ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಕರಾವಳಿ ಜಿಲ್ಲೆಗಳಿಗೆ ಏಕರೂಪದ ಪ್ರತ್ಯೇಕ ವಲಯ ನಿಯಮಾವಳಿ (ಕೋಸ್ಟಲ್ ಝೋನ್ ರೆಗ್ಯುಲೇಶನ್ಸ್) ರಚಿಸಬೇಕು ಮತ್ತು ಇತ್ತೀಚೆಗೆ ಗ್ರಾಮಪಂಚಾಯತ್ ವ್ಯಾಪ್ತಿಗಳಲ್ಲಿ ಜ್ಯಾರಿಗೊಳಿಸಲಾದ ಸರಕಾರದ ಆದೇಶಗಳನ್ನು ಸರಳೀಕರಣಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದ್ದಾರೆ.
ಅವರು ಮಂಗಳೂರಿನ ಅಶೋಕನಗರದಲ್ಲಿರುವ ಮುಡಾ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಡಾ ವ್ಯಾಪ್ತಿಯಲ್ಲಿ ಜ್ಯಾರಿಗೊಳಿಸಲಾದ ವಲಯ ನಿಯಮಾವಳಿ ಮತ್ತು ಭೂಪರಿವರ್ತನೆ, ಏಕನಿವೇಶನ ವಿನ್ಯಾಸ ಅನುಮೋದನೆ, ಕಟ್ಟಡ ರಚನಾ ಪರವಾನಿಗೆ, ಲೇಔಟ್‌ಗಳ ಬಹುನಿವೇಶನ ಅನುಮೋದನೆ ಮೊದಲಾದ ಕಾನೂನುಗಳಲ್ಲಿ ಕರಾವಳಿ ಜಿಲ್ಲೆಗಳಾದ ದ.ಕ., ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಭೌಗೋಳಿಕವಾಗಿ ಭೂ ಉಪಯೋಗಕ್ಕೆ ಸರಿಹೊಂದುವುದಿಲ್ಲ. ಹಾಗಾಗಿ ನಿಯಮಾವಳಿಗಳಲ್ಲಿ ಸರಳೀಕರಣಗೊಳಿಸಿ ಕಾನೂನಿನ ಚೌಕಟ್ಟಿನೊಳಗೆ ಜನರಿಗೆ ಪ್ರಯೋಜನವಾಗುವ ರೀತಿಯಲ್ಲಿ ವಲಯ ನಿಯಮಾವಳಿಗಳನ್ನು ಪರಿಷ್ಕರಣಗೊಳಿಸಬೇಕು. ಕರಾವಳಿ ಜಿಲ್ಲೆಗಳ ಅಭಿವೃದ್ಧಿಯನ್ನು ಗಮನದಲ್ಲಿರಿಸಿ ಕೆಲವು ಬದಲಾವಣೆಗಳೊಂದಿಗೆ ಪ್ರತ್ಯೇಕ ವಲಯ ನಿಯಮಾವಳಿಗಳನ್ನು ರೂಪಿಸುವಂತೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್, ಸ್ಪೀಕರ್ ಯು.ಟಿ.ಖಾದರ್ ಮತ್ತು ಜಿಲ್ಲೆಯ ಎಲ್ಲಾ ವಿಧಾನ ಪರಿಷತ್, ವಿಧಾನ ಸಭಾ ಸದಸ್ಯರಿಗೆ ಮನವಿ ಸಲ್ಲಿಸಲಾದೆ. ಅಲ್ಲದೆ ತಮ್ಮ ಮನವಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಬೆಂಗಳೂರಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮತ್ತು ಸಚಿವರ ಜೊತೆ ಸಭೆ ನಡೆಸಿದ್ದಾಗಿ ಮಾಹಿತಿ ನೀಡಿದರು.
