ಮಡಿಕೇರಿ: ದಕ್ಷಿಣ ಕೊಡಗಿನ ನೋಕ್ಯ ಮತ್ತು ಭದ್ರಗೋಳ ಗ್ರಾಮದಲ್ಲಿ ಎಮ್ಮೆ ಹಾಗೂ ದನಗಳನ್ನು ಕಳವು ಮಾಡಿದ ನಾಲ್ವರು ಆರೋಪಿಗಳನ್ನು ಮಡಿಕೇರಿ ಪೊಲೀಸರು ಕೊಡಗಿನ ಕಾನೂರಿನಲ್ಲಿ ಬಂಧಿಸಿದ್ದಾರೆ.
ವೀರಾಜಪೇಟೆ ತಾಲೂಕಿನ ಚೆನ್ನಯ್ಯನ ಕೋಟೆ ಗ್ರಾಮದ ಉಬೈದ್ ಕೆ.ಎಂ. (37), ಪೊನ್ನಂಪೇಟೆ ಸೀತಾ ಕಾಲನಿಯ ಗಜನ್ ಗಣಪತಿ (25) ಹಾಗೂ ಬೇಗೂರು ಗ್ರಾಮದ ಹನೀಫ ಸಿ.ಈ. (36) ಮತ್ತು ಕೇರಳದ ಮಾನಂದವಾಡಿಯ ಅಜನಸ್ (21) ಬಂಧಿತ ಆರೋಪಿಗಳು.
ಆರೋಪಿಗಳ ಕೃತ್ಯಕ್ಕೆ ಬಳಸಿರುವ ಬೊಲೆರೋ ಪಿಕಪ್, ಮಾರುತಿ ಓಮ್ನಿ, ಟಾಟಾ ಇಂಟ್ರಾ, ಒಂದು ಚಾಕು ಮತ್ತು ಹಗ್ಗ, 3 ಮೊಬೈಲ್ ಫೋನ್ ಮತ್ತು 7 ಸಾವಿರ ರೂ. ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜೂ. 24ರಂದು ನೋಕ್ಯ ಗ್ರಾಮದ ಆನಂದ ಎ.ಎಸ್. ಅವರ 2 ದನಗಳನ್ನು ಮತ್ತು ಭದ್ರಗೋಳ ಗ್ರಾಮದ ಪಿ.ಪಿ. ಮುತ್ತಣ್ಣ ಅವರ ಎಮ್ಮೆಯೊಂದನ್ನು ಆರೋಪಿಗಳು ಕದ್ದಿದ್ದರು.
ಡಿವೈಎಸ್‌ಪಿ ಮಹೇಶ್ ಕುಮಾರ್, ಸಿಪಿಐ ಶಿವರಾಜ ಆರ್. ಮುಧೋಳ್, ಗೋಣಿಕೊಪ್ಪಲು ಪಿಎಸ್‌ಐ ಪ್ರದೀಪ್ ಕುಮಾರ್ ಬಿ.ಕೆ. ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.