ಬಂಟ್ವಾಳ: ಇತ್ತೀಚೆಗೆ ನಡೆದ ಅಶ್ರಫ್ ವಯನಾಡು ಗುಂಪು ಹತ್ಯೆ ಹಾಗೂ ಅಬ್ದುಲ್ ರಹಿಮಾನ್ ಹತ್ಯಾ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಬೇಕು, ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಹಾಗೂ ಹತ್ಯೆಗೆ ಸಂಚು ರೂಪಿಸಿದವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಬಿ.ಸಿ.ರೋಡ್ ಕೈಕಂಬ ಜಂಕ್ಷನ್‌ನಲ್ಲಿ ನಿನ್ನೆ ಪ್ರತಿಭಟನೆ ನಡೆಸಿತು.
ಎಸ್ಡಿಪಿಐ ರಾಜ್ಯ ನಾಯಕ ಅಥಾವುಲ್ಲಾ ಜೋಕಟ್ಟೆ ಮಾತನಾಡಿ ‘ಸರ್ಕಾರ ಇಲ್ಲಿ ಪ್ರಶ್ನೆ ಮಾಡಿದವರಿಗೆ ನೋಟಿಸ್ ಜಾರಿಗೊಳಿಸಿ ಭಯಪಡಿಸುತ್ತಿದೆ. ಆದರೆ ವಾಸ್ತವದಲ್ಲಿ ಎಸ್‌ಡಿಪಿಐ ಎಂಬ ಚಳುವಳಿಯು ಜನಸಾಮಾನ್ಯರ ಆಗ್ರಹಗಳಿಗೆ ಧ್ವನಿಯಾಗುತ್ತಿದೆ. ಜನರು ಪ್ರಜ್ಞಾವಂತರಾಗಿದ್ದಾರೆ. ಹಾಗಾಗಿ ತಕ್ಷಣ ಎಸ್‌ಐಟಿ ತನಿಖೆಗೆ ವಹಿಸಿ ಸರ್ಕಾರದಿಂದ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ, ‘ವೈಯಕ್ತಿಕ ನೆಲೆಯಲ್ಲಿ ಹಲವರು ಮೃತರ ಕುಟುಂಬಗಳಿಗೆ ಪರಿಹಾರ ನೀಡಿರುವುದು ಸ್ವಾಗತಾರ್ಹ ವಿಚಾರ. ಆದರೆ ಅಮಾಯಕರ ಹತ್ಯೆಗೆ ನ್ಯಾಯ ಸಿಗಲಿಲ್ಲ. ಹಾಗಾಗಿ ಎರಡೂ ಹತ್ಯೆ ಪ್ರಕರಣಗಳನ್ನೂ ಎಸ್‌ಐಟಿ ತನಿಖೆಗೆ ವಹಿಸಬೇಕು. ಹತ್ಯೆಗೆ ಸಂಚು ರೂಪಿಸಿದವರು, ಮಾರಕಾಸ್ತ್ರಗಳನ್ನು ಪೂರೈಕೆ ಮಾಡಿದವರು, ಹಂತಕರಿಗೆ ತರಬೇತಿ ನೀಡಿದವರು ಹೀಗೆ ಎಲ್ಲರನ್ನೂ ಕಠಿಣ ಸೆಕ್ಷನ್‌ನಡಿಯಲ್ಲಿ ಬಂಧಿಸಬೇಕು. ಆ ಮೂಲಕ ಹತ್ಯೆಗೊಳಗಾದವರಿಗೆ ನ್ಯಾಯ ಒದಗಿಸಬೇಕು’ ಎಂದು ಹೇಳಿದರು.
ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ ಮಾತನಾಡಿದರು. ಪ್ರತಿಭಟನಾಕಾರರಿಂದ ತನಿಖೆಯಲ್ಲಿ ವಿಳಂಬ ನೀತಿ ತೋರುತ್ತಿರುವ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. ಎಸ್‌ಡಿಪಿಐ ಮಂಗಳೂರು ನಗರ ಜಿಲ್ಲಾಧ್ಯಕ್ಷ ಅಬ್ದುಲ್ ಜಲೀಲ್ ಕೆ, ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಮುನಿಶ್ ಆಲಿ, ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಪುತ್ತೂರು, ಮಂಗಳೂರು ನಗರ ಉಪಾಧ್ಯಕ್ಷ ಅಶ್ರಫ್ ಅಡ್ಡೂರು, ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಶಾಹುಲ್ ಹಮೀದ್ ಎಸ್ ಎಚ್, ಸಹಿತ ಪಕ್ಷದ ನಾಯಕರು, ಕಾರ್ಯಕರ್ತರು, ಹಿತೈಷಿಗಳು ಭಾಗವಹಿಸಿದ್ದರು. ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದಗೈದರು.