ಮಧ್ಯಪ್ರದೇಶ: ಸಾರ್ವಜನಿಕ ಸುರಕ್ಷತೆ ಹಾಗೂ ಆಸ್ಪತ್ರೆಯಲ್ಲಿನ ಭದ್ರತೆಯನ್ನೇ ಪ್ರಶ್ನಿಸುವಂತಹ, ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಹಿಂಸಾಚಾರ ಕೃತ್ಯವೊಂದು ಮಧ್ಯಪ್ರದೇಶದಲ್ಲಿ ಆಸ್ಪತ್ರೆಯೊಂದರಲ್ಲಿ ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ.
ನರಸಿಂಗ್‌ಪುರದ ಸರ್ಕಾರಿ ಜಿಲ್ಲಾ ಆಸ್ಪತ್ರೆಯೊಳಗೆ ನುಗ್ಗಿದ ಸೈಕೋ ಯುವಕನೋರ್ವ 12 ನೇ ತರಗತಿಯ ವಿದ್ಯಾರ್ಥಿನಿ ಸಂಧ್ಯಾ ಚೌಧರಿ(19) ಎಂಬಾಕೆಯನ್ನು ಸಾರ್ವಜನಿಕರ ಎದುರೇ ಚಾಕುವಿನಿಂದ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವುದು ಜೂನ್ 27 ರಂದು ನಡೆದಿದ್ದು, ಇದೀಗ ಬಹಿರಂಗವಾಗಿದೆ. ಯುವತಿಯನ್ನು ಒನ್ ಸೈಡ್ ಲವ್ ಮಾಡುತ್ತಿದ್ದ ಆರೋಪಿ ಅಭಿಷೇಕ್ ಕೋಶ್ಟಿ ಎಂಬಾತ ಆಸ್ಪತ್ರೆ ಸಿಬ್ಬಂದಿ, ರೋಗಿಗಳು, ರೋಗಿಗಳ ಸಿಬ್ಬಂದಿ ಮುಂದೆಯೇ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿದ್ದು, ಯಾರೂ ಏನೂ ಮಾಡಲಾಗದೆ ಕಲ್ಲಾಗಿ ನಿಂತಿದ್ದರು. ಈ ಮೂಲಕ ಇನ್ನೊಬ್ಬರ ಜೀವ ಉಳಿಸಬೇಕಾಗಿದ್ದ ಆಸ್ಪತ್ರೆ ಜೀವ ಕಸಿಯುವ ತಾಣವಾಗಿ ಬದಲಾಯಿತು.
ಆಸ್ಪತ್ರೆಗೆ ನುಗ್ಗಿದ ಕಪ್ಪು ಶರ್ಟ್ ಧರಿಸಿದ ಅಭಿಷೇಕ್, ಸಂಧ್ಯಾಳಿಗೆ ಹೊಡೆದು, ಆಕೆಯನ್ನು ನೆಲಕ್ಕೆ ಎಸೆದು, ಎದೆಯ ಮೇಲೆ ಕೂತು, ಆನಂತರ ಚಾಕುವಿನಿಂದ ಅವಳ ಗಂಟಲನ್ನು ಸೀಳುವುದನ್ನು ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಆದ ದೃಶ್ಯದಲ್ಲಿ ಕಾಣಬಹುದು. ಇದೆಲ್ಲವೂ ಹಗಲು ಹೊತ್ತಿನಲ್ಲಿಯೇ ತುರ್ತು ವಿಭಾಗದ ರೂಮಿನೊಳಗಡೆ ವೈದ್ಯರು ಮತ್ತು ಕಾವಲುಗಾರರಿಂದ ಕೇವಲ ಮೀಟರ್ ದೂರದಲ್ಲಿ ನಡೆಯಿತು. ದಾಳಿ ಸುಮಾರು 10 ನಿಮಿಷಗಳ ಕಾಲ ನಡೆಯಿತು. ಆಕೆಯನ್ನು ಕೊಂದ ಬಳಿಕ ಅಭಿಷೇಕ್ ತನ್ನ ತನ್ನ ಗಂಟಲನ್ನು ತಾನೇ ಸೀಳಿಕೊಳ್ಳಲು ಪ್ರಯತ್ನಿಸಿ ವಿಫಲನಾಗಿ ಆಸ್ಪತ್ರೆಯಿಂದ ಓಡಿಹೋಗಿದ್ದಾನೆ. ಹೊರಗಡೆ ನಿಲ್ಲಿಸಿದ್ದ ಬೈಕನ್ನು ಸ್ಟಾರ್ಟ್ ಮಾಡಿ ನಾಪತ್ತೆಯಾಗಿದ್ದಾನೆ.
