ಡ್ರಗ್ಸ್‌ ದಾಸರಾದ ಮಕ್ಕಳ ಮೇಲೆ ಪೋಷಕರಿಂದಲೇ ದೂರು: ಬೃಹತ್‌ ಡ್ರಗ್ಸ್‌ ಜಾಲ ಬೇಧಿಸಿದ ಪೊಲೀಸರು!

ಮಂಗಳೂರು: ಮಕ್ಕಳು ಮಾದಕ ವಸ್ತುಗಳಿಗೆ ದಾಸರಾಗಿದ್ದಾರೆಂದು ಪೋಷಕರೇ ಪೊಲೀಸರಿಗೆ ದೂರು ನೀಡಿದ ಅಪರೂಪದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ದೂರಿನಿಂದ ಒಳ್ಳೆಯ ಫಲಿತಾಂಶ ದೊರೆತಿದ್ದು, ನೂರಾರು ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲವೊಂದು ಪೊಲೀಸರ ಬಲೆಗೆ ಸಿಕ್ಕಿಬಿದ್ದಿದೆ. ಮಂಗಳೂರು ಸೆನ್ ಕ್ರೈಮ್ ಠಾಣೆಯ ಪೊಲೀಸರು, ಪೋಷಕರ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿ, ಡ್ರಗ್ಸ್ ವ್ಯವಹಾರದ ಜಾಲವನ್ನು ಬಯಲಿಗೆಳೆದಿದ್ದಾರೆ.

ಪಡುಶೆಡ್ಡೆ ಗ್ರಾಮದ ಹಾಲಾಡಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ, 200ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಾದ ತುಷಾರ್ (21), ಧನ್ವಿ ಶೆಟ್ಟಿ (20), ಸಾಗರ್ ಕರ್ಕೇರಾ (19), ವಿಕಾಸ್ ಥಾಪ (23), ಮತ್ತು ವಿಘ್ನೇಶ್ ಕಾಮತ್ (24) ಗಾಂಜಾವನ್ನು ಸಣ್ಣ ಪ್ಯಾಕೆಟ್‌ಗಳಲ್ಲಿ ಪ್ಯಾಕ್ ಮಾಡಿ ಮಾರಾಟಕ್ಕೆ ಸಿದ್ಧಪಡಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಪೊಲೀಸರು 5.20 ಲಕ್ಷ ರೂ. ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಎರಡು ದಿನಗಳ ಹಿಂದೆ ಇಬ್ಬರು ಪೋಷಕರು ತಮ್ಮ ಮಕ್ಕಳು ಡ್ರಗ್ಸ್‌ಗೆ ದಾಸರಾಗಿದ್ದಾರೆಂದು ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ತನಿಖೆಗೆ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಯಿತು. ಫಲಿತಾಂಶವಾಗಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

“ಒಬ್ಬ ಪೋಷಕರ ದೂರಿನಿಂದ 200 ಜನರಿಗೆ ಡ್ರಗ್ಸ್ ಪೂರೈಕೆ ತಡೆಯಲಾಯಿತು. ಹತ್ತು ಜನ ದೂರು ಕೊಟ್ಟರೆ, 2000 ಜನರಿಗೆ ಡ್ರಗ್ಸ್ ಸರಬರಾಜು ತಡೆಗಟ್ಟಬಹುದು. ಸಾರ್ವಜನಿಕರು ಖಚಿತ ಮಾಹಿತಿ ನೀಡಿದರೆ, ಮಂಗಳೂರನ್ನು ಡ್ರಗ್ಸ್‌-ಮುಕ್ತವಾಗಿಸಬಹುದು. ಡ್ರಗ್ಸ್‌ಗೆ ಒಳಗಾದವರನ್ನು ಸಂತ್ರಸ್ತರೆಂದು ಪರಿಗಣಿಸಿ, ಪೂರೈಕೆದಾರರನ್ನು ಜೈಲಿಗೆ ಕಳುಹಿಸುತ್ತೇವೆ” ಎಂದು ಆಯುಕ್ತರು ಭರವಸೆ ನೀಡಿದ್ದಾರೆ.

ಬಂಧಿತ ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿದ್ದು, ಮುಂದೆ ಡ್ರಗ್ಸ್ ವ್ಯವಹಾರಕ್ಕೆ ಕಡಿವಾಣ ಹಾಕಲು ಪೊಲೀಸರು ಕಟಿಬದ್ಧರಾಗಿದ್ದಾರೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!