊಂದಿಗೆ ಜುಲೈ 14, 15, 16 ಈ ಮೂರು ದಿನಗಳ ಕಾಲ ಕುಂದಾಪುರದಿಂದ ಸುಳ್ಯ ತನಕ ಸರ್ವ ಮತೀಯರೂ ಜೊತೆಗೂಡಿ ಸಾಗುವ ‘ಕರಾವಳಿಯ ನೆಲದಲ್ಲಿ ಸೌಹಾರ್ದ ಸಂಚಾರ” ಎಂಬ ಕಾರ್ಯಕ್ರಮ ನಡೆಯಲಿದ್ದು, ಈ ಮೂಲಕ ಸೌಹಾರ್ದ ಸಂದೇಶವನ್ನು ಸಮಾಜದ ಮುಂದೆ ತೆರೆದಿಡುವ ಕಾರ್ಯ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕ್ಕರ್ ಮಾಹಿತಿ ನೀಡಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಶಾಂತಿ, ಸೌಹಾರ್ದತೆಯ ಆಡುಂಬೊಲವಾಗಿದ್ದ ಕರಾವಳಿ ಕರ್ನಾಟಕದ ಇತ್ತೀಚಿನ ಬೆಳವಣಿಗೆಗಳು ತೀರಾ ಆತಂಕಕಾರಿಯಾಗಿದೆ. ಕರಾವಳಿ ಕರ್ನಾಟಕದಲ್ಲಿ ಕೋಮು ವೈಷಮ್ಯವು ತೀವ್ರಗೊಳ್ಳುತ್ತಿದ್ದು; ಹಲ್ಲೆ, ಹತ್ಯೆಗಳು ಸಾಮಾನ್ಯವಾಗುತ್ತಿದೆ. ಯಾರೂ ಯಾರನ್ನೂ ನಂಬಲಾಗದಂತೆ ಆತಂಕ ಕವಿದಿದೆ. ಕೃಷಿ, ಕೈಗಾರಿಕೆ, ಮೀನುಗಾರಿಕೆ, ಶಿಕ್ಷಣ, ವೈದ್ಯಕೀಯ ಮತ್ತಿತರ ಕ್ಷೇತ್ರಗಳಲ್ಲಿ ಮೇಲೇರುತ್ತಲೇ ಇರುವ ನಾಡು, ಮಾನವೀಯತೆಯ ವಿಷಯದಲ್ಲಿ ಮಾತ್ರ ಬಡವಾಗುತ್ತಿದೆ. ಮನುಷ್ಯ ಮನಸ್ಸುಗಳ ನಡುವಿನ ಅಂತರ ಹೆಚ್ಚಾಗುತ್ತಿದೆ. ಜಾತಿ ಮತ ಪಥ ಪಂಥ ಪಕ್ಷ ಪಂಗಡಗಳ ಹೆಸರಿನಲ್ಲಿ ಪರಸ್ಪರ ಮಾಂಸ ಕೀಳುವ, ರಕ್ತ ಹರಿಸುವ, ಒಬ್ಬರನ್ನೊಬ್ಬರು ಕೊಲ್ಲುವ ತನಕ ವೈರ, ವಿದ್ವೇಷಗಳು ಮಿತಿ ಮೀರಿವೆ. ಇದಕ್ಕೆಲ್ಲ ಇತಿಶ್ರೀ ಹಾಡುವುದು ಇಂದಿನ ತುರ್ತು ಅಗತ್ಯವಾಗಿದೆ. ಅದಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಜಾತಿ ಮತ ಪಂಥಗಳು ಭಿನ್ನವಾದರೂ ಎಲ್ಲರನ್ನೂ ಮನುಷ್ಯರನ್ನಾಗಿ ಕಾಣುವ ಹೃದಯವಂತಿಕೆ ಬಹಳ ಮುಖ್ಯ ಒಬ್ಬರನ್ನೊಬ್ಬರು ಅರಿತು, ಬೆರೆತು ಬದುಕಿದರೆ ಮಾತ್ರ ಸ್ವಸ್ಥ ಜೀವನ ಸಾಧ್ಯ ಈ ಸಂದೇಶವನ್ನು ಸಮಾಜದ ಮುಂದೆ ಪ್ರಬಲವಾಗಿ ಪ್ರತಿಪಾದಿಸುವ ಸಲುವಾಗಿ ‘ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ’ (ಎಸ್ ವೈ ಎಸ್)ವು ವಿಶಿಷ್ಟ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಈ ಸಂಚಾರ ಕುಂದಾಪುರ, ಉಡುಪಿ, ಕಾರ್ಕಳ, ಕಾಪು, ಪಡುಬಿದ್ರಿ, ಮುಲ್ಕಿ, ಸುರತ್ಕಲ್, ಮಂಗಳೂರು, ಫರಂಗಿಪೇಟೆ, ಬಿ.ಸಿ.ರೋಡು, ಕಲ್ಲಡ್ಕ, ಪುತ್ತೂರು, ಉಪ್ಪಿನಂಗಡಿ, ಕಡಬ, ಸುಳ್ಯ ಎಂಬ ಕೇಂದ್ರಗಳಲ್ಲಿ ಕಾಲ್ನಡಿಗೆ ಜಾಥಾ ಮತ್ತು ಸಭಾ ಕಾರ್ಯಕ್ರಮಗಳು ನಡೆಯಲಿವೆ. ಬಹು ಧರ್ಮೀಯ ಬಾಂಧವರು ನಡಿಗೆಯಲ್ಲಿ ಭಾಗವಹಿಸಲಿದ್ದು, ವಿವಿಧ ಧರ್ಮಗಳ ಮುಖಂಡರು, ಸಾಮಾಜಿಕ ಚಿಂತಕರು ಸಂದೇಶ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್‌ವೈಎಸ್ ರಾಜ್ಯಾಧ್ಯಕ್ಷ ಬಶೀರ್ ಸಅದಿ, ಮಾಜಿ ರಾಜ್ಯಾಧ್ಯಕ್ಷ ಹಫೀಳ್ ಸಅದಿ ಮಡಿಕೇರಿ, ರಾಜ್ಯ ಉಪಾಧ್ಯಕ್ಷರು ಸಯ್ಯದ್ ಹಮೀಂ ತಂಙಳ್, ರಾಜ್ಯ ಕಾರ್ಯದರ್ಶಿ ಹಸೈನಾರ್ ಆನೆಮಹಲ್ ಹಾಸನ ಭಾಗವಹಿಸಿದ್ದರು.