ಉಜಿರೆ: ತನ್ನ ಬೈಕ್ ನಲ್ಲಿ ನಾಯಿಯನ್ನು ಕೂರಿಸಿ ಸಂಚರಿಸುತ್ತಿದ್ದ ಯುವಕ ಶಿವರಾಜ್ ಮತ್ತಿಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಟೋಯಿಂಗ್ ವಾಹನದಲ್ಲಿ ಚಾಲಕನಾಗಿ ಕೃಷಿ, ಕೂಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ ಶಿವರಾಜ್ ತನ್ನ ಪ್ರೀತಿಯ ಶ್ವಾನವನ್ನು ಎಲ್ಲೆಡೆ ಸುತ್ತಾಡಿಸುತ್ತಿದ್ದರು. ಬೆಳಗ್ಗೆ, ಸಂಜೆ ಎರಡು ಹೊತ್ತು ತನ್ನ ಪ್ರೀತಿಯ ನಾಯಿಯೊಂದಿಗೆ ನಗರವನ್ನು ಸುತ್ತುತ್ತಿದ್ದ ಇವರು ಚಾರ್ಲಿ ಸಿನಿಮಾದ ಧರ್ಮ ಮತ್ತು ಚಾರ್ಲಿ ಎಂದೇ ಪ್ರಸಿದ್ಧಿ ಪಡೆದಿದ್ದರು.
ಇವರು ನಾಯಿಯೊಂದಿಗೆ ಬೈಕ್ ನಲ್ಲಿ ಸಂಚರಿಸುತ್ತಿದ್ದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಕೂಡ ಆಗಿತ್ತು. ಶಿವರಾಜ್ ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣವೇನೆಂದು ತಿಳಿದುಬಂದಿಲ್ಲ. ಈ ಹಿಂದೆ ಕೂಡ ಒಂದೆರಡು ಬಾರಿ ಶಿವರಾಜ್ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಇದ್ದ ಒಬ್ಬ ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.