ಕೆಂಪು ಕಲ್ಲು, ಮರಳು ಸಮಸ್ಯೆ ನಿವಾರಿಸದಿದ್ದರೆ ಪ್ರತಿಭಟನೆ: ಗುತ್ತಿಗೆ ಕಂಟ್ರಾಕ್ಟರ್ ಸಂಘ ಎಚ್ಚರಿಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು, ಮರಳು ಸಮಸ್ಯೆ ನಿವಾರಿಸದಿದ್ದರೆ ಜಿಲ್ಲೆಯ ನಾಗರಿಕರ ಪರವಾಗಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಗುತ್ತಿಗೆ ಕಂಟ್ರಾಕ್ಟರ್ ಸಂಘ, (ಸಿವಿಲ್‌ ಕಂಟ್ರಾಕ್ಟರ್ಸ್‌ ಅಸೋಸಿಯೇಶನ್‌ ರಿ. ಮಂಗಳೂರು ಎಚ್ಚರಿಕೆ ನೀಡಿದೆ. ಈ ಬಗ್ಗೆ ಗುತ್ತಿಗೆ ಕಂಟ್ರಾಕ್ಟರ್ ಸಂಘದ ಅಧ್ಯಕ್ಷ ಮಹಾಬಲ ಕೊಟ್ಟಾರಿ ಪ್ರಕಟಣೆ ಹೊರಡಿಸಿದ್ದಾರೆ.

ಪ್ರಕಟಣೆಯಲ್ಲಿ ಏನಿದೆ?

ದಕ್ಷಿಣ ಕನ್ನಡ ಜಿಲ್ಲೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಈ ಸಮಯದಲ್ಲಿ ಬಂದೊದಗಿದ ಕಟ್ಟಡ ಕಾಮಗಾರಿಗಳಿಗೆ ಬೇಕಾದ ನೈಸರ್ಗಿಕ ಸಂಪತ್ತಾದ ಮರಳು ಹಾಗೂ ಕೆಂಪುಕಲ್ಲಿನ ಸಮಸ್ಯೆ ಹಲವು ವರ್ಷಗಳಿಂದ ವರ್ಷದಿಂದ ವರ್ಷಕ್ಕೆ ಉಲ್ಬಣಾವಸ್ಥೆಗೆ ತಲುಪುತ್ತಿದೆ. ಈ ಸಮಸ್ಯೆಗೆ ಮುಖ್ಯ ಕಾರಣವೇನೆಂದರೆ, ಕರಾವಳಿಗೆ ಪ್ರತ್ಯೇಕ ಮರಳು ನೀತಿ ಮಾಡುತ್ತೇವೆ ಎಂದು ಹಲವು ವರ್ಷಗಳಿಂದ ಹೇಳುತ್ತಾ ಬಂದರೂ ನಮ್ಮ ಸರಕಾರದಿಂದ ಮರಳು ನೀತಿ ಆಗದಿರುವುದರಿಂದ ಈ ಸಮಸ್ಯೆ ಉಂಟಾಗಿರುತ್ತದೆ. ನೈಸರ್ಗಿಕವಾಗಿ, ದೇವರ ವರದಾನವಾಗಿ ಸಿಗುತ್ತಿರುವ ಕಟ್ಟಡ ಕಾಮಗಾರಿಗಳಿಗೆ ಅತೀ ಮುಖ್ಯವಾಗಿ ಬೇಕಾಗಿರುವ ಕೆಂಪುಕಲ್ಲು ಗಣಿಗಾರಿಕೆಗೆ ಇಲಾಖೆಯವರು ಕಠಿಣ ನಿಯಮವನ್ನು ರೂಪಿಸಿರುವುದು ವಿಪರ್ಯಾಸ.

ಗುತ್ತಿಗೆದಾರರಾದ ನಾವು ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ನಮ್ಮನ್ನು ನಾವು ಜೀವನ ಪರ್ಯಂತ ತೊಡಗಿಸಿಕೊಂಡು ಬಂದಿದ್ದೇವೆ ಹಾಗೂ ರಾಜ್ಯದ ಬೊಕ್ಕಸಕ್ಕೆ ತೆರಿಗೆಯ ರೂಪದಿಂದ ನಾವು ನಮ್ಮ ದುಡಿಮೆಯ ಪಾಲು ಭರಿಸುತ್ತಾ ಬಂದಿದ್ದೇವೆ. ಈ ಉದ್ಯಮವನ್ನೇ ನಂಬಿರುವ ನಮ್ಮ ಜಿಲ್ಲೆಯ ಎಲ್ಲಾ ವರ್ಗದ ಕಾರ್ಮಿಕರು ಹೊರನಾಡಿನ ಹಾಗೂ ಹೊರಜಿಲ್ಲೆಯ ಕಾರ್ಮಿಕರು ನಾವು ಕೆಲಸವಿಲ್ಲದೆ ಉಪವಾಸ ಬೀಳುವ ಪರಿಸ್ಥಿತಿ ಉಂಟಾಗಿದೆ. ಜಿಲ್ಲಾಡಳಿತವು ನಮ್ಮ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಬೇಕಾಗಿ ಜಿಲ್ಲಾ ನಾಗರಿಕರ ಪರವಾಗಿ ನಾವು ಈ ಮೂಲಕ ಪತ್ರಕರ್ತರು ಹಾಗೂ ಮಾಧ್ಯಮ ವರ್ಗದವರಲ್ಲಿ ಕಳಕಳಿಯಿಂದ ಬೇಡುವುದೇನೆಂದರೆ ನಮಗೆ ಸ್ವತಂತ್ರದ ದುಡಿಮೆಯನ್ನು ಮಾಡಿ ಜೀವನ ಸಾಗಿಸಲು ಅನುಕೂಲ ಮಾಡಿಕೊಡಬೇಕಾಗಿ ಕಟ್ಟಡ ಗುತ್ತಿಗೆದಾರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರ ನಮ್ರ ವಿನಂತಿ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಶಾಂತಿಯುತ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!