ಉಳ್ಳಾಲ: ಸಿಟ್ಟಿನ ಭರದಲ್ಲಿ ಗಾಜು ಒಡೆದ ಯುವಕನೋರ್ವ ತೀವ್ರ ರಕ್ತಸ್ರಾವಗೊಂಡು ಮೃತಪಟ್ಟ ಘಟನೆ ಮಾಡೂರು ಸೈಟ್ ಎಂಬಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ್ದು, ಇಂದು ಬೆಳಕಿಗೆ ಬಂದಿದೆ.
ಮಾಡೂರ್ ಸೈಟ್ ನಿವಾಸಿ ಸತೀಶ್ ನಾಯಕ್ ಎಂಬವರ ಪುತ್ರ, ವಿವಾಹಿತನಾಗಿದ್ದ ನಿತೇಶ್ ನಾಯಕ್(38) ಮೃತಪಟ್ಟವರು.
ನಿತೇಶ್ ಹಾಗೂ ಈತನ ಸಹೋದರ ಇಬ್ಬರೂ ತಿಂಡಿ ಲೈನ್ ಸೇಲ್ ನಡೆಸುತ್ತಿದ್ದರು. ಗುರುವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ ಕೋಟೆಕಾರು ಬೀರಿ ಜಂಕ್ಷನ್ ಸಮೀಪ ತಂದೆ ಮತ್ತು ಸಹೋದರ ಸಿಕ್ಕಿದ್ದು, ಮೂವರೂ ಪರಸ್ಪರ ಗಲಾಟೆ ನಡೆಸಿದ್ದರು ಎನ್ನಲಾಗಿದೆ.
ಮೂವರು ಮನೆಗೆ ಬಂದು ಮತ್ತೆ ಗಲಾಟೆ ಆರಂಭಿಸಿದ್ದಾರೆ. ಸಿಟ್ಟಿನಲ್ಲಿ ಕುದಿಯುತ್ತಿದ್ದ ನಿತೇಶ್ ಶೋಕೇಸ್‌ನ ಗಾಜನ್ನು ಕೈಯ್ಯಲ್ಲಿ ಒಡೆದು, ತನಗೆ ತಾನೇ ದಂಡನೆಗೊಳಗಾಗಿದ್ದ. ಆದರೆ ಗಾಜಿನ ಏಟಿನಿಂದ ಕೈಯ ನರ ತುಂಡಾಗಿ ತೀವ್ರ ರಕ್ತಸ್ರಾವ ಉಂಟಾಗಿ ಮೃತಪಟ್ಟಿದ್ದಾರೆ ಎಂದು ಮೃತರ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ. ಸಹೋದರರು ಹಾಗೂ ತಂದೆ ಪ್ರತಿದಿನ ಕ್ಷುಲಕ ವಿಚಾರವಾಗಿ ಜಗಳ ನಡೆಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಮೃತರ ತಾಯಿ ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.