ಬಂಟ್ವಾಳ: ಕೊಡ್ಮಾನ್ ನಿವಾಸಿ ಸುಧೀರ್(30) ತನ್ನ ಪ್ರೇಯಸಿ ಫರಂಗಿ ಪೇಟೆಯ ದಿವ್ಯಾ ಯಾನೆ ದೀಕ್ಷಿತಾ(26)ಳನ್ನು ಕಳೆದ ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದು, ಇತ್ತೀಚೆಗೆ ಆಕೆ ಅವನ್ನು ದೂರ ಮಾಡುತ್ತಿದ್ದುದಕ್ಕೆ ಈ ಕೃತ್ಯ ಎಸಗಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ ಕೆಲ ತಿಂಗಳುಗಳಿಂದ ಇವರಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿತ್ತು. ಆದರೂ ಸಹ ಆರೋಪಿ ಸುಧೀರ್ ಆಕೆಗೆ ಫೋನ್ ಮಾಡುವುದು, ಹಿಂಬಾಲಿಸುವುದು ಇತ್ಯಾದಿ ಉಪದ್ರ ಕೊಡುತ್ತಿದ್ದ.
ಇದು ವಿಪರೀತಕ್ಕೇರಿ ಇಂದು ಬೆಳಿಗ್ಗೆ ಫರಂಗಿಪೇಟೆಯ ಸುಜೀರ್ ಮಲ್ಲಿ ಎಂಬಲ್ಲಿಗೆ ಬಂದು ಸುಧೀರ್ ದಿವ್ಯಾಳೊಂದಿಗೆ ನನ್ನನ್ನು ಮದುವೆಯಾಗು ಎಂದು ಒತ್ತಾಯಿಸಿದ್ದಾನೆ. ಆಗ ದಿವ್ಯಾ ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಹಠ ಹಿಡಿದಿದ್ದಾಳೆ. ಹೀಗೆ ಮಾತಿಗೆ ಮಾತು ಬೆಳೆದು, ಆರೋಪಿ ಸುಧೀರ್ ತಾನು ಮೊದಲೇ ತಂದಿದ್ದ ಚಾಕುವಿನಿಂದ ದಿವ್ಯಾಳನ್ನು ಸಾಯಿಸಲು ಚುಚ್ಚಿದ್ದಾನೆ. ಆದೆರೆ ಆಕೆ ತಪ್ಪಿಸಿಕೊಂಡು ಹೋಗುತ್ತಾ ಬಿದ್ದಾಗ, ಆಕೆ ಮೃತಪಟ್ಟಿರಬಹುದೆಂದು ಭಾವಿಸಿದ ಆರೋಪಿಯು ಅಲ್ಲಿಂದ ತೆರಳಿ ದಿವ್ಯಾಳ ಬಾಡಿಗೆ ಮನೆಗೆ ಹೋಗಿ, ಅಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮನೆಮಂದಿ ಬಂದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಮನೆಗೆ ಬಂದು ನೋಡಿದಾಗ ಸುಧೀರ್ ಹಗ್ಗ ಬಿಗಿದು ನೇತಾಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದು, ತನಿಖೆ ನಡೆಸಿ ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.