ಮೂಡಬಿದ್ರೆ ಶಾಸಕರ ಕ್ಷೇತ್ರದಲ್ಲಿ ಕುಸಿದು ಬೀಳಲಿರುವ ಮನೆ: ದಿಕ್ಕೆಟ್ಟ ಒಂಟಿ ವೃದ್ಧೆಯ ಶೋಚನೀಯ ಕತೆ!

ಮೂಲ್ಕಿ: ಮೂಲ್ಕಿ- ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ್‌ ಕೋಟ್ಯಾನ್‌ ಕ್ಷೇತ್ರದಲ್ಲಿ ಇಂದೋ ನಾಳೆಯೋ ಕುಸಿಯವ ಹಂತದಲ್ಲಿರುವ ಮನೆಯೊಂದರಲ್ಲಿ ಜೀವವನ್ನು ಕೈಯಲ್ಲಿ ಹಿಡಿದು ಬದುಕುತ್ತಿರುವ ಒಂಟಿ ವೃದ್ಧೆಯ ಕಣ್ಣೀರ ಕಥೆ ಎಂಥವರ ಕಲ್ಲು ಹೃದಯವನ್ನೂ ಕರಗಿಸುವಂತಿದೆ.


ಹೌದು ಇದು ಮೂಡಬಿದ್ರೆಯ ಪುತ್ತಿಗೆ ಗ್ರಾಮದ ಕುಲ್ಲಂಗಾಲು ದಿವಂಗತ ವೀರಪ್ಪ ಮೂಲ್ಯ ಅವರ ಪತ್ನಿ ಬೇಬಿ ಮೂಲ್ಯ ಎಂಬ ವೃದ್ಧೆಯ ಕಥೆ. ಒಂದು ಕಾಲದಲ್ಲಿ ಮನೆಗೆ ಬಂದವರನ್ನು ಬರಿಗೈಯಲ್ಲಿ ಕಳಿಸದ ಎಲ್ಲರ ಮೆಚ್ಚಿನ ಬೇಬಿ ಅಕ್ಕ ಇಂದು ತನಗೆ ಆಸರೆಯಾಗಿದ್ದ ಗಂಡ ವೀರಪ್ಪ ಮೂಲ್ಯರನ್ನೂ ಕಳೆದುಕೊಂಡು ಒಂಟಿಯಾಗಿ ದಿನದೂಡುತ್ತಿದ್ದಾರೆ. ಇವರ ಮನೆ ಸಂಪೂರ್ಣವಾಗಿ ಕುಸಿಯುವ ಹಂತದಲ್ಲಿದ್ದು, ಜೋರು ಮಳೆ ಬಂದಾಗ ದೇವರ ಮೇಲೆ ಭಾರ ಹಾಕಿ ಗುಟುಕು ಜೀವವನ್ನು ಉಳಿಸಲು ಹೆಣಗಾಡುತ್ತಿದ್ದಾರೆ.


