ಉಡುಪಿ ಶಾಲೆಗೆ ಬಾಂಬ್‌ ಬೆದರಿಕೆ ಹಾಕಿದ್ದ ಹುಡುಗಿ ಸೆರೆ

ಉಡುಪಿ: ಶಾಲೆ, ಆಸ್ಪತ್ರೆ ಮತ್ತಿತರ ಕಡೆಗಳಿಗೆ ಬಾಂಬ್ ಬೆದರಿಕೆಯ ಇಮೇಲ್‌ಗಳನ್ನು ಕಳುಹಿಸಿದ್ದ ಚೈನ್ನೈ ಮೂಲದ ಇಂಜಿನಿಯರ್ ಯುವತಿಯನ್ನು ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಉಡುಪಿಯ ಶಾಲೆಗೂ ಬೆದರಿಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಆಕೆಯನ್ನು ಉಡುಪಿ ಪೊಲೀಸರು ತಮ್ಮ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್‌ಗೆ ಜೂನ್ 16 ರಂದು ಹುಸಿ ಬಾಂಬ್ ಬೆದರಿಕೆಯ ಇಮೇಲ್ ಬಂದಿದ್ದು, ಇದರಲ್ಲಿ ‘ನಿಮ್ಮ ಶಾಲೆಯಲ್ಲಿ ಬಾಂಬ್ ಸ್ಪೋಟಿಸಿದರೆ ಮಕ್ಕಳು ಸಾಯುತ್ತಾರೆ. ಮಕ್ಕಳು ಸತ್ತರೆ ಮಾತ್ರ ಪೋಷಕರು ಪ್ರತಿಭಟನೆ ಮಾಡುತ್ತಾರೆ ಮತ್ತು ಪೊಲೀಸರು ಸರಿಯಾದ ತನಿಖೆ ನಡೆಸಿ ಹೈದರಾಬಾದಿನ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಒದಗಿಸುತ್ತಾರೆ ಎಂದು ಬರೆಯಲಾಗಿತ್ತು. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಗುಜರಾತ್ ಸಹಿತ ಹಲವು ರಾಜ್ಯಗಳಲ್ಲಿ ಇದೇ ರೀತಿಯ ಇಮೇಲ್ ಸಂದೇಶ ಕಳುಹಿಸಿ ಶಾಲೆಗಳು, ಆಸ್ಪತ್ರೆಗಳು ಮತ್ತು ಕ್ರೀಡಾಂಗಣಗಳಿಗೆ ಬಾಂಬ್ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಗುಜರಾತಿನ ಅಹಮದಾಬಾದ್ ಪೊಲೀಸರು ಚೆನ್ನೈ ಮೂಲದ ಆರೋಪಿ ಇಂಜಿನಿಯರ್ ಯುವತಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ಉಡುಪಿ ಶಾಲೆಯ ಬಾಂಬ್ ಬೆದರಿಕೆ ಪ್ರಕರಣದ ತನಿಖೆಗಾಗಿ ಆರೋಪಿಯನ್ನು ಹೆಚ್ಚಿನ ತನಿಖೆಗಾಗಿ ನಮ್ಮ ಕಸ್ಟಡಿಗೆ ನೀಡುವಂತೆ ಅಹಮದಾಬಾದ್‌ ಪೊಲೀಸರಿಗೆ ಪತ್ರ ಬರೆಯಲಾಗುವುದು. ಅವರ ತನಿಖೆ ಮುಗಿದ ಬಳಿಕ ಆರೋಪಿಯನ್ನು ನಮ್ಮ ವಶಕ್ಕೆ ನೀಡುವ ಸಾಧ್ಯತೆ ಇದೆ. ಅದರಂತೆ ಉಡುಪಿಯ ಪ್ರಕರಣದ ತನಿಖೆಯನ್ನು ನಡೆಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!