ಕರಾವಳಿ ಜಿಲ್ಲೆಗಳಲ್ಲಿ ತುಂಡು ಭೂಮಿಗಳು ಹೆಚ್ಚಾಗಿವೆ. ಇದರಿಂದ ಅಕ್ರಮ ಸಕ್ರಮ 94ಸಿಸಿ ಯೋಜನೆಯಡಿಯಲ್ಲಿ ಮಂಜೂರಾದ ಭೂಮಿಗಳಿಗೆ ಗಡಿಗುರುತಿನ ಸಮಸ್ಯೆಗಳು ಇವೆ. ಕರಾವಳಿ ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶಗಳು ಹೆಚ್ಚಾಗಿರುವ ಕಾರಣ ರಸ್ತೆ ಅಗಲೀಕರಣ, ಸೆಟ್ ಬ್ಯಾಕ್, ಅರಣ್ಯ ಮತ್ತು ಇತರ ಭೂಮಿಗಳ ಗಡಿ ಗುರುತು ಮಾಡುವುದು ಕಷ್ಟವಾಗಿದೆ. ಬಡವರಿಗೆ ಮನೆ ನಿರ್ಮಾಣ, ಕನ್ವರ್ಷನ್, ಏಕನಿವೇಶನ ವಿನ್ಯಾಸ ಅನುಮೋದನೆ ನೀಡಲೂ ಸಾಧ್ಯವಾಗುತ್ತಿಲ್ಲ. ಈ ಹಿಂದೆ ಕನ್ವರ್ಷನ್ ಮಾಡಿ ಸ್ಥಳೀಯ ಸಂಸ್ಥೆಗಳಿಂದ ಪರವಾನಿಗೆ ಪಡೆದು ಮನೆ, ಕಟ್ಟಡ ನಿರ್ಮಿಸಿಕೊಂಡಿರುವವರಿಗೆ ಪ್ರಸ್ತುತ ಕಾನೂನು ಅನ್ವಯಿಸಿದ್ದಲ್ಲಿ, ನಿರ್ಮಾಣ ಕಾರ್ಯ ಕುಂಠಿತಗೊಂಡು ಅನಧಿಕೃತ ಕಟ್ಟಡಗಳಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ. ಹಾಗಾಗಿ ಬೆಳವಣಿಗೆಗಳನ್ನು ಗಮನದಲ್ಲಿರಿಸಿ, 18 ಮೀಟರ್, 12 ಮೀಟರ್, 9 ಮೀಟರ್ ರಸ್ತೆ ಅಗಲದಲ್ಲಿ ವಿನಾಯಿತಿ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ ಎಂದರು.
ಹಿಲ್ ಏರಿಯಾ ಮುದ್ರ ಮಟ್ಟದಿಂದ 600 ಮೀಟರ್ ಎತ್ತರದಲ್ಲಿ ಇರಬೇಕೆಂಬ ನಿಯಮ ಸಮುದ್ರವನ್ನು ಹೊಂದಿರುವ ನಮ್ಮ ಜಿಲ್ಲೆಗಳಿಗೆ ಸೂಕ್ತವಾಗಿರುವುದಿಲ್ಲ. ಈ ಜಿಲ್ಲೆಗಳಲ್ಲಿ ನದಿ, ಸಮುದ್ರ, ಮೀಸಲು ಅರಣ್ಯ, ಸಾಮಾಜಿಕ ಅರಣ್ಯ, ಬಫರ್‌ಗಳನ್ನು ಹೊಂದಿರುವುದರಿಂದ ನಿಯಮಗಳಲ್ಲಿ ಸರಳೀಕರಣಗೊಳಿಸಬೇಕಾಕು. ಭೂಅಭಿವೃದ್ಧಿ ಉಪಯೋಗಕ್ಕೆ ಭೂಮಿಯ ಲಭ್ಯತೆ ಕಡಿಮೆ ಇರುವುದರಿಂದ ಹಸಿರು ವಲಯಗಳ ಪ್ರಮಾಣವನ್ನು ಕಡಿಮೆಗೊಳಿಸಿ, ಅಭಿವೃದ್ಧಿಗೆ ಅವಕಾಶ ಕಲ್ಪಿಸಿಕೊಡಬೇಕು.