ಬೇಬಿ ಅಕ್ಕನ ಗಂಡ ವೀರಪ್ಪ ಮೂಲ್ಯ ಇತ್ತೀಚೆಗಷ್ಟೇ ತೀರಿ ಹೋಗಿದ್ದು, ಆ ಬಳಿಕ ಬೇಬಿ ಅಕ್ಕ ಒಂಟಿಯಾದರು. ಇವರು ವೀರಪ್ಪ ಮೂಲ್ಯರಿಗೆ ಎರಡನೇ ಹೆಂಡತಿ. ವೀರಪ್ಪ ಮೂಲ್ಯರ ಮೊದಲ ಪತ್ನಿಗೆ ಮಕ್ಕಳಿದ್ದು, ಅವರು ಅವರಷ್ಟಕ್ಕೆ ಇದ್ದಾರೆ. ದುಡಿಯಲಾಗದೆ ನೆರೆಹೊರೆಯವರ ಆಸರೆಯಲ್ಲಿ ಬದುಕುತ್ತಿರುವ ತನಗೆ ಯಾರೂ ದಿಕ್ಕಿಲ್ಲ ಎಂದು ಕಣ್ಣೀರಿಡುತ್ತಿದ್ದಾರೆ.
ಇವರ ಮನೆಯ ಸ್ಥಿತಿಯಂತೂ ಶೋಚನೀಯವಾಗಿದೆ. ಮಣ್ಣಿನ ಗೋಡೆ ಇನ್ನೇನು ಕುಸಿದು ಬೀಳುವ ಹಂತದಲ್ಲಿದ್ದು ಮಾಡಿನ ಹೆಂಚು ಉದುರಿ ಹೋಗಿದೆ. ಮನೆ ಮೇಲೆ ಟರ್ಪಾಲು ಹಾಕಲಾಗಿದ್ದು ಗಾಳಿ ಬಂದಾಗ ಮಳೆ ನೀರು ಮನೆಯೊಳಗಡೆಯೇ ಬೀಳುತ್ತದೆ. ಇನ್ನೂ ಜೋರು ಮಳೆ ಬಂದರೆ ಏನಾಗುತ್ತೋ ಗೊತ್ತಿಲ್ಲ ಎಂದು ಬೇಕಿ ಕಣ್ಣೀರು ಹರಿಸುತ್ತಾ ಆಗಸದತ್ತ ಶೂನ್ಯ ನೋಟ ಬೀರುತ್ತಾರೆ.

ಉಮಾನಾಥ್‌ ಕೋಟ್ಯಾನ್‌ ಕ್ಷೇತ್ರ:
ಪುತ್ತಿಗೆ ಗ್ರಾಮದ ಕುಲ್ಲಂಗಾಲು ಗ್ರಾಮದಲ್ಲಿರುವ ಬೇಬಿ ಅಕ್ಕನ ಮನೆ ಉಮಾನಾಥ್‌ ಕೋಟ್ಯಾನ್‌ ಅವರ ಕ್ಷೇತ್ರದಲ್ಲಿ ಬರುತ್ತದೆ. ಅಭಿವೃದ್ಧಿಯ ಹರಿಕಾರನೆಂದು ಹೆಸರು ಪಡೆದಿರುವ ಉಮಾನಾಥ್‌ ಕೋಟ್ಯಾನ್‌ ಅವರು ಕೂಡಲೇ ಬೇಬಿ ಅಕ್ಕನ ದುಸ್ಥಿತಿಯ ಮಾಹಿತಿ ಪಡೆದು ಅವರಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡುವುದಲ್ಲದೆ ಅವರಿಗೆ ದಿನ ನಿತ್ಯದ ಅಗತ್ಯಗಳನ್ನು ಪೂರೈಸಲು ಸಹಕರಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಕುಲಾಲ ಸಂಘಟನೆಗಳು ಎಲ್ಲಿವೆ?
ಕೈತುತ್ತಿಗೂ ಪರದಾಡುತ್ತ ತಾವು ಸಾಕಿರುವ ಹಸು, ಬೆಕ್ಕು, ನಾಯಿಗಳೊಂದಿಗೆ ದಿನದೂಡುತ್ತಿರುವ ಬೇಬಿ ಅಕ್ಕನಿಗೆ ನೆರವು ನೀಡಲು ಕುಲಾಲ ಸಂಘಟನೆಗಳ ನಾಯಕರು ಮುಂದೆ ಬರಬೇಕಿದೆ. ಪ್ರಚಾರದಲ್ಲೇ ಕಾಲ ಕಳೆಯುವ ಸಂಘಟನೆಗಳ ನಾಯಕರು ಒಮ್ಮೆ ಇತ್ತ ತಿರುಗಿ ನೋಡಬೇಕಾದ ತುರ್ತು ಅಗತ್ಯವಿದೆ.

error: Content is protected !!