ಮಂಗಳೂರು: ಮಗು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ(ವಿಶೇಷ) ನ್ಯಾಯಾಲಯದ ಪೀಠಸೀನಾಧಿಕಾರಿ ಜಗದೀಶ್ ವಿ.ಎನ್. ಅವರು ತಪ್ಪಿತಸ್ಥರಿಗೆ 10 ವರ್ಷಗಳ ಕಠಿಣ ಸಜೆ ಹಾಗೂ ತಲಾ ಒಬ್ಬರಿಗೆ ರೂ.5,000 ದಂಡ, ದಂಡ ಪಾವತಿಗೆ ವಿಫಲವಾದಲ್ಲಿ 6 ತಿಂಗಳ ಕಠಿಣ ಸಂಜೆಯನ್ನು ಅನುಭವಿಸಲು ಆದೇಶ ನೀಡಿದ್ದಾರೆ. ಲಿನೆಟಾ ವೇಗಸ್, ರಂಗವ್ವ, ಜೊಸ್ಸಿ ವೇಗಸ್ ಮತ್ತು ಲೂಸಿ ವೇಗಸ್ ಶಿಕ್ಷೆಗೊಳಗಾಗಿದ್ದು, ಈ ಪೈಕಿ ರಂಗವ್ವ ಮೃತಪಟ್ಟಿದ್ದಾರೆ.
26.07.2013 ರಂದು ಸಂಜೆ 6.30ಕ್ಕೆ ಮಾನ್ಯ ನ್ಯಾಯಾಲಯದ ಹಾಗೂ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಪೆರ್ಮನ್ನೂರು ಗ್ರಾಮದ ತೊಕ್ಕೊಟ್ಟಿನ ಚಿಲ್ಮನ್ ಕ್ಲಿನಿಕ್ ಎಂಬ ಹೆಸರಿನ ಕ್ಲಿನಿಕ್ ಒಳಗಡೆ, ಆರೋಪಿ ರಂಗವ್ವ ತನ್ನ ಎರಡೂವರೆ ತಿಂಗಳಿನ ಅನಿಶಾ ಎಂಬ ಹೆಸರಿನ ಹೆಣ್ಣು ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಕುಳಿತಿದ್ದರು. ಕ್ಲಿನಿಕ್‌ನಲ್ಲಿ ಆರೋಪಿಗಳಾದ ಲಿನೆಟಾ ವೇಗಸ್ ಮತ್ತು ಜೊಸ್ಸಿ ವೇಗಸ್ ಜೊತೆ ವಿದ್ಯಾ ದಿನಕರ್ ಎಂಬವರೂ ಕುಳಿತಿದ್ದರು. ಅವರಲ್ಲಿಗೆ ಆರೋಪಿ ಲಿನೆಟಾ ವೇಗಸ್ ಬಂದು ಮಗುವಿನ ಮೂಲ ತಾಯಿ ಆರೋಪಿ ರಂಗವ್ವ @ ಗೀತಾಳಿಗೆ ನಾನು ಈ 90 ಸಾವಿರ ರೂ. ಕೊಟ್ಟು ಮಗುವನ್ನು ಪಡೆದುಕೊಳ್ಳುತ್ತೇನೆ. ಉಳಿದ ಹಣ ನಾಳೆ ಅವಳಿಗೆ ಕೊಡುತ್ತೇನೆ. ಈಗ ನೀವು ನನಗೆ 2 ಲಕ್ಷ ರೂಪಾಯಿ ಕೊಡಬೇಕು ಎಂದು ಹೇಳಿ ಮಗು ಅನಿಶಾಳನ್ನು ವಿದ್ಯಾ ದಿನಕರ್ ಗೆ ಮಾರಾಟ ಮಾಡಿದ್ದರು.
ಆರೋಪಿ ಲೂಸಿ ವೇಗಸ್ ಮಗು ಮಾರಾಟದ ಬಗ್ಗೆ ರೆಹನಾ ಜೊತೆ ಮಾತುಕತೆ ನಡೆಸಿ, ಉಳಿದ ಆರೋಪಿಗಳ ಜೊತೆ ಸೇರಿ ಮಗು ಮಾರಾಟಕ್ಕೆ ಸಹಕರಿಸಿದ್ದರು. ಈ ಮೂಲಕ ಆರೋಪಿಗಳು ಭಾ.ದಂ.ಸಂ ಕಲಂ: 370(4) ಸಹ ಕಲಂ: 34 ರ ಅಡಿಯಲ್ಲಿ ಅಪರಾಧ ವೆಸಗಿದ್ದರು. ಆದರೆ ಮಗುವಿನ ತಾಯಿ ಆರೋಪಿ ರಂಗವ್ವ ಪ್ರಕರಣದ ವಿಚಾರಣೆಯ ಕಾಲದಲ್ಲೇ ಮೃತ ಪಟ್ಟಿದ್ದರು.
