ಹೊಸದಿಲ್ಲಿ: ದೆಹಲಿ ಪ್ರೀಮಿಯರ್ ಲೀಗ್ (DPL) 2025 ರ ಹರಾಜು ಪ್ರಕ್ರಿಯೆ ನಿನ್ನೆ ನಡೆದಿದೆ. ಹೊಸ ತಲೆಮಾರಿನ ಹಲವು ಆಟಗಾರರು ಡಿಪಿಎಲ್ ನಲ್ಲಿ ಈ ಬಾರಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ. ಭಾರತದ ದಿಗ್ಗಜ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಮಗ ಮತ್ತು ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ಸೋದರಳಿಯ ಡಿಪಿಎಲ್ ಹರಾಜಿನಲ್ಲಿ ಬಿಡ್ ಪಡೆದುಕೊಂಡಿದ್ದಾರೆ.
ಸೆಹ್ವಾಗ್ ಅವರ ಹಿರಿಯ ಮಗ ಆರ್ಯವೀರ್ ಅವರನ್ನು ಸೆಂಟ್ರಲ್ ದೆಹಲಿ ಕಿಂಗ್ಸ್ 8 ಲಕ್ಷ ರೂ.ಗೆ ಖರೀದಿಸಿತು. 18 ನೇ ವಯಸ್ಸಿನಲ್ಲಿ, ಸೆಹ್ವಾಗ್ ಅವರ ಮಗ ದೆಹಲಿ ಅಂಡರ್ 19 ಕ್ರಿಕೆಟ್ ತಂಡದ ಭಾಗವಾಗಿದ್ದಾರೆ. ಮತ್ತೊಂದೆಡೆ, ಆರ್ಯವೀರ್ ಎಂದೇ ಹೆಸರಿರುವ ಕೊಹ್ಲಿಯ ಸೋದರಳಿಯನನ್ನು 2024 ರ ಡಿಪಿಎಲ್ ರನ್ನರ್-ಅಪ್ ಸೌತ್ ದೆಹಲಿ ಸೂಪರ್‌ಸ್ಟಾರ್ಸ್ 1 ಲಕ್ಷ ರೂ.ಗೆ ಖರೀದಿಸಿತು.
ತನ್ನ ತಂದೆಯಂತೆಯೇ ಆಕ್ರಮಣಕಾರಿ ಆರಂಭಿಕ ಆಟಗಾರ ಆರ್ಯವೀರ್ ಸೆಹ್ವಾಗ್ ಕೂಡ ಅನೇಕ ತಂಡಗಳಿಂದ ಬಿಡ್ಡಿಂಗ್ ಪಡೆದದರು. ಅಂತಿಮವಾಗಿ ಸೆಂಟ್ರಲ್ ಡೆಲ್ಲಿ ಕಿಂಗ್ಸ್ ಅವರನ್ನು ತಮ್ಮದಾಗಿಸಿಕೊಂಡಿತು.
ಮತ್ತೊಂದೆಡೆ, ಕೊಹ್ಲಿ ಅವರ ಸೋದರಳಿಯ, ಲೆಗ್ ಸ್ಪಿನ್ನರ್ ಆರ್ಯವೀರ್ ಅವರನ್ನು ಸೌತ್ ಡೆಲ್ಲಿ ಸೂಪರ್‌ಸ್ಟಾರ್ಸ್ ತಂಡವು ಆಯ್ಕೆ ಮಾಡಿಕೊಂಡಿದೆ. ಇದನ್ನು ದೆಹಲಿ ರಣಜಿ ಟ್ರೋಫಿ ನಾಯಕ ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ಆಟಗಾರ ಆಯುಷ್ ಬದೋನಿ ಮುನ್ನಡೆಸಲಿದ್ದಾರೆ.
ಈತನ್ಮಧ್ಯೆ, ಡಿಪಿಎಲ್ 2025 ರ ಹರಾಜಿನಲ್ಲಿ ವೇಗಿ ಸಿಮರ್ಜೀತ್ ಸಿಂಗ್ ಅತ್ಯಂತ ದುಬಾರಿ ಆಟಗಾರರಾದರು. ಸೆಂಟ್ರಲ್ ಡೆಲ್ಲಿ ಕಿಂಗ್ಸ್ ತಂಡವು ವೇಗದ ಬೌಲರ್ ಮೇಲೆ ದೊಡ್ಡ ಮೊತ್ತದ ಬಿಡ್ ನಡೆಸಿ ಅವರನ್ನು 39 ಲಕ್ಷ ರೂ.ಗೆ ಒಪ್ಪಂದ ಮಾಡಿಕೊಂಡಿತು.
ಮಿಸ್ಟ್ರಿ ಸ್ಪಿನ್ನರ್ ದಿಗ್ವೇಶ್ ಸಿಂಗ್ ಎರಡನೇ ಅತಿ ಹೆಚ್ಚು ಬಿಡ್ ಪಡೆದರು. ಸೌತ್ ದೆಹಲಿ ಸೂಪರ್‌ಸ್ಟಾರ್ಜ್ ತಂಡವು ದಿಗ್ವೇಶ್ ಅವರನ್ನು 38 ಲಕ್ಷ ರೂ.ಗೆ ಖರೀದಿಸಿತು.