ಕೃತ್ಯ ನಡೆದ ಸಮಯದಲ್ಲಿ, ಇಬ್ಬರು ಭದ್ರತಾ ಸಿಬ್ಬಂದಿಯನ್ನು ಟ್ರಾಮಾ ಸೆಂಟರ್ ಹೊರಗೆ ನಿಯೋಜಿಸಲಾಗಿತ್ತು. ಒಳಗೆ, ವೈದ್ಯರು, ದಾದಿಯರು ಮತ್ತು ವಾರ್ಡ್ ಹುಡುಗರು ಸೇರಿದಂತೆ ಹಲವಾರು ಆಸ್ಪತ್ರೆ ಸಿಬ್ಬಂದಿ ಇದ್ದರು. ಹೀಗಾಗಿ ಯಾರೂ ದಾಳಿಕೋರನನ್ನು ತಡೆಯಲಿಲ್ಲ.
ಆಸ್ಪತ್ರೆಯ ಭದ್ರತೆ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ರೋಗಿಗಳು ಮತ್ತು ಅವರ ಕುಟುಂಬಗಳನ್ನು ಭಯಭೀತರನ್ನಾಗಿಸಿತು. ಟ್ರಾಮಾ ವಾರ್ಡ್‌ನಲ್ಲಿ ದಾಖಲಾಗಿದ್ದ 11 ರೋಗಿಗಳಲ್ಲಿ, ಎಂಟು ಮಂದಿ ಅದೇ ದಿನ ಡಿಸ್ಚಾರ್ಜ್ ಆದರು ಮತ್ತು ಉಳಿದವರು ಮರುದಿನ ಬೆಳಿಗ್ಗೆ ಹೊರಟುಹೋದರು.
ಸಂಧ್ಯಾ ಆಸ್ಪತ್ರೆಗೆ ಬಂದಿದ್ದೇಕೆ?
ಸಂಧ್ಯಾ ಆ ದಿನ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮನೆಯಿಂದ ಹೊರಟು, ಹೆರಿಗೆ ವಾರ್ಡ್‌ನಲ್ಲಿದ್ದ ಸ್ನೇಹಿತನ ಅತ್ತಿಗೆಯನ್ನು ಭೇಟಿ ಮಾಡಲೆಂದು ಬಂದಿದ್ದಳು. ಇದನ್ನು ಮೊದಲೇ ಅರಿತಿದ್ದ ಅಭಿಷೇಕ್ ಕೋಷ್ಟಿ ಮಧ್ಯಾಹ್ನದಿಂದ ಆಸ್ಪತ್ರೆಯ ಸುತ್ತಲೂ ಓಡಾಡುತ್ತಿದ್ದನೆಂದು ವರದಿಯಾಗಿದೆ. ಬಹುಶಃ ಅವಳಿಗಾಗಿ ಕಾಯುತ್ತಿದ್ದ. ಘರ್ಷಣೆ ತಾರಕಕ್ಕೇರುವ ಮೊದಲು ಇಬ್ಬರೂ ಕೊಠಡಿ ಸಂಖ್ಯೆ 22 ರ ಹೊರಗೆ ಸಂಕ್ಷಿಪ್ತವಾಗಿ ಮಾತನಾಡಿದ್ದರು. ಆ ಬಳಿಕ ಆತ ಒಮ್ಮೆಲೆ ಉಗ್ರನಾಗಿ ಆಕೆಯ ಕತ್ತು ಸೀಳಿದ್ದಾನೆ. ಕತ್ತಿನಿಂದ ರಕ್ತ ಒಂದೇ ಸಮನೆ ನೀರಿನಂತೆ ಹರಿದು, ಸಂಧ್ಯಾ ಆಗಲೇ ನಿಧನ ಹೊಂದಿದಳು.
ಮಧ್ಯಾಹ್ನ 3:30 ರ ಸುಮಾರಿಗೆ ಹುಡುಗಿಯ ಕುಟುಂಬಕ್ಕೆ ಮಾಹಿತಿ ನೀಡಲಾಯಿತು. ಅವರು ಆಸ್ಪತ್ರೆಗೆ ತಲುಪುವ ಹೊತ್ತಿನವರೆಗೂ ಆಕೆಯ ಶವ ಇನ್ನೂ ಅಪರಾಧ ನಡೆದ ಸ್ಥಳದಲ್ಲೇ ಇತ್ತು. ಇದರಿಂದ ಕೋಪಗೊಂಡ ಕುಟುಂಬವು ಆಸ್ಪತ್ರೆಯ ಹೊರಗೆ ರಸ್ತೆ ತಡೆ ನಡೆಸಿತು. ರಾತ್ರಿ 10:30 ರ ಹೊತ್ತಿಗೆ ಪ್ರತಿಭಟನೆ ಶಾಂತವಾಯಿತು. ಆದರೆ ಅಧಿಕಾರಿಗಳು ಈ ತಪ್ಪಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡದ ಕಾರಣ ಬೆಳಗಿನ ಜಾವ 2 ಗಂಟೆಗೆ ಕುಟುಂಬಿಕರು ಮತ್ತೆ ಕೋಪಗೊಂಡರು. ಆದರೆ ಆರೋಪಿಯನ್ನು ಬಂಧಿಸುವುದಾಗಿ ತಿಳಿಸಿದ ಬಳಿಕ ಪರಿಸ್ಥಿತಿ ತಿಳಿಯಾಗಿದೆ.