ಮಾನ್ಯ 2 ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ (ವಿಶೇಷ) ನ್ಯಾಯಾಲಯವು ಇದೇ ಜೂ.30ರಂದು ಪ್ರಕರಣದ ಮೂವರು ಆರೋಪಿಗಳು ಅಪರಾಧ ಎಸಗಿದ ಕುರಿತಂತೆ ಭಾ.ದಂ.ಸಂ ಕಲಂ; 370(4) ಸಹ ಕಲಂ: 34 ರಡಿಯಲ್ಲಿ ಜು.3ರಂದು ತೀರ್ಪು ನೀಡಿದ್ದಾರೆ. ಮೂವರು ತಪ್ಪಿತಸ್ಥರ ವಿರುದ್ಧ ಭಾ.ದಂ.ಸಂ ಕಲಂ: 370(4) ಸಹ ಕಲಂ: 34 ಕ್ಕೆ ಸಂಬಂಧಿಸಿದಂತೆ 10 ವರ್ಷಗಳ ಕಠಿಣ ಸಜೆ ಹಾಗೂ ಮೂವರಿಗೂ ತಲ ರೂ. 5,000 ತಲಾ ದಂಡ ವಿಧಿಸಿದೆ. ದಂಡ ಪಾವತಿಗೆ ವಿಫಲವಾದಲ್ಲಿ 6 ತಿಂಗಳ ಕಠಿಣ ಸಜೆಯನ್ನು ಅನುಭವಿಸಲು ಆದೇಶಿಸಿರುತ್ತದೆ.
ಈ ಪ್ರಕರಣದಲ್ಲಿ ಮಗು ಮಾರಾಟ ಅಪರಾಧದಲ್ಲಿ ಲಿನೆಟಾ ವೇಗಸ್‌ರಿಂಂದ 94,325 ರೂ. ಹಣ ಹಗೂ 5 ಮೊಬೈಲ್‌ಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ಮಾಡಲಾಗಿದ್ದು, ಅದನ್ನು ವಶಕ್ಕೆ ಪಡೆದುಕೊಂಡಿದ್ದು, ಇದೇ ಜು.31ರ ಒಳಗಡೆ ನ್ಯಾಯಾಲಯಕ್ಕೆ ಒಪ್ಪಿಸುವಂತೆ ಆದೇಶ ಮಾಡಲಾಗಿದೆ.
ಪ್ರಕರಣವು 26.07.2013 ರಂದು ದಾಖಲಾಗಿದ್ದು, ಈ ನ್ಯಾಯಾಲಯದಲ್ಲಿ ಎಸ್.ಸಿ ನಂ: 71/2017 ಎಂದು ಅನುಕ್ರಮಿಸಲಾಗಿ ವಿಚಾರಣೆ ನಡೆಸಲಾಗಿದೆ. ಪ್ರಕರಣದ ತನಿಖೆಯನ್ನು ಆಗಿನ ಉಳ್ಳಾಲದ ಪಿ.ಎಸ್.ಐ ಆಗಿದ್ದ ರಮೇಶ್.ಹೆಚ್.ಹಾನಪುರ ಅವರು ನಡೆಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಅಭಿಯೋಜನೆಗೆ 12 ಸಾಕ್ಷಿಧಾರರನ್ನು ವಿಚಾರಣೆ ಮಾಡಲಾಗಿತ್ತು. ಪ್ರಕರಣದ ವಿಚಾರಣೆ ಹಾಗೂ ವಾದವನ್ನು ಜ್ಯೋತಿ ಪ್ರಮೋದ ನಾಯಕ ಅಭಿಯೋಜನೆ ಪರ ಮಂಡಿಸಿದ್ದಾರೆ. ಪ್ರಸ್ತುತ ಪ್ರಕರಣದಲ್ಲಿ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪೀಠಾಸೀನಾಧಿಕಾರಿಯಾದ ಜಗದೀಶ್ ವಿ.ಎನ್. ತೀರ್ಪು ನೀಡಿದ್ದಾರೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