ಗುಡ್ಡಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಹಾಲಿ ಲಭ್ಯವಿರುವ ರಸ್ತೆಯನ್ನೇ ಕಾದಿರಿಸಿ ಕೆಲವು ಕಡೆ ಮೆಟ್ಟಿಲುಗಳ ಮತ್ತು ಕಾಲುದಾರಿಗಳ ಉಪಯೋಗಕ್ಕೆ ಅವಕಾಶ ಕಲ್ಪಿಸಬೇಕು. ಯೋಜನಾ ಪ್ರದೇಶ ಘೋಷಣೆಗೆ ಮುಂಚಿತವಾಗಿ ಕನ್ವರ್ಷನ್ ಮಾಡಿಕೊಂಡು ಮನೆ ನಿರ್ಮಾಣ, ಸೈಟ್ ಮಾರಾಟ ಮಾಡಿದವರಿಗೆ ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸಿ, ಒಂದು ಬಾರಿ ದಂಡನೆ ಹಾಕಿ ಸರಿಪಡಿಸಿಕೊಳ್ಳುವ ಅವಕಾಶವನ್ನು ಒಂದು ಬಾರಿಯಾದರೂ ನೀಡಬೇಕು. ಇತ್ತೀಚೆಗೆ ಪ್ರಾಧಿಕಾರ ವ್ಯಾಪ್ತಿಗೆ ಒಳಪಡದ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಜ್ಯಾರಿಗೊಳಿಸಲಾದ ಕನ್ವರ್ಷನ್, 9/11 ನಿವೇಶನ ವಿನ್ಯಾಸ, ಕಟ್ಟಡ ನಿರ್ಮಾಣ ಅನುಮೋದನೆಗೆ ವಿಧಿಸಿರುವ ನಿಯಮಗಳಲ್ಲಿ ಸರಳೀಕರಣಗೊಳಿಸಬೇಕು ಎಂದು ಮನವಿ ಮಾಡಲಾಗಿದೆ ಎಂದರು.
ಇಂತಹ ಪ್ರಮುಖ ಸಮಸ್ಯೆಗಳನ್ನು ಹೊಂದಿರುವ ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕವಾದ ವಲಯ ನಿಯಾವಳಿಗಳನ್ನು ರೂಪಿಸುವಂತೆ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಮೂಡಬಿದ್ರೆ, ಪುತ್ತೂರು, ಸುಳ್ಯ ಮತ್ತು ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಉಡುಪಿ ಜಿಲ್ಲೆಯ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ, ಕಾಪು, ಕುಂದಾಪುರ ನಗರ ಯೋಜನಾ ಪ್ರಾಧಿಕಾರಗಳ ಅಧ್ಯಕ್ಷರು ಮತ್ತು ಸದಸ್ಯರುಗಳ ಒಕ್ಕೂಟವನ್ನು ರಚಿಸಲಾಗಿದ್ದು, ಮಾನ್ಯ ಮುಖ್ಯಮಂತ್ರಿ ಮತ್ತು ನಗರಾಭಿವೃದ್ಧಿ ಸಚಿವರ ಬಳಿ ನಿಯೋಗವನ್ನು ತೆಗೆದುಕೊಂಡು ಹೋಗಿ ಮನವಿ ಮಾಡಲಿದ್ದೇವೆ ಅಲ್ಲದೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ಸದಾಶಿವ ಉಳ್ಳಾಲ್ ನುಡಿದರು.
ಬಿಜೆಪಿ ಆರೋಪ ಅಲ್ಲಗಳೆದ ಉಳ್ಳಾಲ್:
ಮಂಗಳೂರಿನ ಮೂಡ ಕಚೇರಿಯಲ್ಲಿ ಯಾವುದೇ ಕೆಲಸ ನಡೆಯುತ್ತಿಲ್ಲ, ಕಡತಗಳಿಗೆ ಬೆಂಗಳೂರಿನಲ್ಲಿ ಸಹಿ ಹಾಕಲಾಗುತ್ತಿದೆ ಎಂಬ ಬಿಜೆಪಿ ಆರೋಪವನ್ನು ಸದಾಶಿವ ಉಳ್ಳಾಲ್ ಅಲ್ಲಗಳೆದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬಂಟ್ವಾಳ ನಗರಾಭಿವೃದ್ಧಿ ಅಧ್ಯಕ್ಷ ಬೇಬಿ ಕುಂದರ್, ಸುಳ್ಯ ವಲಯ ನಗರ ಯೋಜನಾ ಪ್ರಾಧಿಕಾರದ ಕೆ.ಎಂ. ಮುಸ್ತಫಾ, ಸದಸ್ಯರಾದ ಬಂಟ್ವಾಳದ ಮನೋಹರ ನೇರಂಬೊಲ್, ಹರೀಸ್ ಬಿ.ಸಿ. ರೋಡ್, ಅಬ್ದುಕ್ ರಝಾಕ್, ಮಂಗಳೂರು ಪ್ರಾಧಿಕಾರದ ನೀರಜ್ ಪಾಲ್, ಅಬ್ದುಲ್ ಜಲೀಲ್, ಸಬಿತಾ ಮಿಸ್ಕಿತ್ ಮತ್ತಿತರರಿದ್ದರು.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